ADVERTISEMENT

ಹಣದುಬ್ಬರ: ಹೊಸ ಗ್ರಾಹಕ ದರ ಶ್ರೇಣಿ ಜಾರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 16:50 IST
Last Updated 19 ಫೆಬ್ರುವರಿ 2011, 16:50 IST

ನವದೆಹಲಿ (ಪಿಟಿಐ): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ತತ್ತರಿಸಿರುವ ಹಿನ್ನೆಲೆಯಲ್ಲಿ, ಹಣದುಬ್ಬರ ದರ  ಅಳೆಯಲು ಕೇಂದ್ರ ಸರ್ಕಾರವು ಶುಕ್ರವಾರ ಹೊಸ ಗ್ರಾಹಕ ದರ ಶ್ರೇಣಿ  ಪ್ರಕಟಿಸಿದೆ. 

ಐದು ಪ್ರಮುಖ  ಸರಕು ಗುಂಪುಗಳಾದ ಆಹಾರ, ಪಾನೀಯ, ತಂಬಾಕು, ತೈಲ ಮತ್ತು ವಿದ್ಯುತ್, ಗೃಹ, ಪಾದರಕ್ಷೆ, ಬಟ್ಟೆಗಳಿಗೆ ಈ ದರ ಶ್ರೇಣಿ ಅನ್ವಯಿಸಲಿದ್ದು, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ. ಗ್ರಾಹಕ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಸಿಪಿಐ) ಜನವರಿ ತಿಂಗಳಲ್ಲಿ ಶೇ 6ರಷ್ಟು ತಲುಪಿದೆ. ಇದೇ ಮೊದಲ ಬಾರಿಗೆ ಹಣದುಬ್ಬರ ಅಳೆಯಲು ಸರ್ಕಾರ ಹೊಸ ಶ್ರೇಣಿ  ಜಾರಿಗೊಳಿಸುತ್ತಿದೆ. ಆದರೆ, ಇದರಲ್ಲಿ ವಾರ್ಷಿಕ ಹಣದುಬ್ಬರ ದರವನ್ನು ಒಟ್ಟುಗೂಡಿಸಲಾಗುವುದಿಲ್ಲ ಎಂದು ಕಾರ್ಯಕ್ರಮ ಜಾರಿ ಮತ್ತು ಅಂಕಿ ಸಂಖ್ಯೆಗಳ ಇಲಾಖೆ ಪ್ರಕಟಣೆ ತಿಳಿಸಿದೆ.

ಹೊಸ ಶ್ರೇಣಿಯಂತೆ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ ಜನವರಿ 2011ಕ್ಕೆ 106 ಎಂದು ಅಂದಾಜಿಸಲಾಗಿದೆ. ಇದನ್ನು ಇಡಿ ವರ್ಷದ ಒಟ್ಟಾರೆ ವಾರ್ಷಿಕ ಮಟ್ಟ ಆಧರಿಸಿ ಅಳೆಯಲಾಗುತ್ತದೆ. ಆದರೆ, ಒಂದು ವರ್ಷದ ನಂತರವೇ ಹೊಸ ದರ ಶ್ರೇಣಿ ಮೂಲಕ  ಕರಾರುವಾಕ್ಕಾದ ಹಣದುಬ್ಬರ ದರವನ್ನು ಅಳೆಯಲು ಸಾಧ್ಯ ಎಂದು ಸಚಿವಾಲಯ ಹೇಳಿದೆ. ಜನವರಿ ತಿಂಗಳಿಗೆ ಅಂತ್ಯಗೊಂಡಂತೆ ಗ್ರಾಮೀಣ ಗ್ರಾಹಕ ದರ ಸೂಚ್ಯಂಕ 107 ಹಾಗೂ  ನಗರ ಗ್ರಾಹಕ ಸೂಚ್ಯಂಕ ದರ 104 ಎಂದು ಗುರುತಿಸಲಾಗಿದೆ.

ಹೊಸ ಗ್ರಾಹಕ ದರ ದತ್ತಾಂಶಗಳನ್ನು ಸಂಗ್ರಹಿಸಿದ ನಂತರ ಮುಂದಿನ ಹಣಕಾಸು ವರ್ಷದಿಂದ ಇದು ಸಂಪೂರ್ಣವಾಗಿ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಒಂದು ವರ್ಷ ಕಳೆಯುವವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ಹಣದುಬ್ಬರ ದರ ಲೆಕ್ಕಹಾಕಲಾಗುತ್ತದೆ. ಹೊಸ ದರ ಶ್ರೇಣಿಯಲ್ಲಿನ ಅಂಕಿ ಅಂಶಗಳು ತಾತ್ಕಾಲಿಕ ಮತ್ತು  ಕಾಲಕಾಲಕ್ಕೆ ಪರಿಷ್ಕರಣೆಗೆ ಒಳಪಡುತ್ತಿರುತ್ತದೆ ಎಂದೂ  ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.