ADVERTISEMENT

ಹಿಂದೂಸ್ತಾನ್ ಜಿಂಕ್ ಷೇರು ವಿಕ್ರಯ ಚಿಂತನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST

ನವದೆಹಲಿ (ಪಿಟಿಐ): ಹಿಂದೂಸ್ತಾನ್ ಜಿಂಕ್ ಲಿ.(ಎಚ್‌ಜೆಡ್‌ಎಲ್) ಮತ್ತು ಬಾಲ್ಕೊ ಕಂಪೆನಿಯಲ್ಲಿನ ಸರ್ಕಾರದ ಷೇರುಪಾಲನ್ನು ಎಲೆಕ್ಟ್ರಾನಿಕ್ ಹರಾಜು ಪ್ರಕ್ರಿಯೆ (ಇ-ಹರಾಜು) ಮೂಲಕ ಮಾರಾಟ ಮಾಡಲು ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ.

`ಇ-ಹರಾಜು' ಪ್ರಕ್ರಿಯೆ ಮೂಲಕ ಮುಕ್ತ ಮತ್ತು ಪಾರದರ್ಶಕವಾಗಿ  ಷೇರುಗಳ ಮಾರಾಟ ನಡೆಯಲಿದೆ. ಈ ಕಂಪೆನಿಗಳಲ್ಲಿ ಈಗಾಗಲೇ ಗರಿಷ್ಠ ಷೇರು ಪಾಲು ಹೊಂದಿರುವವರು ಸಹ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಹಣಕಾಸು ಕಾರ್ಯದರ್ಶಿ ಆರ್.ಎಸ್.ಗುಜ್ರಾಲ್ ಇತ್ತೀಚೆಗೆ ಗಣಿ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಕೇಂದ್ರ ಸರ್ಕಾರ `ಎಚ್‌ಜೆಡ್‌ಎಲ್'ನಲ್ಲಿ ಶೇ 29.5 ಮತ್ತು `ಬಾಲ್ಕೊ'ದಲ್ಲಿ ಶೇ 49ರಷ್ಟು ಷೇರುಪಾಲು ಹೊಂದಿದೆ. ಉಳಿದಂತೆ ಈ ಎರಡೂ ಕಂಪೆನಿಗಳಲ್ಲಿ ಅನಿಲ್ ಅಗರ್‌ವಾಲ್ ಒಡೆತನದ ವೇದಾಂತ ಸಮೂಹ ಗರಿಷ್ಠ ಪಾಲು ಹೊಂದಿದೆ. ಸರ್ಕಾರದ ಷೇರುಪಾಲನ್ನು ರೂ. 17,275 ಕೋಟಿಗೆ ಖರೀದಿಸಲು ಸಿದ್ಧ ಎಂದು ವೇದಾಂತ ಸಮೂಹ ಜನವರಿಯಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು.

ADVERTISEMENT

ಈ ಕಂಪೆನಿಗಳಲ್ಲಿ ಅಲ್ಪಪಾಲು ಷೇರು ಇರುವುದರಿಂದ ಸರ್ಕಾರಿ ಸ್ವಾಮ್ಯದ ಕಂಪೆನಿ ಎನ್ನಲು ಸಾಧ್ಯವಿಲ್ಲ. ಆದ್ದರಿಂದ ಉಳಿದ ಷೇರುಪಾಲನ್ನೂ ಮಾರುವುದೇ ಉತ್ತಮ ಎಂಬ ನಿರ್ಧಾರಕ್ಕೆ ಹಣಕಾಸು ಸಚಿವಾಲಯ ಬಂದಿದೆ ಎನ್ನಲಾಗಿದೆ.
`ಎಚ್‌ಜೆಡ್‌ಎಲ್'  2011-12ನೇ ಸಾಲಿನಲ್ಲಿ ರೂ. 5,526 ಕೋಟಿ ನಿವ್ವಳ ಲಾಭ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.