ADVERTISEMENT

ಸೋನೆ ಸಮಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2010, 18:30 IST
Last Updated 20 ಅಕ್ಟೋಬರ್ 2010, 18:30 IST

ಕನ್ನಡ ಚಿತ್ರರಂಗದಲ್ಲಿ ‘ಮಳೆ’ಯ ಗುಂಗು ಇನ್ನೂ ಇದೆ ಎಂಬುದಕ್ಕೆ ಮೊನ್ನೆ ಸೆಟ್ಟೇರಿದ ‘ಸೋನೆ’ ಹೆಸರಿನ ಚಿತ್ರವೇ ಸಾಕ್ಷಿ. ಈ ಚಿತ್ರವೂ ಗೆಳೆತನ, ಹಸಿರು, ಪ್ರೀತಿ, ಮದುವೆಯ ಸುತ್ತ ಸುತ್ತುತ್ತದೆ.

‘ಸೋನೆ’ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಇನ್ನೂ ಬಿಡುಗಡೆಯಾಗಬೇಕಿರುವ ‘ಸಚ್ಚಾ’ ಚಿತ್ರದ ನಿರ್ದೇಶಕ ಧೀರಜ್ ಮತ್ತು ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ಹಣ ಹೂಡುತ್ತಿರುವ ಶಿವರಾಜ್. ಇವರಿಬ್ಬರೂ ಸೇರಿ ಹಸಿರು ಪರಿಸರದಲ್ಲಿ ಸೋನೆ ಮಳೆ ಸುರಿಸಲಿದ್ದಾರೆ.

‘ಚಿತ್ರದಲ್ಲಿ ಶೇ.60 ಭಾಗ ನಾಯಕ-ನಾಯಕಿಯ ಗೆಳೆತನ ಇರುತ್ತದೆ. ಅವರಿಬ್ಬರೂ ತಮ್ಮ ಸಂಬಂಧವನ್ನು ಪರೀಕ್ಷಿಸಿಕೊಳ್ಳುವ ಉದ್ದೇಶದಿಂದ ಪ್ರತ್ಯೇಕವಾಗುವ ನಿರ್ಧಾರ ಮಾಡುತ್ತಾರೆ. ದೂರವಾದ ನಂತರ ಅವರಿಬ್ಬರಿಗೂ ತಾವು ಪ್ರೀತಿಯಲ್ಲಿ ಸಿಲುಕಿರುವ ವಿಚಾರ ಅರಿವಿಗೆ ಬಂದು ಕೊನೆಯಲ್ಲಿ ಹಸೆಮಣೆ ಏರುತ್ತಾರೆ. ಇದಿಷ್ಟು ಚಿತ್ರದ ಕತೆ’ ಎಂದರು ಶಿವರಾಜ್. ಯಾವುದೇ ವಿಚಾರದಲ್ಲೂ ಅರಿವಿಗೆ ಬರದೆ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂಬ ಸಂದೇಶವನ್ನು ಈ ಸಿನಿಮಾದ ಮೂಲಕ ಹೇಳಲು ಅವರು ಹೊರಟಿದ್ದಾರಂತೆ.

ADVERTISEMENT

ಹಸಿರು ಪರಿಸರದಲ್ಲಿ ಪ್ರೀತಿಯನ್ನು ಚಿತ್ರೀಕರಿಸುವುದಾಗಿ ಹೇಳಿದ ಶಿವರಾಜ್, ಹತ್ತು ವರ್ಷಗಳ ಹಿಂದೆಯೇ ನಿರ್ದೇಶನದ ಕೋರ್ಸ್ ಕಲಿತವರು. ಧೀರಜ್ ಚಿತ್ರವನ್ನು ಒಂದೇ ಹಂತದಲ್ಲಿ ಮುಗಿಸುವ ಯೋಜನೆ ಹಾಕಿಕೊಂಡಿರುವುದಾಗಿ ಹೇಳಿದರು.

ಶಿವರಾಜ್ ಅವರ ಅಕ್ಕನ ಮಗ ಮನು ಚಿತ್ರದ ನಾಯಕ. ಕಸ್ತೂರಿ ಕಲಾ ಕೇಂದ್ರದಲ್ಲಿ ನಟನೆ ಕಲಿತಿರುವ ಅವರು ಈ ಚಿತ್ರೀಕರಣವನ್ನು ಕಾಲೇಜಿಗೆ ಹೋಲಿಸಿ ಸುಮ್ಮನಾದರು.

‘ನೀನ್ಯಾರೆ’, ‘ಯುವ ಸಾಮ್ರಾಟ್’, ‘ವಾರೆವ್ಹಾ’ ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಈ ಚಿತ್ರದ ನಾಯಕಿ. ದಾವಣಗೆರೆಯವರಾದ ಶ್ರುತಿ ಬಿಎಸ್ಸಿ ಪದವೀಧರೆ. ‘ವೆಂಕಿ’, ‘ಅಂಕುಶ’, ‘ಬನ್ನಿ’, ‘ಆತ್ಮಸಾಕ್ಷಿ’ ಚಿತ್ರಗಳ ಛಾಯಾಗ್ರಾಹಕ ಸೂರ್ಯಕಾಂತ್ ಹೊನ್ನಳ್ಳಿ ಈ ಚಿತ್ರಕ್ಕೆ ಕ್ಯಾಮೆರಾ ಬೆಳಕು ನೀಡಲು ಸಜ್ಜಾಗಿದ್ದಾರೆ. ಇದು ಅವರ ಐದನೇ ಚಿತ್ರ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.