ADVERTISEMENT

ಸುಸ್ಥಿರ ಅಭಿವೃದ್ಧಿಗೆ ಆದ್ಯತೆ: ಅಮಿತಾಭ್‌ ಕಾಂತ್

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಆಕ್ಸೆಂಚರ್‌ ಸ್ಟ್ರಾಟೆಜಿಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ ಪ್ರಭಾಕರ್‌, ಬೆಮೆಲ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಹೋಟಾ, ಒಎನ್‌ಜಿಸಿ ಸಿಎಂಡಿ ಶಶಿ ಶಂಕರ್‌ ಮತ್ತು ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯ ಅಧಿಕಾರಿ ಯೂರಿ ಅಫಾನ್‍ಸೀವ್ ಅವರು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಯ ಕುರಿತ ನೀಲನಕ್ಷೆ ಬಿಡುಗಡೆ ಮಾಡಿದರು
ಆಕ್ಸೆಂಚರ್‌ ಸ್ಟ್ರಾಟೆಜಿಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ ಪ್ರಭಾಕರ್‌, ಬೆಮೆಲ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಹೋಟಾ, ಒಎನ್‌ಜಿಸಿ ಸಿಎಂಡಿ ಶಶಿ ಶಂಕರ್‌ ಮತ್ತು ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯ ಅಧಿಕಾರಿ ಯೂರಿ ಅಫಾನ್‍ಸೀವ್ ಅವರು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಯ ಕುರಿತ ನೀಲನಕ್ಷೆ ಬಿಡುಗಡೆ ಮಾಡಿದರು   

ಬೆಂಗಳೂರು: ‘ದೇಶದ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ’ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಮಿತಾಭ್‌ ಕಾಂತ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮುಕ್ತಾಯಗೊಂಡ 13ನೇ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್‍ವರ್ಕ್ ಇಂಡಿಯಾ (ಜಿಸಿಎನ್‍ಐ) ಸಮಾವೇಶದಲ್ಲಿ, ವಿಡಿಯೊ ಕಾನ್ಫರೆನ್ಸ್‌ ಮೂಲಕ ದೇಶದ ಪ್ರಮುಖ ಕಂಪನಿಗಳ ಸಿಇಒ ಮತ್ತು ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಸರ್ಕಾರ ದೃಢ ವಿಶ್ವಾಸ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸುಸ್ಥಿರ ಅಭಿವೃದ್ಧಿ ನಮ್ಮ ದೇಶಕ್ಕೆ ಅತ್ಯಂತ ಮಹತ್ವದ್ದು ಎಂದು ಭಾವಿಸಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ನಾವು ಶೇ 10ರಷ್ಟು ಅಭಿವೃದ್ಧಿ ಸಾಧಿಸಲಿದ್ದೇವೆ. ಈ ಅಭಿವೃದ್ಧಿ ಸಮಗ್ರವಾಗಿರಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದರು.

ADVERTISEMENT

ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಮಾವೇಶದ ಸಂಚಾಲಕ ಬೆಮೆಲ್‌ನ ವ್ಯವಸ್ಥಾಪಕ ನಿರ್ದೇಶಕ ಡಿ. ಕೆ. ಹೋಟಾ, ‘2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿ ಗುರಿಯಾಗಿಟ್ಟುಕೊಂಡು ನೀಲನಕ್ಷೆ ರೂಪಿಸುವುದು ಸಮಾವೇಶದ ಉದ್ದೇಶವಾಗಿತ್ತು. ಎರಡು ದಿನಗಳ ಸಮಾವೇಶದಲ್ಲಿ ಅಭಿವೃದ್ಧಿಯ ವಿವಿಧ ಮಗ್ಗಲುಗಳ ಕುರಿತು ಪರಿಣತರಿಂದ ವಿಸ್ತೃತ ಚರ್ಚೆ ನಡೆದಿದೆ. ಸುಸ್ಥಿರ ಗುರಿಗಳ ಸವಾಲುಗಳ ಕುರಿತು ಸಿಇಒಗಳ ಅಧ್ಯಯನ ವರದಿಯನ್ನೂ ಸಮಾವೇಶದಲ್ಲಿ ಬಿಡುಗಡೆ ಮಾಡಲಾಗಿದೆ’ ಎಂದು ವಿವರಿಸಿದರು.

‘ದೇಶವನ್ನು ಸುಸ್ಥಿರ ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಸಿಇಒಗಳು ಬದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವೂ ಖಾಸಗಿ ವಲಯಕ್ಕೆ ಆದ್ಯತೆ ನೀಡಬೇಕಾಗಿದೆ. ನಿಯಂತ್ರಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕಾಗಿದೆ. ಉತ್ತೇಜನ ನೀತಿಗಳು, ಹೂಡಿಕೆಗೆ ಹೆಚ್ಚಿನ ಅವಕಾಶಗಳೂ ಲಭ್ಯವಾಗಬೇಕಾಗಿದೆ’ ಎಂದು ಆಕ್ಸೆಂಚರ್‌ ಸ್ಟ್ರಾಟೆಜಿಯ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ ಪ್ರಭಾಕರ್ ಅಭಿಪ್ರಾಯಪಟ್ಟರು.

‘ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರದೆಡೆಗೆ ಬೊಟ್ಟು ಮಾಡುವುದನ್ನು ಬಿಟ್ಟು ನಿಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಣೆ ಮಾಡಿ’ ಎಂದು ಹೋಟಾ ಅವರು ಖಾಸಗಿ ಉದ್ಯಮಿಗಳಿಗೆ ಸಲಹೆ ನೀಡಿದರು.

‘ಜಿಸಿಎನ್‍ಐ’ನ ಕಾರ್ಯಕಾರಿ ನಿರ್ದೇಶಕ ಕಮಲ್ ಸಿಂಗ್, ಜಿಸಿಎನ್‍ಐಯ ಆಡಳಿತ ಸಮಿತಿ ಅಧ್ಯಕ್ಷ ಡಾ. ಉದ್ದೇಶ್ ಕೊಹ್ಲಿ, ವಿಶ್ವ ಸಂಸ್ಥೆ ಮತ್ತು ಯುಎನ್‍ಡಿಪಿಯ ಭಾರತದ ಪ್ರತಿನಿಧಿ ಯೂರಿ ಅಫಾನ್‍ಸೀವ್ ಮಾತನಾಡಿದರು.

ಸಿಇಒ ಅಧ್ಯಯನ ವರದಿಯ ಅಂಶಗಳು

* 2030ರಲ್ಲಿ ಸುಸ್ಥಿರ ಅಭಿವೃದ್ಧಿ ಸಾಧನೆಗೆ ಉದ್ಯಮಗಳು ಬದ್ಧ

* 1 ಲಕ್ಷ ಕೋಟಿ ಮೊತ್ತದ ಮಾರುಕಟ್ಟೆ ಅವಕಾಶ ಸೃಷ್ಟಿ

* 7.2 ಕೋಟಿ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ

* ಭಾರತದ 45 ಕಂಪನಿಗಳ ಆನ್‌ಲೈನ್‌ ಸಮೀಕ್ಷೆಯನ್ನು ಅಧ್ಯಯನಕ್ಕೆ ಬಳಕೆ

* 15ಕ್ಕೂ ಹೆಚ್ಚಿನ ಕಂಪನಿಗಳ ಸಿಇಒಗಳ ದೂರದೃಷ್ಟಿಯ ವಿಶ್ಲೇಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.