ADVERTISEMENT

ಹಿಂಸೆಗೆ ತಿರುಗಿದ ಚಿನ್ನಾಭರಣ ವರ್ತಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಬಜೆಟ್‌ನ್ಲ್ಲಲಿನ ತೆರಿಗೆ ಹೆಚ್ಚಳ ಪ್ರಸ್ತಾವ ವಿರೋಧಿಸಿ ಚಿನ್ನಾಭರಣ ವರ್ತಕರು ನಡೆಸುತ್ತಿರುವ ಪ್ರತಿಭಟನೆಯು ಸೋಮವಾರ ಹಿಂಸೆಗೆ ತಿರುಗಿದ ಘಟನೆ ನಡೆದಿದೆ.ಮುಂಬೈನಲ್ಲಿ ವರ್ತಕರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದರೆ, ಗಾಜಿಯಾಬಾದ್‌ನಲ್ಲಿ ಹಲವಾರು ರೈಲಗಳ ಸಂಚಾರಕ್ಕೆ ಅಡ್ಡಿಪಡಿಸಿದರು.

ಮುಂಬೈನ ಝವೇರಿ ಬಜಾರ್, ನವದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವರ್ತಕರು ಕಳೆದ ಮೂರು ವಾರಗಳಿಂದ ಧರಣಿ ನಡೆಸುತ್ತಿದ್ದಾರೆ. ಮುಂಬೈನಲ್ಲಿ ಪೊಲೀಸರು ವರ್ತಕರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಚಿನ್ನದ ಆಮದು ಮೇಲಿನ ಸುಂಕವನ್ನು ಶೇ 2ರಿಂದ ಶೇ 4ಕ್ಕೆ ಏರಿಸಲು ಮತ್ತು ಬ್ರಾಂಡೆಡ್‌ರಹಿತ ಚಿನ್ನಾಭರಣಗಳ ಮೇಲೆ ಅಬಕಾರಿ ಸುಂಕ ವಿಧಿಸಲು ಉದ್ದೇಶಿಸಿರುವುದಕ್ಕೆ ವರ್ತಕರು ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ದೇಶದಲ್ಲಿನ ಬಹುತೇಕ ಚಿನ್ನಾಭರಣ ಮಾರಾಟ ಸಂಸ್ಥೆಗಳು ಕೂಡ ವಹಿವಾಟು ಸ್ಥಗಿತಗೊಳಿಸಿ, ಚಳವಳಿಗೆ ಬೆಂಬಲ ಸೂಚಿಸಿವೆ.ಕೇಂದ್ರ ಸರ್ಕಾರವು ತೆರಿಗೆ ಹೆಚ್ಚಳ ಪ್ರಸ್ತಾವ ಕೈಬಿಡುವ ನಿರ್ಧಾರ ಪ್ರಕಟಿಸುವವರೆಗೆ ಈ ಪ್ರತಿಭಟನೆ ಮುಂದುವರೆಯಲಿದೆ ಎಂದು ಅಖಿಲ ಭಾರತ್ ಸರಾಫ್ ಸಂಘದ ಅಧ್ಯಕ್ಷ ಶೀಲ್‌ಚಂದ್ ಜೈನ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.