ADVERTISEMENT

ಸುವರ್ಣಭೂಮಿ ಫಲಾನುಭವಿ ಮಾಹಿತಿ: ಸ್ಯಾಟಲೈಟ್ ಮೊಬೈಲ್ ಬಳಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 19:30 IST
Last Updated 8 ಆಗಸ್ಟ್ 2011, 19:30 IST
ಸುವರ್ಣಭೂಮಿ ಫಲಾನುಭವಿ  ಮಾಹಿತಿ: ಸ್ಯಾಟಲೈಟ್ ಮೊಬೈಲ್ ಬಳಕೆ
ಸುವರ್ಣಭೂಮಿ ಫಲಾನುಭವಿ ಮಾಹಿತಿ: ಸ್ಯಾಟಲೈಟ್ ಮೊಬೈಲ್ ಬಳಕೆ   

ಕೊಪ್ಪಳ: ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಮಾಹಿತಿಯನ್ನು ಕರಾರುವಾಕ್ಕಾಗಿ ದಾಖಲಿಸುವ ಸಲುವಾಗಿ ಇಲ್ಲಿನ ತೋಟಗಾರಿಕೆ ಇಲಾಖೆಗೆ ಉಪಗ್ರಹ ಸಹಾಯದಿಂದ ಕಾರ್ಯ ನಿರ್ವಹಿಸುವ ಮೊಬೈಲ್ ಸೆಟ್‌ಗಳನ್ನು (ಸ್ಯಾಟಲೈಟ್ ಮೊಬೈಲ್ ಸೆಟ್) ಒದಗಿಸಲಾಗಿದೆ.

ಸದ್ಯ ಸುವರ್ಣಭೂಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ವೈಯಕ್ತಿಕ ಹಾಗೂ ಜಮೀನಿನ ಮಾಹಿತಿಯನ್ನು ಈ ಮೊಬೈಲ್‌ಗಳಲ್ಲಿ ಅಳವಡಿಸಲಾಗುತ್ತಿದ್ದು, ಯಾವುದೇ ತರಹ ಪುನರಾವರ್ತನೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಜಿಪಿಎಸ್ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುವ ಇಂತಹ ಮೊಬೈಲ್‌ಗಳ 20 ಸೆಟ್‌ಗಳನ್ನು ಜಿಲ್ಲೆಗೆ ನೀಡಲಾಗಿದೆ. ಜಿಲ್ಲೆಯಲ್ಲಿನ ಸಹಾಯಕ ತೋಟಗಾರಿಕಾ ಅಧಿಕಾರಿಗಳಿಗೆ ಈ ಸೆಟ್‌ಗಳನ್ನು ನೀಡಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಎಸ್.ಕೆ.ಪೊಲೀಸ್ ಪಾಟೀಲ `ಪ್ರಜಾವಾಣಿ~ಗೆ ಹೇಳಿದರು.

ಫಲಾನುಭವಿಯೊಬ್ಬರ ವೈಯಕ್ತಿಕ ಮಾಹಿತಿಯನ್ನು ಈ ಮೊಬೈಲ್ ಸೆಟ್‌ಗೆ ಅಳವಡಿಸಲಾಗುತ್ತದೆ. ನಂತರ ಸಂಬಂಧಪಟ್ಟ ಫಲಾನುಭವಿಯ ಜಮೀನಿನ ನಾಲ್ಕೂ ದಿಕ್ಕುಗಳಿಂದ ಈ ಮೊಬೈಲ್ ಬಳಸಿ ಛಾಯಾಚಿತ್ರ ತೆಗೆದುಕೊಳ್ಳಲಾಗುತ್ತದೆ. ನಂತರ, ಸದರಿ ಜಮೀನಿನ ಮಧ್ಯ ಭಾಗದಲ್ಲಿ ನಿಂತು ಮತ್ತೊಮ್ಮೆ ಕ್ಲಿಕ್ ಮಾಡಿದಾಗ ಮಾತ್ರ ಇಡೀ ಜಮೀನಿನ ಚಿತ್ರ ಮೊಬೈಲ್ ಪರದೆಯಲ್ಲಿ ಮೂಡುತ್ತದೆ ಎಂದು ಅವರು ವಿವರಿಸುತ್ತಾರೆ.

ಯಾವುದೇ ಜಮೀನಿನಲ್ಲಿ ಛಾಯಾಚಿತ್ರ ತೆಗೆದ ಸಂದರ್ಭದಲ್ಲಿ ಆ ಜಮೀನಿಗೆ ಸಂಬಂಧಪಟ್ಟ ರೇಖಾಂಶ ಮತ್ತು ಅಕ್ಷಾಂಶಗಳ ಸಮೇತ ಮಾಹಿತಿ ದಾಖಲಾಗುತ್ತದೆ. ಹೀಗಾಗಿ ಇಲಾಖೆಗೆ ತಪ್ಪು ಮಾಹಿತಿ ನೀಡಿ, ಪ್ರೋತ್ಸಾಹಧನ ದುರುಪಯೋಗಪಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸುವರ್ಣ ಭೂಮಿ ಯೋಜನೆಯಡಿ ಮೊದಲ ಕಂತಿನ ಐದು ಸಾವಿರ ರೂಪಾಯಿಗಳನ್ನು ನೀಡಿದ ನಂತರ ಫಲಾನುಭವಿಯ ಜಮೀನಿನ ಛಾಯಾಚಿತ್ರ ತೆಗೆದುಕೊಂಡು, ಮೊಬೈಲ್‌ನಲ್ಲಿ ಸಂಗ್ರಹಿಸಲಾಗುವುದು. ಎರಡನೇ ಕಂತಿನ ಹಣ ಬಿಡುಗಡೆ ಮಾಢುವ ಸಂದರ್ಭದಲ್ಲಿ ಜಮೀನಿನಲ್ಲಿ ಕೈಗೊಂಡ ಕಾರ್ಯವನ್ನು ಪರಿಶೀಲಿಸಿ, ಈಗಾಗಲೇ ಸಂಗ್ರಹಗೊಂಡಿರುವ ಜಮೀನಿನವ ವಿವರಗಳೊಂದಿಗೆ ತಾಳೆ ನೋಡಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಫಲಾನುಭವಿಗಳ ಕುರಿತ ಮಾಹಿತಿ ಸಂಗ್ರಹದ ಜೊತೆಗೆ, ಇಲಾಖೆಯ ಸಿಬ್ಬಂದಿಯ ಮೇಲೆ ನಿಗಾ ಇಡಲು ಸಹ ಈ ಸೆಟ್‌ಗಳನ್ನು ಉಪಯೋಗಿಸಬಹುದಾಗಿದೆ. ಅಧಿಕಾರಿಯೊಬ್ಬ ಜಿಲ್ಲೆಯ ಯಾವುದೇ ಸ್ಥಳದಲ್ಲಿದ್ದರೂ ಮೊಬೈಲ್‌ನಲ್ಲಿ ಸಂಬಂಧಪಟ್ಟ ರಸ್ತೆ, ಹಳ್ಳ ಹಾಗೂ ಇತರ ಪ್ರಮುಖ ಕಟ್ಟಡಗಳ ಕುರಿತು ಮಾಹಿತಿ ಹಾಗೂ ನಕಾಶೆ ಮೂಡುತ್ತದೆ. ಮೇಲಧಿಕಾರಿಗಳು ಕೇಳಿದ ತಕ್ಷಣ ಹಲವಾರು ವಿವರಗಳನ್ನು ಒಳಗೊಂಡ ನಕಾಶೆಯನ್ನು ಸೆಟ್ ಮೂಲಕ ಕಳಿಸಬಹುದಾಗಿದೆ.

ಯಾವುದೋ ಒಂದು ಸ್ಥಳದಲ್ಲಿದ್ದು, ಇನ್ನಾವುದೋ ತೋಟದಲ್ಲಿ ಇರುವುದಾಗಿ ಹೇಳಿ ಮೇಲಧಿಕಾರಿಗಳ ದಾರಿ ತಪ್ಪಿಸಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ ಎಂದೂ ಅವರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.