ADVERTISEMENT

ಹಣದುಬ್ಬರ: ಸಗಟುಇಳಿಕೆ ಚಿಲ್ಲರೆ ಏರಿಕೆ

ಆರ್‌ಬಿಐ ಬಡ್ಡಿದರ ಕಡಿತ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2013, 19:59 IST
Last Updated 14 ಜನವರಿ 2013, 19:59 IST
ಹಣದುಬ್ಬರ: ಸಗಟುಇಳಿಕೆ ಚಿಲ್ಲರೆ ಏರಿಕೆ
ಹಣದುಬ್ಬರ: ಸಗಟುಇಳಿಕೆ ಚಿಲ್ಲರೆ ಏರಿಕೆ   

ನವದೆಹಲಿ(ಪಿಟಿಐ): ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಡಿಸೆಂಬರ್‌ನಲ್ಲಿ ಮೂರು ವರ್ಷಗಳ ಹಿಂದಿನ ಮಟ್ಟವಾದ ಶೇ 7.18ಕ್ಕೆ ಇಳಿದಿದೆ. ಚಿಲ್ಲರೆ ಹಣದುಬ್ಬರ ಎರಡಂಕಿ ದಾಟಿ ಶೇ  10.50ರಷ್ಟಾಗಿದೆ.

`ಡಬ್ಲ್ಯುಪಿಐ ತಗ್ಗಿದರು, ಅಕ್ಕಿ, ಗೋಧಿ, ಬೇಳೆಕಾಳು, ಆಲೂಗೆಡ್ಡೆ ಸೇರಿದಂತೆ ಪ್ರಮುಖ ಆಹಾರ ಪದಾರ್ಧಗಳ ಬೆಲೆ ಇನ್ನೂ ಗರಿಷ್ಠ ಮಟ್ಟದಲ್ಲಿದೆ.
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ `ಡಬ್ಲ್ಯುಪಿಐ' ಕ್ರಮವಾಗಿ ಶೇ 7.32 ಮತ್ತು ಶೇ 7.24ಕ್ಕೆ ಇಳಿಕೆ ಕಂಡಿತ್ತು. ಇದೀಗ ಮೂರನೇ ತಿಂಗಳೂ ಸತತವಾಗಿ ಸಗಟು ಹಣದುಬ್ಬರ ತಗ್ಗಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್  (ಆರ್‌ಬಿಐ) ಜ. 29ರಂದು ಪ್ರಕಟಿಸಲಿರುವ ಹಣಕಾಸು ಪರಾಮರ್ಶೆ ನೀತಿಯಲ್ಲಿ ಬಡ್ಡಿ ದರ ಕಡಿತಕ್ಕೆ ಮುಂದಾಗಬಹುದು  ಎಂಬ ವಿಶ್ಲೇಷಣೆ ನಡೆದಿದೆ.

ಆಹಾರ ಹಣದುಬ್ಬರ ಏರಿಕೆ
ಸಗಟು ಹಣದುಬ್ಬರ ಇಳಿದರೂ,ನವೆಂಬರ್‌ನಲ್ಲಿ ಶೇ 8.50ರಷ್ಟಿದ್ದ ಆಹಾರ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇ 11.16ಕ್ಕೇರಿದೆ.
`ಡಬ್ಲ್ಯುಪಿಐ'ಗೆ ಆಹಾರ ಹಣದುಬ್ಬರ ಕೊಡುಗೆ ಶೇ 14.3ರಷ್ಟಿದೆ.

ಡಿಸೆಂಬರ್‌ನಲ್ಲಿ ಗೋಧಿ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ 23.23ರಷ್ಟು ಹೆಚ್ಚಿದೆ. ಅಕ್ಕಿ ಶೇ 17.10ರಷ್ಟು ತುಟ್ಟಿಯಾಗಿದೆ. ಆಲೂಗೆಡ್ಡೆ ಮತ್ತು ಈರುಳ್ಳಿ ಧಾರಣೆ ಕ್ರಮವಾಗಿ ಶೇ 89.08 ಮತ್ತು ಶೇ 69.24ರಷ್ಟು ಏರಿದೆ. ಹಾಲು-ಹಣ್ಣಿನ ದರ ಕ್ರಮವಾಗಿ ಶೇ 5.85 ಮತ್ತು ಶೆ 5.76ರಷ್ಟು ಇಳಿದಿದೆ.
ನವೆಂಬರ್‌ನಲ್ಲಿ ಶೇ 14.19ರಷ್ಟು ದುಬಾರಿಯಾಗಿದ್ದ ಮೊಟ್ಟೆ, ಮೀನು ಮತ್ತು ಮಾಂಸದ ಬೆಲೆ ಡಿಸೆಂಬರ್‌ನಲ್ಲಿ ತುಸು ತಗ್ಗಿ ಶೇ 10.8ಕ್ಕಿಳಿದಿದೆ. ತೈಲ ಮತ್ತು ಇಂಧನ ಹಣದುಬ್ಬರ ಶೇ 10.02ರಿಂದ ಶೇ 9.38ಕ್ಕಿಳಿದಿದೆ. ತಯಾರಿಕಾ ಸರಕು ಧಾರಣೆ ಶೇ 5.04ಕ್ಕೆ ತಗ್ಗಿದೆ.

ಚಿಲ್ಲರೆ ಹಣದುಬ್ಬರ ಹೆಚ್ಚಳ
ತರಕಾರಿ, ಖಾದ್ಯತೈಲ, ಬೇಳೆಕಾಳು, ದ್ವಿದಳ ಧಾನ್ಯಗಳ ಬೆಲೆ ಹೆಚ್ಚಳದಿಂದ  ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ಡಿಸೆಂ    ಬರ್‌ನಲ್ಲಿ ಶೇ 10.56ಕ್ಕೆ ಏರಿಕೆ ಕಂಡಿದೆ. ಇದು ಅಕ್ಟೋಬರ್, ನವೆಂಬರ್‌ನಲ್ಲಿ ಕ್ರಮವಾಗಿ ಶೇ 9.75 ಮತ್ತು    ಶೇ 9.90ರಷ್ಟಿತ್ತು.

ತರಕಾರಿ ಮತ್ತು ಖಾದ್ಯತೈಲ ಡಿಸೆಂಬರ್‌ನಲ್ಲಿ ಶೇ 25.71 ಮತ್ತು  ಶೇ 16.73ರಷ್ಟು ತುಟ್ಟಿಯಾಗಿವೆ. ಸಕ್ಕರೆ ಧಾರಣೆ ಶೇ 13.55ರಷ್ಟು ಹೆಚ್ಚಿದೆ. ನವೆಂಬರ್‌ನಲ್ಲಿ ಶೇ 13.70ರಷ್ಟಿದ್ದ ಬೇಳೆಕಾಳು ಬೆಲೆ ಡಿಸೆಂಬರ್‌ನಲ್ಲಿ ತುಸು ತಗ್ಗಿ ಶೇ 13.46ಕ್ಕಿಳಿದಿದೆ. ಮೊಟ್ಟೆ, ಮೀನು, ಮಾಂಸ ಶೇ 11.64ರಷ್ಟು ತುಟ್ಟಿಯಾಗಿವೆ. ಬಟ್ಟೆ, ಪಾದರಕ್ಷೆ ದರವೂ ಶೇ 10.74ರಷ್ಟು ಏರಿಕೆಯಾಗಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ `ಸಿಪಿಐ' ಡಿಸೆಂಬರ್‌ನಲ್ಲಿ ಕ್ರಮವಾಗಿ ಶೇ 10.42 ಮತ್ತು ಶೇ 10.74ಕ್ಕೇರಿದೆ.
ಡಬ್ಲ್ಯುಪಿಐ ತಗ್ಗಿರುವುದರಿಂದ `ಆರ್‌ಬಿಐ' ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.