ADVERTISEMENT

ಹಣ ಗಳಿಕೆ, ವೆಚ್ಚದಲ್ಲಿ ಸಾಮ್ಯತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST
ಹಣ ಗಳಿಕೆ, ವೆಚ್ಚದಲ್ಲಿ ಸಾಮ್ಯತೆ
ಹಣ ಗಳಿಕೆ, ವೆಚ್ಚದಲ್ಲಿ ಸಾಮ್ಯತೆ   

ನವದೆಹಲಿ (ಪಿಟಿಐ): ಹಣ ಗಳಿಸುವುದು ಮತ್ತು ಅದನ್ನು ವೆಚ್ಚ ಮಾಡುವುದರಲ್ಲಿ ಹಲವಾರು ಸಾಮ್ಯತೆಗಳು ಇವೆ ಎಂದು ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿರುವ ಬಿಲ್ ಗೇಟ್ಸ್, ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.

ಮೈಕ್ರೊಸಾಫ್ಟ್ ಸಂಸ್ಥೆಯಲ್ಲಿ ನಾವು ಪ್ರತಿಭಾನ್ವಿತ ಎಂಜಿನಿಯರ್ ಮತ್ತು ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತೇವೆ. ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್‌ನಲ್ಲಿ ನಾವು  ತಂತ್ರಜ್ಞರ ಬದಲಿಗೆ ಆರೋಗ್ಯ ರಕ್ಷಕ ಪರಿಣತರು ಮತ್ತು ವಿಜ್ಞಾನಿಗಳನ್ನು ನೇಮಿಸಿಕೊಳ್ಳುತ್ತೇವೆ. ಮೈಕ್ರೊಸಾಫ್ಟ್‌ನಲ್ಲಿನ ನನ್ನ ಅನುಭವವು ಫೌಂಡೇಷನ್ನಿನ ಚಟುವಟಿಕೆಗಳಲ್ಲಿ ನನಗೆ ಗಮನಾರ್ಹವಾಗಿ ನೆರವಿಗೆ ಬರುತ್ತಿದೆ. ಫೌಂಡೇಷನ್ ನಿರ್ವಹಿಸುವುದು ಎಂದರೆ ಸಾಫ್ಟ್‌ವೇರ್ ಸಂಸ್ಥೆಯೊಂದನ್ನು ನಿರ್ವಹಿಸಿದಂತೆ’ ಎಂದರು.

ಬಿಡುವಿಲ್ಲದ ಕಾರ್ಯಕ್ರಮ:  ವಿಶ್ವದ ಅತಿ ದೊಡ್ಡ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇರುವ  ಮೈಕ್ರೊಸಾಫ್ಟ್‌ನ ಸಹ ಸ್ಥಾಪಕ ಬಿಲ್ ಗೇಟ್ಸ್ ಮತ್ತು  ಬಂಡವಾಳ ಹೂಡಿಕೆದಾರ ವಾರನ್ ಬಫೆಟ್, ಭಾರತದ ಸಿರಿವಂತರೂ ದಾನಧರ್ಮಕ್ಕೆ ಕಟಿಬದ್ಧರಾಗಿರುವಂತೆ ಮನವೊಲಿಸುವ ಉದ್ದೇಶದಿಂದ ಭಾರತಕ್ಕೆ ಭೇಟಿ ನೀಡಿದ್ದಾರೆ.

 ಬಿಲ್ ಗೇಟ್ಸ್, ಅವರ ಪತ್ನಿ ಮಿಲಿಂಡಾ, ವಾರನ್ ಬಫೆಟ್ ಅವರು ಗುರುವಾರ ಇಲ್ಲಿ ತಮ್ಮ ದಾನ ದತ್ತಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಭಾರತದ ಸಿರಿವಂತರು ತಮ್ಮ ಸಂಪತ್ತಿನ ಕೆಲ ಭಾಗವನ್ನು ದಾನಧರ್ಮದ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ವಾಗ್ದಾನ ನೀಡುವಂತೆ ಮಾಡುವ ಉದ್ದೇಶದಿಂದ ಈ ಇಬ್ಬರೂ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.   ಕಳೆದ ವರ್ಷ ಇದೇ ಉದ್ದೇಶದಿಂದ ಇವರು ಚೀನಾಕ್ಕೆ ಭೇಟಿ ನೀಡಿದ್ದರು.

‘ಯಾರ ಮೇಲೂ ಒತ್ತಡ ಹೇರುವ ಉದ್ದೇಶದಿಂದ ನಾವಿಲ್ಲಿಗೆ ಬಂದಿಲ್ಲ. ದಾನಧರ್ಮದ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ನಿಲುವು ತಳೆದಿರುತ್ತಾರೆ’ ಎಂದು ಬಫೆಟ್ ಬುಧವಾರ ಬೆಂಗಳೂರಿನಲ್ಲಿ ಅಭಿಪ್ರಾಯಪಟ್ಟಿದ್ದರು.

‘ನಮ್ಮ ದಾನ ಧರ್ಮದ ಚಟುವಟಿಕೆಗಳ ಬಗ್ಗೆ ನಾವು ಭಾರತದ ಕುಬೇರರ ಜೊತೆ ಮಾಹಿತಿ ಹಂಚಿಕೆ ಮಾಡಿಕೊಳ್ಳುತ್ತೇವೆ. ಜೊತೆಗೆ ಅವರೇನು ಮಾಡುತ್ತಿದ್ದಾರೆ ಎನ್ನುವುದನ್ನೂ ತಿಳಿದುಕೊಳ್ಳಲು ಬಯಸುತ್ತೇವೆ’ ಎಂದು ಹೇಳಿದ್ದರು. ದಾನಧರ್ಮದ ಕಾರ್ಯಕ್ರಮಗಳಿಗೆ ಇವರಿಬ್ಬರೂ ಭಾರತದ ಶ್ರೀಮಂತರಿಂದ ‘ವಾಗ್ದಾನ ನೀಡಿ’ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಉದ್ದೇಶಿಸಿದ್ದಾರೆ.

ಫೋಬ್ಸ್ ನಿಯತಕಾಲಿಕೆಯು ಪಟ್ಟಿ ಮಾಡಿರುವ ವಿಶ್ವ ಕುಬೇರರ ಪಟ್ಟಿಯಲ್ಲಿ ಗೇಟ್ಸ್ (55) ದ್ವಿತೀಯ ಮತ್ತು ವಾರನ್ ಬಫೆಟ್ (80) ತೃತೀಯ ಸ್ಥಾನದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.