ADVERTISEMENT

ಸ್ವಂತ ಉದ್ಯಮ ಯಂತ್ರ ಸೂತ್ರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

`ಕನಸು ನಿಮ್ಮದು, ನನಸು ಮಾಡಿಕೊಡುವ ಜವಾಬ್ದಾರಿ ನಮ್ಮದು~

ಇಂಥದೊಂದು ಆತ್ಮವಿಶ್ವಾಸದ ಮಾತಿನೊಂದಿಗೆ ಸ್ವಂತ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ ಹುಬ್ಬಳ್ಳಿಯ ಅಶೋಕ ಅಮೀನಗಡ.

ಗುಜರಾತ್‌ನ ಅಹಮದಾಬಾದ್‌ನಲ್ಲಿನ ತಮ್ಮ ಪಾಲುದಾರಿಕೆಯ ಕಾರ್ಖಾನೆಯಲ್ಲಿ ತಯಾರಾಗುವ ವಿವಿಧ ಯಂತ್ರಗಳನ್ನು ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿನ ಮಾರಾಟ ಕೇಂದ್ರದಲ್ಲಿ ಮಾರುತ್ತಾ `ಸ್ವಂತ ಉದ್ಯಮ~ ಕನಸು ನನಸಾಗಿಸಿಕೊಂಡಿದ್ದಾರೆ ಇವರು.

ತಮ್ಮಲ್ಲಿಗೆ ಬರುವವರಿಗೆ ಬೇಕಾದ ಯಂತ್ರಗಳನ್ನು ಸಿದ್ಧಪಡಿಸಿಕೊಡುವುದರ ಜತೆಗೇ, ಗ್ರಾಹಕರ `ಸ್ವಂತ ಉದ್ಯಮ~ದ ಕನಸಿಗೂ ಶಕ್ತಿ ತುಂಬುತ್ತಿದ್ದಾರೆ. ಅಶೋಕ ಅಮೀನಗಡ, ದಶಕಗಳ ಹಿಂದೆಯೇ ಮುಂಬೈನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್, ಅಹಮದಾಬಾದ್‌ನಲ್ಲಿ ಹಾಲು ಉತ್ಪನ್ನಗಳ ತಯಾರಿ ಕೋರ್ಸ್ ಹಾಗೂ ಪುಣೆಯಲ್ಲಿ ಪ್ಯಾಕಿಂಗ್ ಡಿಪ್ಲೊಮಾ ವ್ಯಾಸಂಗ ಮಾಡಿದ್ದರು.

ನಂತರ ಅವರು ನೌಕರಿ ಅರಸಿ ಹೋಗಲೇ ಇಲ್ಲ. ಇನ್ನೊಬ್ಬರ ಕೈಕೆಳಗೆ ನೌಕರಿ ಮಾಡುವುದು ರುಚಿಸದ ಸಂಗತಿ ಎನಿಸಿತು. ಸ್ವಾವಲಂಬಿಯಾಗಿರಬೇಕು, `ಸ್ವಂತ ಉದ್ಯಮ~ ಆರಂಭಿಸಬೇಕು, ಇನ್ನೊಬ್ಬರ ಕೈಕೆಳಗಿನ ನೌಕರನಾಗುವ ಬದಲು ಹಲವು ಮಂದಿಗೆ ಉದ್ಯೋಗ ನೀಡಬೇಕು ಎಂಬ ಕನಸಿತ್ತು.

ADVERTISEMENT

ಹಾಗಾಗಿಯೇ, ಮೊದಲಿಗೆ ಧಾರವಾಡದಲ್ಲಿ `ಅಮೀನಗಡ ಕೂಲ್‌ಡ್ರಿಂಕ್ಸ್~ ಮಳಿಗೆ ಆರಂಭಿಸಿದರು. ಅಲ್ಲಿ ಉತ್ತರ ಭಾರತದ ತಿಂಡಿಗಳನ್ನೂ ತಂದು ಮಾರಲಾರಂಭಿಸಿದರು. ನಂತರ ಆ ತಿಂಡಿಗಳ ತಯಾರಿ ವಿಧಾನವನ್ನೂ ಅರಿತರು. ನಂತರ ಈ ತಿಂಡಿಗಳನ್ನು ತಯಾರಿಸುವ ಯಂತ್ರಗಳನ್ನು ಪರಿಚಯಿಸಿಕೊಂಡರು. ಅಲ್ಲಿಗೆ, ಅವರ `ಯಂತ್ರ ಉದ್ಯಮ~ದ ಕನಸು ಬೇರು ಬಿಟ್ಟಿತು.

`ಆಗೆಲ್ಲ ಹೆಚ್ಚಾಗಿ ವಿದೇಶದಿಂದಲೇ ಯಂತ್ರಗಳನ್ನು ತರಿಸಿಕೊಳ್ಳಬೇಕಾಗಿತ್ತು. ನಮಗೆ ಬೇಕಾದ ಯಂತ್ರಗಳನ್ನು ನಾವೇ ಏಕೆ ತಯಾರಿಸಬಾರದು ಎನಿಸಿತು. 1996ರಲ್ಲಿ ಒಂದು ಲಕ್ಷ ರೂಪಾಯಿ ಬಂಡವಾಳ ತೊಡಗಿಸಿ ಯಂತ್ರಗಳ ತಯಾರಿ ಆರಂಭಿಸಿದೆ. ತಯಾರಿಕೆಯೇನೋ ಆಯಿತು, ಅವುಗಳ ಮಾರಾಟ ಕಷ್ಟ ಎನಿಸಿತು.

ಆಗ `ತಿರುಗಾಟದ ಮಾರಾಟ~ಕ್ಕೆ ಶುರುಹಚ್ಚಿಕೊಂಡೆ. 2004ರಲ್ಲಿ ಹುಬ್ಬಳ್ಳಿಯಲ್ಲಿ ಮಾರಾಟ ಮಳಿಗೆ ತೆರೆದೆ. ಸದ್ಯಕ್ಕೆ ಇರುವ ಯಂತ್ರಗಳಿಗೆ ರೂ 2.5 ಕೋಟಿ ಬಂಡವಾಳ ತೊಡಗಿಸಿದ್ದೇನೆ. ವರ್ಷಕ್ಕೆ ರೂ. 2ರಿಂದ 3 ಕೋಟಿ ವಹಿವಾಟು ನಡೆಯುತ್ತಿದೆ~ ಎನ್ನುತ್ತಾರೆ 52 ವರ್ಷದ ಅಶೋಕ.

`ಪಾಲುದಾರಿಕೆಯಲ್ಲಿ ಅಹಮದಾಬಾದ್‌ನಲ್ಲಿಯೂ ಒಂದು ಯಂತ್ರ ತಯಾರಿಕಾ ಘಟಕವಿದೆ. ಅಲ್ಲಿ ತಯಾರಾದ ಯಂತ್ರಗಳಿಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಉತ್ತಮ ಮಾರುಕಟ್ಟೆಯೂ ಸಿಕ್ಕಿದೆ.

ಹುಬ್ಬಳ್ಳಿಯ ಮಾರಾಟ ಕೇಂದ್ರ ಮತ್ತು ಕಾರ್ಖಾನೆಯಲ್ಲಿ ಒಟ್ಟು 20 ಮಂದಿಗೆ ಉದ್ಯೋಗ ನೀಡಿದ್ದೇವೆ. ನೌಕರಿಯೇ ಬೇಕು ಎಂದು ಕಾಯುತ್ತಾ ಕೂರದೇ ಇರುವವರಿಗೆ, ತಮ್ಮೂರಿನಲ್ಲಿಯೇ ಇದ್ದು ಏನನ್ನಾದರೂ ಸಾಧಿಸುತ್ತೇನೆ ಎನ್ನುವವರಿಗೆ ಸ್ವಂತ ಉದ್ಯಮ ಆರಂಭಿಸಲು ಸದಾ ನನ್ನ ಬೆಂಬಲವಿದೆ~.

ಆಹಾರ ಸಂಸ್ಕರಣ ಗುಣಮಟ್ಟ ಕಾಯ್ದೆ ಕುರಿತು ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸ ನೀಡಿದ್ದಾರೆ. ಜತೆಗೆ ಗೋಗಟೆ ಎಂಜಿನಿಯರಿಂಗ್ ಕಾಲೇಜು, ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಹಾಗೂ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್

ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟ್ ಸಿದ್ಧಪಡಿಸಲು ನೆರವಾಗುತ್ತಾರೆ. ಹುಬ್ಬಳ್ಳಿ-2007 ವಾಣಿಜ್ಯ ಮೇಳದಲ್ಲಿ ಇವರ ಆಹಾರ ಸಂಸ್ಕರಣ ಘಟಕಕ್ಕೆ ಪ್ರಶಸ್ತಿ ಲಭಿಸಿದೆ. 2008ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ದಕ್ಷಿಣ ಭಾರತ ಫುಡ್-ಎಕ್ಸ್‌ಪೋದಲ್ಲಿ `ಉತ್ತಮ ಯಂತ್ರಗಳ ಸಂಗ್ರಹಕಾರ~ ಎಂಬ ಪುರಸ್ಕಾರವೂ ಸಿಕ್ಕಿದೆ.

ಉದ್ಯಮದಲ್ಲಿನ ಈ ಪ್ರಗತಿ, ಯಶಸ್ಸು ಸುಲಭವಾಗಿ ದಕ್ಕಿದ್ದೇನೂ ಅಲ್ಲ. ಸಾಕಷ್ಟು ಸಮಸ್ಯೆ, ಸವಾಲು ಎದುರಿಸಿರುವೆ. ನನ್ನೆಲ್ಲ ಪ್ರಯತ್ನ-ಸಾಧನೆಗೆ ತಂದೆ ಈರಪ್ಪ-ಅವ್ವ ಕಮಲಾಕ್ಷಿ, ಪತ್ನಿ ವಿಜಯಲಕ್ಷ್ಮಿ ಅವರ ಸಹಕಾರ-ಪ್ರೋತ್ಸಾಹ ಕಾರಣ~ ಎನ್ನುತ್ತಾರೆ ಅಶೋಕ.

`ನಿರುದ್ಯೋಗಿ ಯುವಜನರಿಗೆ ನಮ್ಮಲ್ಲಿನ ಯಂತ್ರಗಳನ್ನು ಪರಿಚಯಿಸಿ `ಸ್ವಂತ ಉದ್ಯಮ~ ಆರಂಭಿಸುವಂತೆ ಉತ್ತೇಜಿಸುವುದು ಇಷ್ಟದ ಕೆಲಸ. ಸ್ವಾವಲಂಬಿ ಬದುಕಿಗೆ ಉಚಿತವಾಗಿ ಮಾಹಿತಿ-ಮಾರ್ಗದರ್ಶನ ನೀಡುವೆ~ ಎನ್ನುವ ಈ ಸಣ್ಣ ಉದ್ಯಮಿ, ತನ್ನಂತೆಯೇ ವ್ಯಾಪಾರ-ಉದ್ದಿಮೆ ಆರಂಭಿಸಬೇಕು ಎಂದು ಬರುವವರಿಗೆ, ಬಂಡವಾಳ ಹೇಗೆ ಹೂಡಬೇಕು? ವಹಿವಾಟು ಹೇಗೆ ನಡೆಸಬೇಕು? ತಿಳಿಸಿಕೊಡುತ್ತಾರೆ.

ಜತೆಗೆ ಲೈಸೆನ್ಸ್ ಮತ್ತು ತೆರಿಗೆ ನಿಯಮಾವಳಿಗಳ ಪಾಠವನ್ನೂ ಹೇಳಿಕೊಡುತ್ತಾರೆ.
ಸ್ವಂತ ಉದ್ಯಮದ ಕನಸಿನಲ್ಲಿ ಯಂತ್ರಗಳನ್ನು ಅರಸಿ ಬರುವ ಗ್ರಾಹಕರಿಂದ, ಅವರ ಊರು, ಪರಿಸರ, ಅಲ್ಲಿ ಲಭ್ಯವಿರುವ ಕಚ್ಚಾವಸ್ತು, ಮಾರುಕಟ್ಟೆ ರೀತಿ ತಿಳಿದುಕೊಂಡು ಅದಕ್ಕೆ ತಕ್ಕುದಾದ ಉದ್ಯಮ-ಯಂತ್ರಗಳ ಮಾಹಿತಿ ನೀಡುತ್ತಾರೆ.

ಉದಾಹರಣೆಗೆ ವಿಜಾಪುರ ಜಿಲ್ಲೆಯಲ್ಲಿ ಜೋಳ, ಶೇಂಗಾ ಹೆಚ್ಚು ಬೆಳೆಯುತ್ತಾರೆ. ಇವುಗಳಿಂದ ಉತ್ಪಾದಿಸಬಹುದಾದ ವಸ್ತುಗಳ ತಯಾರಿಕೆಗೆ ಬೇಕಾದ ಯಂತ್ರಗಳ ಕುರಿತು ತಿಳಿಸಿಕೊಡುತ್ತಾರೆ. ಉತ್ತರ ಕನ್ನಡ ಜಿಲ್ಲೆಯವರಿಗಾದರೆ ಹಪ್ಪಳ, ಸಂಡಿಗೆ ಕುರಿತು ಮಾಹಿತಿ ನೀಡುತ್ತಾರೆ.

`ಹೋಟೆಲ್ ಉದ್ಯಮಕ್ಕೆ, ತಂಪು ಪಾನೀಯ, ಐಸ್ ಕ್ರೀಂ, ಸಿಹಿ ತಿಂಡಿ ತಯಾರಿಸುವವರಿಗೆ, ಬೇಕರಿಯವರಿಗೆ, ಮದುವೆ ಅಡುಗೆ ತಯಾರಿಸುವವರಿಗೆ, ಗೃಹ ಕೈಗಾರಿಕೆ, ಲಘು ಉದ್ದಿಮೆದಾರರಿಗೆ ಅಗತ್ಯ ಯಂತ್ರಗಳನ್ನು ತಯಾರಿಸಿಕೊಡುತ್ತೇವೆ. ನಾವು ತಯಾರಿಸಿದ ಯಂತ್ರವೊಂದು ಗಂಟೆಗೆ 580 ಉದ್ದಿನ ವಡೆ ಮಾಡುಬಲ್ಲದು.

ಇಂತಹುದೇ ಯಂತ್ರವೊಂದು ಬೆಂಗಳೂರಿನಲ್ಲಿದೆ. ಗಂಟೆಗೆ 250 ಕಿಲೋ ತರಕಾರಿಯನ್ನು ತೆಳುವಾಗಿ ಕತ್ತರಿಸುವ ಯಂತ್ರಗಳೂ ರಾಜ್ಯದ ಹಲವೆಡೆ ಮಾರಾಟವಾಗಿವೆ. ನಮ್ಮಲ್ಲಿರುವ ಯಂತ್ರ ಐದೇ ನಿಮಿಷದಲ್ಲಿ ಕಡಲೆಹಿಟ್ಟನ್ನು ಹದ ಮಾಡಿ, ಪ್ಲೇಟ್‌ಗಳಿಗೆ ಬೇಕಾದ ನಮೂನೆಯ ಸೇವು, ಘಾಟಿ, ಪಾಪಡಿ ಸಿದ್ಧಪಡಿಸಿಕೊಡುತ್ತದೆ.

5 ಲೀಟರಿನಿಂದ 5 ಸಾವಿರ ಲೀಟರ್‌ವರೆಗೆ ಮೊಸರು ಕಡೆಯುವ ಯಂತ್ರ, ಒಂದು ಗಂಟೆಯಲ್ಲಿ ಎರಡು ಸಾವಿರ ಚಪಾತಿ ಲಟ್ಟಿಸಿ, ಬೇಯಿಸುವ ನಮ್ಮ ಯಂತ್ರ ಜನಪ್ರಿಯವಾಗಿದೆ. ಚಪಾತಿ ತಯಾರಿಸುವ 3-6 ಅಡಿ ಉದ್ದ-ಅಗಲದ, 5 ಅಡಿ ಎತ್ತರದ ಯಂತ್ರ ಪೂರ್ಣ ಸ್ವಯಂಚಾಲಿತ. ಇದರಲ್ಲಿ ಕತ್ತರಿಸಿ ಉಳಿದ ಹಿಟ್ಟು ಮತ್ತೆ ಯಂತ್ರದಲ್ಲಿ ಸೇರಿಕೊಳ್ಳುತ್ತದೆ.

ಇಂಥ ಯಂತ್ರಗಳನ್ನು ಶಿರಡಿಯ ಸಾಯಿಬಾಬಾ ಮಂದಿರ ಹಾಗೂ ಪುಣೆಯ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ)ದಲ್ಲಿಯೂ ಅಳವಡಿಸಿದ್ದೇವೆ~ ಎಂದು ತಮ್ಮ ಯಂತ್ರಗಳ ಯಶೋಗಾಥೆ ತೆರೆದಿಡುತ್ತಾರೆ ಅಶೋಕ.  `ಎಂಟು ಬಗೆ ಸೋಡಾ ತಯಾರಿಸುವ ಯಂತ್ರವೂ ನಮ್ಮಲ್ಲಿದೆ. ಕಬ್ಬಿನ ಗಾಣ, ಅಡಿಕೆ ಸುಲಿವ ಯಂತ್ರ, ಬಟಾಟೆ ಚಿಪ್ಸ್, ಚಾಕ್‌ಲೇಟ್, ಶ್ಯಾವಿಗೆ ಹಾಗೂ ನೂಡಲ್ಸ್ ತಯಾರಿಸುವ, ಮಸಾಲೆ ಹಾಗೂ ಮಾಂಸವನ್ನು ಚಿಕ್ಕದಾಗಿ ಕತ್ತರಿಸುವ ಯಂತ್ರಗಳೂ ಇವೆ.

ಗಣೇಶೋತ್ಸವ ಅಂಗವಾಗಿ ಕೆಲವೇ ನಿಮಿಷಗಳಲ್ಲಿ ಮೂರು ಮೋದಕಗಳು ಸಿದ್ಧಗೊಳ್ಳುವ ಪುಟ್ಟ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ~.
`ಜೋಳದ ರೊಟ್ಟಿಗೆ ಮಾತ್ರ ಯಂತ್ರ ಮಾಡುವುದು ಕಷ್ಟ. ತೆಳುವಾದ ಈ ರೊಟ್ಟಿಯನ್ನೇನಿದ್ದರೂ ಮಹಿಳೆಯರು ಕೈಯಿಂದ ತಟ್ಟಿಯೇ ತಯಾರಿಸಬೇಕು. ಸದ್ಯ ಹೊಸ ಬಗೆಯಲ್ಲಿ ಅವಲಕ್ಕಿ ಮಾಡುವ ಯಂತ್ರ, ನವಧಾನ್ಯಗಳ ಸಿಪ್ಪೆ ತೆಗೆದು ಪಾಲಿಶ್ ಮಾಡುವ ಯಂತ್ರ, ಸೈಕಲ್ ಪೆಡಲ್ ತುಳಿದರೆ ಹಿಟ್ಟು ಬೀಸುವ ಯಂತ್ರಗಳ ತಯಾರಿ ನಡೆದಿದೆ~ ಎನ್ನುತ್ತಾರೆ ಅಶೋಕ ಅಮೀನಗಡ.          (ಮೊ: 9845407087)
 

....................................
 

`ನಿರುದ್ಯೋಗ ನಿವಾರಣೆ~: `ಬೆಳಗಾವಿ ಜಿಲ್ಲೆ ಬೈಲಹೊಂಗಲದ ನಾನು ಪಿಯುಸಿ ನಂತರ ನಿರುದ್ಯೋಗಿಯಾಗಿದ್ದೆ. ಅಶೋಕರನ್ನು ಭೇಟಿಯಾಗಿ ಸ್ವಂತ ಉದ್ಯಮ ಮಾಡುವ ಬಗ್ಗೆ ಹೇಳಿದೆ.

6 ವರ್ಷಗಳ ಹಿಂದೆ ರೂ. 40 ಸಾವಿರಕ್ಕೆ ಒಂದು ಯಂತ್ರ ಸಿದ್ಧಪಡಿಸಿ ಕೊಟ್ಟರು. ಸೋಡಾ, ಶರಬತ್ತು, ಐಸ್‌ಕ್ರೀಂ ತಯಾರಿಸಿ ಮಾರಲಾರಂಭಿಸಿದೆ. ಈಗ ಹೊಸ ಯಂತ್ರ ಖರೀದಿಸಿ ವ್ಯಾಪಾರ ಹೆಚ್ಚಿಸಿಕೊಂಡಿರುವೆ~. 

 -ಭೂಪತಿ ಬೂದಿಹಾಳ

  `ಛಲೋ ಬಿಸಿನೆಸ್~:  `ಹಾವೇರಿ ಜಿಲ್ಲೆ ಚಿಕ್ಕಅಣಜಿಯ ನಮ್ಮ  ಮನೆಯಲ್ಲಿಯೇ ಖಾರದಾನಿ, ಚಿಪ್ಸ್, ಸಿಹಿ ತಿಂಡಿ ತಯಾರಿಸಿ ಮಾರುತ್ತೇವೆ. ಪಿಯುಸಿಗಿಂತ ಮುಂದೆ ಓದಲಾಗಲಿಲ್ಲ. ಅಶೋಕ ವರು ಕಡಿಮೆ ದರದಲ್ಲಿ ಖಾರದಾನಿ ಯಂತ್ರ ಕೊಟ್ಟರು. ಛಲೋ ಬಿಸಿನೆಸ್ ನಡೆದಿದೆ~.                 

  -ರಾಜು ಡಂಬಳ

`ಬಗೆಹರಿದ ಕಾರ್ಮಿಕರ ಸಮಸ್ಯೆ~:  `ಧಾರವಾಡದಲ್ಲಿ `ಗೃಹಿಣಿ ಹೋಂ ಇಂಡಸ್ಟ್ರಿ~ ಶುರು ಮಾಡಿದಾಗ ಕಾರ್ಮಿಕರ ಸಮಸ್ಯೆಯಿತ್ತು. ಅಶೋಕ ಅವರ ಹತ್ತಿರ ಘಾಟಿ, ಪಾಪಡಿ, ಚಿಪ್ಸ್ ಯಂತ್ರ ಖರೀದಿಸಿದ ನಂತರ ಕಾರ್ಮಿಕರ ಸಮಸ್ಯೆ ಶೇ 50ರಷ್ಟು ಬಗೆಹರಿದಂತಾಯಿತು.

ನಮ್ಮ ಉತ್ಪನ್ನಗಳಿಗೆ ಈಗ ಎಷ್ಟೇ ಬೇಡಿಕೆ ಬಂದರೂ ಪೂರೈಸಬಹುದಾಗಿದೆ. ಮೊದಲು 10-12 ಗಂಟೆ ಕೆಲಸ ಮಾಡುತ್ತಿದ್ದೆ. ಈಗ 8 ಗಂಟೆಗೆಲ್ಲ ಮುಗಿಯುತ್ತದೆ. ಮೊದಲು 50-60 ಕಿಲೋ ಕಡ್ಲೆ ಹಿಟ್ಟಿನಿಂದ ಪದಾರ್ಥ ತಯಾರಿಸುತ್ತಿದ್ದೆವು. ಈಗ 2-3 ಟನ್‌ವರೆಗೂ ವಿವಿಧ ಬಗೆ ತಿಂಡಿ ತಯಾರಿಸುತ್ತೇವೆ~. 
 
-ವಿಜಯ್ ಕಿತ್ತೂರು 

 ಯಂತ್ರ-ಸಾಮರ್ಥ್ಯ-ದರ

* ಸೇವು ಮಾಡುವ ಯಂತ್ರ (ಸ್ವಯಂ ಚಾಲಿತ ರೂ 4.50 ಲಕ್ಷ, ಮಾನವ ಚಾಲಿತ ರೂ36,500)
* ಮಜ್ಜಿಗೆ ಯಂತ್ರ (5 ಲೀಟರ್- ರೂ 1450, ಐದು ಸಾವಿರ ಲೀಟರ್‌ನದಕ್ಕೆ ರೂ 9,500)
* ಚಿಪ್ಸ್ ಯಂತ್ರ (ಗಂಟೆಗೆ 100-150 ಕಿಲೋ ಸಿದ್ಧ, ರೂ 1 ಲಕ್ಷ)
* ಹಿಟ್ಟು ನಾದುವ ಚಿಕ್ಕ ಯಂತ್ರ (ರೂ 29,500-ರೂ 42,500)
* ಗರಿಷ್ಠ ಸಾಮರ್ಥ್ಯದ ಹಿಟ್ಟು ನಾದುವ ಯಂತ್ರ- ರೂ 52 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.