ADVERTISEMENT

ಸಾಫ್ಟ್‌ವೇರ್: ರೂ.4 ಲಕ್ಷ ಕೋಟಿ ರಫ್ತು ಗುರಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಬೆಂಗಳೂರು: `ಕಳೆದ ಹಣಕಾಸು ವರ್ಷದಲ್ಲಿ ರಾಜ್ಯದಿಂದ ರೂ.1.35 ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್ ರಫ್ತು ಮಾಡಲಾಗಿದೆ.  2020ರ ವೇಳೆಗೆ ಇದನ್ನು ರೂ.4 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ನಿಗದಿಪಡಿಸಲಾಗಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬುಧವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.

ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ರಾಜ್ಯದ ಪಾಲು ಶೇ 40ರಷ್ಟಿದೆ. ಮುಂದಿನ 8 ವರ್ಷಗಳಲ್ಲಿ ಈ ಪಾಲನ್ನು ಗಣನೀಯವಾಗಿ ಹೆಚ್ಚಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ (ಐ.ಟಿ)  ಉದ್ಯೋಗಾ     ವಕಾಶವನ್ನು  ಈಗಿರುವ 8 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸುವ ಗುರಿಯೂ ಇದೆ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿಯೇ ಹಲವು ಯೋಜನೆಗಳನ್ನು ಮೊದಲು ಜಾರಿಗೊಳಿಸಿದ ಕೀರ್ತಿ ರಾಜ್ಯದ್ದು. ಸೆಮಿಕಂಡೆಕ್ಟರ್, ಅನಿಮೇಷನ್, ಗೇಮಿಂಗ್ ಮತ್ತು ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ನೀತಿಗಳನ್ನು ಪ್ರಕಟಿಸಲಾಗಿದೆ.
 

ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಬೆಂಗಳೂರು ಪ್ರಪಂಚದಲ್ಲಿಯೇ 16ನೇ ಸ್ಥಾನದಲ್ಲಿದೆ ಎಂದು ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಾನ್ಯತೆ ನೀಡಿವೆ ಎಂದು ವಿವರ ನೀಡಿದರು.

ಜೂನ್‌ನಲ್ಲಿ ನಡೆದ ಎರಡನೇ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್-2) ರೂ.7.6 ಲಕ್ಷ ಕೊಟಿ ಮೊತ್ತದ 712 ಯೋಜನೆಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಇತ್ಯರ್ಥ ಮತ್ತು ಜಾರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಪ್ರತ್ಯೇಕ ವೆಬ್‌ತಾಣ ಅಭಿವೃದ್ಧಿಪಡಿಸಿದೆ. ಸಾರ್ವಜನಿಕರು ಮತ್ತು ಹೂಡಿಕೆದಾರರು ಈ ವೆಬ್ ತಾಣದಲ್ಲಿ ಯೋಜನೆಗಳ ಪ್ರತಿ ಹಂತದ ಸಮಗ್ರ ಮಾಹಿತಿ ಪಡೆಯಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT