ADVERTISEMENT

ಸಾಲದ ಹೊರೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2011, 19:30 IST
Last Updated 15 ಆಗಸ್ಟ್ 2011, 19:30 IST
ಸಾಲದ ಹೊರೆ ಹೆಚ್ಚಳ
ಸಾಲದ ಹೊರೆ ಹೆಚ್ಚಳ   

ನವದೆಹಲಿ (ಪಿಟಿಐ): ವಿಶ್ವದಾದ್ಯಂತ ಸರ್ಕಾರಗಳ ಸಾಲದ ಹೊರೆಯು 41 ಲಕ್ಷ ಕೋಟಿ ಡಾಲರ್‌ಗಳಿಗೆ (ರೂ 1845 ಲಕ್ಷ ಕೋಟಿ) ಹೆಚ್ಚಳಗೊಂಡಿದ್ದು, ಇದು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ  69ರಷ್ಟಾಗಿದೆ.

ಸತ್ವಹೀನ ಆರ್ಥಿಕ ಪ್ರಗತಿ ಮತ್ತು ಕೈಗಾರಿಕಾ ರಂಗಕ್ಕೆ ಕೊಡ ಮಾಡಿದ ಆರ್ಥಿಕ ಉತ್ತೇಜನಾ ಕೊಡುಗೆಗಳಿಂದಾಗಿ ಸರ್ಕಾರಗಳ ಸಾಲದ ಹೊರೆ ಗಮನಾರ್ಹವಾಗಿ ಹೆಚ್ಚಳಗೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2008ರ ನಂತರದ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಪಾರಾಗಲು ಮತ್ತು ತಮ್ಮ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಲು ಬಹುತೇಕ ದೇಶಗಳು ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳು ಭಾರಿ ಪ್ರಮಾಣದ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದ್ದವು. ಇದರಿಂದಾಗಿ 2010ರ ಅಂತ್ಯಕ್ಕೆ, ಸರ್ಕಾರಿ ಸಾಲ ಪತ್ರಗಳನ್ನು ಮಾರಾಟ ಮಾಡುವ ಬೆಲೆ ಆಧರಿಸಿ ಹೇಳುವುದಾದರೆ ಸರ್ಕಾರಗಳು 41 ಲಕ್ಷ ಕೋಟಿ ಡಾಲರ್‌ಗಳಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿವೆ. ಇದು ಜಾಗತಿಕ `ಜಿಡಿಪಿ~ಯ ಶೇ 69ರಷ್ಟಿದೆ. ಇದು 2000ರಲ್ಲಿನ ಮಟ್ಟಕ್ಕಿಂತ ಶೇ 23ರಷ್ಟು ಹೆಚ್ಚಿಗೆ ಇದೆ.

ಕೇವಲ ಎರಡು ವರ್ಷಗಳಲ್ಲಿ ಸರ್ಕಾರಗಳ ಸಾಲದ ಪ್ರಮಾಣ 9 ಲಕ್ಷ ಕೋಟಿ ಡಾಲರ್‌ಗಳಷ್ಟು ಏರಿಕೆಯಾಗಿದೆ (ರೂ 405 ಲಕ್ಷ ಕೋಟಿ) ಎಂದು ಜಾಗತಿಕ ಸಲಹಾ ಸಂಸ್ಥೆ ಮ್ಯಾಕ್‌ಕಿನ್ಸೆ ತಿಳಿಸಿದೆ.ವಿಶ್ವದಾದ್ಯಂತ ಸರ್ಕಾರಿ ಸಾಲವು 2008ರಲ್ಲಿ 32 ಲಕ್ಷ ಕೋಟಿ ಡಾಲರ್‌ಗಳಷ್ಟಿತ್ತು. ಆರ್ಥಿಕ ಉತ್ತೇಜನಾ ಕೊಡುಗೆಗಳಿಂದ ಮತ್ತು ದುರ್ಬಲ ಆರ್ಥಿಕ ಪ್ರಗತಿಯ ಕಾರಣಕ್ಕೆ  ಬಜೆಟ್ ಕೊರತೆ ಹೆಚ್ಚಿದೆ. ವರಮಾನ ವೃದ್ಧಿ ಪ್ರಯತ್ನಗಳಿಲ್ಲದೇ ಸರ್ಕಾರಗಳ ಸಾಲ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಕಳೆದ 10 ವರ್ಷಗಳಲ್ಲಿ ವಿಶ್ವದಾದ್ಯಂತ ಒಟ್ಟಾರೆ ಸಾಲ ಬಾಕಿ ಪ್ರಮಾಣವು ಎರಡು ಪಟ್ಟುಗಿಂತ 158 ಲಕ್ಷ ಕೋಟಿ ಡಾಲರ್‌ಗಳಷ್ಟು  (ರೂ 7110 ಲಕ್ಷ ಕೋಟಿ) ಹೆಚ್ಚಾಗಿದೆ. 2000ರಲ್ಲಿ ಇದು 78 ಲಕ್ಷ ಕೋಟಿಗಳಷ್ಟಿತ್ತು.

ಸಾಲದ ಪ್ರಮಾಣವು `ಜಿಡಿಪಿ~ಗಿಂತ ಹೆಚ್ಚು ತ್ವರಿತವಾಗಿ ಹೆಚ್ಚಾಗುತ್ತಿದೆ. ಜಾಗತಿಕ ಸಾಲ ಮತ್ತು `ಜಿಡಿಪಿ~ ಅನುಪಾತವು ಹೆಚ್ಚುತ್ತಲೇ ಸಾಗಿದೆ ಎಂದೂ ಮ್ಯಾಕಿನ್ಸೆ ವರದಿ ತಿಳಿಸಿದೆ.ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ವಿತ್ತೀಯ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿ ಇರಿಸಲು ಹಲವು ವರ್ಷಗಳ ಕಾಲ ವೆಚ್ಚಗಳಿಗೆ ಕಡ್ಡಾಯವಾಗಿ ಕಡಿವಾಣ ವಿಧಿಸಲು ಕ್ರಮ ಕೈಗೊಳ್ಳಬೇಕಾಗಿದೆ  ಎಂದೂ ವರದಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.