ADVERTISEMENT

ಸ್ಟಾರ್ಟ್ಅಪ್‌ ಸಲಹೆಗೆ ಎಸ್‌ಬಿಐ ಶಾಖೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಸ್ಟಾರ್ಟ್ಅಪ್‌ ಸಲಹೆಗೆ ಎಸ್‌ಬಿಐ ಶಾಖೆ
ಸ್ಟಾರ್ಟ್ಅಪ್‌ ಸಲಹೆಗೆ ಎಸ್‌ಬಿಐ ಶಾಖೆ   

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಂಪತ್ತು ನಿರ್ವಹಣೆ ಸೇವೆ ಒದಗಿಸಲು  ಎಸ್‌ಬಿಐ ಎಕ್ಸ್‌ಕ್ಲೂಸಿಫ್‌ (SBI Exclusif) ಮತ್ತು ಸ್ಟಾರ್ಟ್‌ಅಪ್‌ಗಳಿಗಾಗಿ ಎಸ್‌ಬಿಐ ಇನ್‌ಕ್ಯೂಬ್‌ (SBI InCube) ಎಂಬ ಎರಡು ಹೊಸ ಸೇವೆಗಳ ಆರಂಭವನ್ನು ಘೋಷಿಸಿದೆ.

‘ನಾವು ಅತಿ ಹೆಚ್ಚಿನ ಸಂಖ್ಯೆಯ ಶ್ರೀಮಂತ ಹೂಡಿಕೆದಾರರ ಗ್ರಾಹಕರನ್ನು ಹೊಂದಿದ್ದೇವೆ. ಹೀಗಾಗಿ, ಸಂಪತ್ತು ನಿರ್ವಹಣೆ ಸೇವೆ ಪರಿಚಯಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಅಲ್ಲದೆ, ಅತ್ಯಾಧುನಿಕ ಮತ್ತು ವಿಶೇಷವಾದ ಸೇವೆ ಬಯಸುವವರಿಗೂ ಎಸ್‌ಬಿಐ ಎಕ್ಸ್‌ಕ್ಲೂಸಿಫ್‌  ನೆರವಾಗಲಿದೆ’ ಎಂದು ಇಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು ತಿಳಿಸಿದರು.

ಈ ಸೇವೆಯಡಿ, ಗ್ರಾಹಕರ ಬ್ಯಾಂಕಿಂಗ್‌ ಮತ್ತು ಹೂಡಿಕೆ ಅಗತ್ಯಗಳನ್ನು ಹೂಡಿಕೆ ತಜ್ಞರ ತಂಡದ ಬೆಂಬಲವಿರುವ ಮ್ಯಾನೇಜರ್‌ ನೋಡಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

ಸ್ಟಾರ್ಟ್‌ಅಪ್‌ ಶಾಖೆ: ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡಲು  ಬೆಂಗಳೂರಿನ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ ‘ಎಸ್‌ಬಿಐ ಇನ್‌ಕ್ಯೂಬ್‌’  ಹೆಸರಿನ ಮೊದಲ  ಸ್ಟಾರ್ಟ್‌ಅಪ್‌ ಶಾಖೆ ಆರಂಭಿಸಿದೆ.

ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸಿನ ನೆರವು ನೀಡುವುದಕ್ಕೆ ಹೊರತಾಗಿಯೂ ಹಣಕಾಸು ನಿರ್ವಹಣೆಯ ಸಲಹೆ ನೀಡುವ ಅಗತ್ಯವೂ ಇದೆ. ಹೊಸತಾಗಿ ಕಂಪೆನಿ ತೆರೆಯುವ ಅಥವಾ ವ್ಯಾಪಾರ ನಡೆಸುವವರಿಗೆ ಬ್ಯಾಂಕಿಂಗ್‌ ಉದ್ಯಮ ದಲ್ಲಿ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಇರಲಿಲ್ಲ. ಆ ಕೊರತೆಯನ್ನು ಎಸ್‌ಬಿಐ ನಿವಾರಿಸಿದೆ ಎಂದರು.

ಕಂಪೆನಿಯ ನೋಂದಣಿಯಿಂದ ಆರಂಭವಾಗಿ, ಅದಕ್ಕೆ ಸಂಬಂಧಿಸಿದ ಕಾನೂನು  ತೊಡಕುಗಳು, ತೆರಿಗೆ... ಹೀಗೆ ಎಲ್ಲಾ ವಿಷಯಗಳಿಗೂ ಒಂದೇ ಸೂರಿನಡಿಯಲ್ಲಿ ಸಲಹೆ, ಮಾರ್ಗದರ್ಶನ ಒದಗಿಸಲಾಗುವುದು ಎಂದು ಅವರು ವಿವರಿಸಿದರು. ಎಸ್‌ಬಿಐ ಎಂ.ಡಿ. (ರಾಷ್ಟ್ರೀಕೃತ ಬ್ಯಾಂಕಿಂಗ್‌ ಗ್ರೂಪ್‌) ರಜನೀಶ್‌ ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.