ADVERTISEMENT

ಸೂಚ್ಯಂಕ: 351 ಅಂಶ ಕುಸಿತ

ತೀವ್ರಗೊಂಡ ಅಮೆರಿಕ, ಚೀನಾ ವಾಣಿಜ್ಯ ಸಮರದ ಪರಿಣಾಮ

ಪಿಟಿಐ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
ಸೂಚ್ಯಂಕ: 351 ಅಂಶ ಕುಸಿತ
ಸೂಚ್ಯಂಕ: 351 ಅಂಶ ಕುಸಿತ   

ನವದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ತೀವ್ರಗೊಂಡಿರುವುದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಕಂಡು ಬಂದ ಕುಸಿತವು, ಬುಧವಾರ ದೇಶಿ ಪೇಟೆಯಲ್ಲಿಯೂ ಪ್ರತಿಫಲನಗೊಂಡಿತು.

ಭಾರತೀಯ ರಿಸರ್ವ್‌ ಬ್ಯಾಂಕ್‌, ಗುರುವಾರ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿರುವುದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ದೇಶಿ ಹೂಡಿಕೆದಾರರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳು ವಾಣಿಜ್ಯ ಸಮರಕ್ಕೆ ಮುಂದಾಗಿರುವುದು ವಿಶ್ವದಾದ್ಯಂತ ಷೇರುಪೇಟೆಗಳಲ್ಲಿ ನಿರುತ್ಸಾಹ ಮೂಡಿಸಿದೆ.

ದಿನದ ಆರಂಭದಲ್ಲಿ ಸಂವೇದಿ ಸೂಚ್ಯಂಕವು ಸಕಾರಾತ್ಮಕವಾಗಿಯೇ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ ದಿನದ ಗರಿಷ್ಠ ಮಟ್ಟವಾದ 33,505 ಅಂಶಗಳಿಗೂ ಏರಿಕೆ ಕಂಡಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಪೇಟೆಯಲ್ಲಿ ಹಠಾತ್ತಾಗಿ ಮಾರಾಟ ಒತ್ತಡ ಕಂಡು ಬಂದಿತು. ಇದರಿಂದಾಗಿ ಸೂಚ್ಯಂಕವು ಕನಿಷ್ಠ ಮಟ್ಟವಾದ 32,972 ಅಂಶಗಳಿಗೆ ಕುಸಿಯಿತು. ಅಂತಿಮವಾಗಿ 351.56  ಅಂಶಗಳಿಗೆ (ಶೇ 1.05) ಎರವಾಗಿ 33,019 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಮಾರ್ಚ್‌ 23 ನಂತರದ ದಿನದ ಅತಿದೊಡ್ಡ ಕುಸಿತ ಇದಾಗಿದೆ. ಅಂದು ಸೂಚ್ಯಂಕ 409 ಅಂಶಗಳಿಗೆ ಎರವಾಗಿತ್ತು.

ADVERTISEMENT

ನಿಫ್ಟಿ ಕುಸಿತ: ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ, 116 ಅಂಶಗಳನ್ನು (ಶೇ 1.14) ಕಳೆದುಕೊಂಡು 10,128 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ಹಣದುಬ್ಬರವು ಸಾಧಾರಣ ಮಟ್ಟದಲ್ಲಿ ಇರುವುದು ಮತ್ತು ದೇಶಿ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತವು ನಿರಂತರವಾಗಿ ಸ್ಥಳೀಯ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

‘ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಸಾಗುವ ದಿಕ್ಕನ್ನು ಆರ್‌ಬಿಐನ ಬಡ್ಡಿ ದರ ನೀತಿ ಮತ್ತು ಮುಂಗಾರು ಮಳೆಯ ಪ್ರಮಾಣ ನಿರ್ಧರಿಸಲಿವೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹ 376 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 479 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಲಾಭ ಬಾಚಿಕೊಂಡ ಕಾರ್ಪೊರೇಟ್‌ಗಳಲ್ಲಿ ಟಾಟಾ ಮೋಟರ್ಸ್‌ (ಶೇ 3.60) ಮುಂಚೂಣಿಯಲ್ಲಿ ಇದೆ. ನಂತರದ ಸ್ಥಾನದಲ್ಲಿ ಹೀರೊ ಮೋಟೊಕಾರ್ಪ್‌ (ಶೇ 0.81 ) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.