ADVERTISEMENT

ಹಣದುಬ್ಬರ ಇಳಿಕೆ: ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2011, 19:30 IST
Last Updated 22 ನವೆಂಬರ್ 2011, 19:30 IST
ಹಣದುಬ್ಬರ ಇಳಿಕೆ: ವಿಶ್ವಾಸ
ಹಣದುಬ್ಬರ ಇಳಿಕೆ: ವಿಶ್ವಾಸ   

ನವದೆಹಲಿ (ಐಎಎನ್‌ಎಸ್): ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆಹಾರ ಹಣದುಬ್ಬರ ದರವು ಹಿತಕರ ಮಟ್ಟ ಶೇ 6-7ರ ಆಸುಪಾಸಿಗೆ ಇಳಿಕೆ ಕಾಣಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಈಗಾಗಲೇ ಮಾರುಕಟ್ಟೆ ಪೂರೈಕೆ ಸರಪಣಿ ಸರಿಸಪಡಿಸಲಾಗಿದ್ದು, ಮುಂದಿನ 6ರಿಂದ 12 ತಿಂಗಳ ಒಳಗೆ ದರಗಳು ಸರಾಸರಿ ಮಟ್ಟಕ್ಕೆ ಇಳಿಯಲಿವೆ ಎಂದು ಅವರು ಲೋಕಸಭೆಗೆ ನೀಡಿರುವ ಸ್ವಯಂ  ಪ್ರೇರಿತ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನವರಿ  2010ರಿಂದ ಒಟ್ಟಾರೆ ಹಣದುಬ್ಬರ ದರ ಎರಡಂಕಿ ಸಮೀಪದಲ್ಲಿದೆ. ಅಕ್ಟೋಬರ್ ತಿಂಗಳಲ್ಲಿ  ಸಗಟು ಬೆಲೆ ಸೂಚ್ಯಂಕ ಅಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ಶೇ 9.73ರಷ್ಟಾಗಿದೆ. ಆಹಾರ ಹಣದುಬ್ಬರ ದರವೂ ನವೆಂಬರ್ 5ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಶೇ 10.63ರಷ್ಟಾಗಿದ್ದು, ಅಗತ್ಯ ವಸ್ತುಗಳ ದರಗಳು ತುಟ್ಟಿಯಾಗಿವೆ.

ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹಣದುಬ್ಬರ ದರ ಶೇ 4ರಿಂದ 5ರ ನಡುವೆ ಇರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ. ಆದರೆ, ತೈಲ ಬೆಲೆ ಹೆಚ್ಚಳ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಪೂರೈಕೆ ಸರಪಣಿ ದೋಷದಿಂದ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ.

ಹಣದುಬ್ಬರ ಏರಿಕೆಯಾಗಲು ದೇಶೀಯ ಸಂಗತಿಗಳ ಜತೆಗೆ, ಜಾಗತಿಕ  ವಿದ್ಯಮಾನಗಳೂ ಪ್ರಮುಖವಾಗಿವೆ. ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಕಚ್ಚಾ ತೈಲದ ಬೆಲೆ ಹೆಚ್ಚಿದೆ. ಕಳೆದ ವರ್ಷ ಜನವರಿಯಲ್ಲಿ ಬ್ಯಾರೆಲ್‌ಗೆ 75 ಡಾಲರ್ ಇದ್ದ ಕಚ್ಚಾ ತೈಲ ಸದ್ಯ 110 ಡಾಲರ್ ಸಮೀಪದಲ್ಲಿದೆ ಎಂದು ಪ್ರಣವ್ ವಿವರಣೆ ನೀಡಿದ್ದಾರೆ.

ಆಹಾರ ಭದ್ರತಾ ಮಸೂದೆ: ಪ್ರಸ್ತಾವಿತ ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ ಜಾರಿಗೆ ಬಂದರೆ ಹಣದುಬ್ಬರ ಒತ್ತಡ ಹೆಚ್ಚಲಿದೆ ಎಂದು ಎಂದು `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.