ADVERTISEMENT

ಸೈಬರ್ ಭದ್ರತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಭಾರತದಲ್ಲಿ 2010ರಲ್ಲಿ 29.9 ದಶ ಲಕ್ಷ ಮಂದಿ ಸೈಬರ್ ಅಪರಾಧಕ್ಕೆ ತುತ್ತಾಗಿದ್ದಾರೆ ಮತ್ತು ನಾಲ್ಕು ಶತ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ~ ಎಂದು ಸೈಬರ್ ಸುರಕ್ಷತಾ ಉತ್ಪನ್ನಗಳ ತಯಾರಿಕಾ ಸಂಸ್ಥೆ ನಾರ್ಟನ್‌ನ ಮಾರಾಟ ವಿಭಾಗದ (ಸಾರ್ಕ್ ರಾಷ್ಟ್ರ) ವ್ಯವಸ್ಥಾಪಕ ಗೌರವ್ ಕನ್ವಲ್ ಮಾಹಿತಿ ನೀಡಿದರು.

ಗುರುವಾರ ಇಲ್ಲಿ ನಡೆದ ಸಮಾರಂಭದಲ್ಲಿ `ನಾರ್ಟನ್ 2012~ ಸೈಬರ್ ಸುರಕ್ಷತಾ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. `ಭಾರತದಲ್ಲಿ ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ  ಗಣನೀಯವಾಗಿ ಏರುತ್ತಿದೆ. ಕಳೆದ ವರ್ಷ 29.9 ದಶ ಲಕ್ಷ ಮಂದಿ ಇದಕ್ಕೆ ತುತ್ತಾಗಿದ್ದಾರೆ. ನಷ್ಟದ ಪ್ರಮಾಣ ನಾಲ್ಕು ಶತಕೋಟಿಯಾಗಿದೆ.
 
ಈ ಪ್ರಕರಣಗಳ ತನಿಖೆಗೆ ವ್ಯಯಿಸಿದ ಸಮಯವನ್ನು ಪರಿಗಣಿಸಿದರೆ ನಷ್ಟದ ಪ್ರಮಾಣ 3.6 ಶತ ಕೋಟಿ ಡಾಲರ್‌ನಷ್ಟು ಹೆಚ್ಚಾಗುತ್ತದೆ. ನಾರ್ಟನ್ ನಡೆಸಿರುವ ಸಮೀಕ್ಷೆಯ ಫಲಿತಾಂಶದಿಂದ ಇದು ಗೊತ್ತಾಗಿದೆ~ ಎಂದು ಅವರು ಮಾಹಿತಿ ನೀಡಿದರು.

`ಇಂಟರ್‌ನೆಟ್ ಬಳಸುವ ಪ್ರತಿ ಐದು ಮಂದಿ ಭಾರತೀಯರಲ್ಲಿ ನಾಲ್ಕು ಮಂದಿ, ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಸುವವರಲ್ಲಿ ಶೇ 17 ಮಂದಿ ಸೈಬರ್ ಅಪರಾಧದ ಶೋಷಣೆಗೆ ಒಳಗಾಗುತ್ತಿದ್ದಾರೆ~ ಎಂದು ಅವರು ತಿಳಿಸಿದರು.

ನಾರ್ಟನ್ ಬೈ ಸಿಮ್ಯಾಂಟೆಕ್ ಎಂಬ ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು. ಇದು ಆ್ಯಂಟಿ ವೈರಸ್, ಆ್ಯಂಟಿ ಸ್ಪೈವೇರ್ ಮತ್ತು ಫಿಶಿಂಗ್‌ಗೆ ಭದ್ರತೆ ನೀಡುತ್ತದೆ. ಆನ್‌ಲೈನ್ ಬ್ಯಾಕ್‌ಅಪ್, ಪಿಸಿ ಟ್ಯೂನ್ ಅಪ್ ಮತ್ತು ಆನ್‌ಲೈನ್ ಭದ್ರತೆಯನ್ನು ಒದಗಿಸುತ್ತದೆ.

ಭಾರತ, ಆಸ್ಟ್ರೇಲಿಯಾ, ಚೀನಾ, ಜರ್ಮನಿ ಸೇರಿದಂತೆ ಒಟ್ಟು 24 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಒಟ್ಟು 19.363 ಮಂದಿಯನ್ನು ಸಂದರ್ಶಿಸಿ ಮಾಹಿತಿ ಪಡೆಯಲಾಗಿದೆ. ವಿವಿಧ ವಯೋಮಾನದ ಮತ್ತು ವರ್ಗದ ಜನರನ್ನು ಸಂದರ್ಶನ ಮಾಡಲಾಗಿದೆ. ನಾರ್ಟನ್‌ನ ಉತ್ಪನ್ನ ಮಾರಾಟ ವಿಭಾಗದ ವ್ಯವಸ್ಥಾಪಕ (ಏಷ್ಯಾ) ಡೇವಿಡ್ ಹಾಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.