ADVERTISEMENT

ಹೊಸವರ್ಷ 10ಲಕ್ಷ ನೌಕರಿ ಸೃಷ್ಟಿ

ಉದ್ಯೋಗಾಕಾಂಕ್ಷಿಗಳ ಪಾಲಿಗೆ 2013 ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ನವದೆಹಲಿ(ಪಿಟಿಐ): ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ನೂತನ ವರ್ಷ ಉದ್ಯೋಗ ಆಕಾಂಕ್ಷಿಗಳ ಪಾಲಿಗೆ ಭಾರಿ ಆಶಾದಾಯಕವೂ ಆಗಿದೆ. 2013ನೇ ವರ್ಷ ಏನಿಲ್ಲವೆಂದರೂ 10 ಲಕ್ಷ ಹೊಸ ನೌಕರಿಗಳನ್ನು ಸೃಷ್ಟಿಸಿಕೊಡಲಿದೆ!ಮುಖ್ಯವಾಗಿ `ಎಫ್‌ಎಂಸಿಜಿ', ಆರೋಗ್ಯ ಶುಶ್ರೂಷೆ ಮತ್ತು `ಮಾಹಿತಿ ತಂತ್ರಜ್ಞಾನ' ಕ್ಷೇತ್ರ ಸೇರಿದಂತೆ ವಿವಿಧ ಉದ್ಯಮ ವಲಯಗಳಲ್ಲಿ ಆಕಾಂಕ್ಷಿಗಳ ಪಾಲಿಗೆ ಒಟ್ಟು 10 ಲಕ್ಷ ಉದ್ಯೋಗಾವಕಾಶ ಒದಗಲಿವೆ.

ಜಾಗತಿಕ ಆರ್ಥಿಕ ಅನಿಶ್ಚಯತೆ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿ ವಿಚಾರ ಅಷ್ಟೇನೂ ಆಶಾದಾಯಕವಾಗಿರದು. 2013ರಲ್ಲಿ ಹೆಚ್ಚೆಂದರೆ 7 ಲಕ್ಷ ನೌಕರಿ ಲಭ್ಯವಾಗಬಹುದು ಎಂದು ಈ ಮೊದಲು ಅಂದಾಜು ಮಾಡಲಾಗಿದ್ದಿತು.ಆದರೆ, ನಿರೀಕ್ಷೆಯನ್ನೂ ಮೀರಿ ಹೊಸ ನೌಕರಿಗಳು ಸೃಷ್ಟಿಯಾಗಲಿವೆ ಎಂಬುದನ್ನು `ಮೈ ಹೈರಿಂಗ್ ಕ್ಲಬ್ ಡಾಟ್ ಕಾಂ' ಅಂತರ್ಜಾಲ ತಾಣ ಇತ್ತೀಚೆಗೆ ನಡೆಸಿದ ಸಮೀಕ್ಷೆ ಮೂಲಕ ಖಚಿತಪಡಿಸಿದೆ. ಇದಕ್ಕಾಗಿ ಈ ಡಾಟ್ ಕಾಂ, 12 ವಿವಿಧ ಉದ್ಯಮ ವಲಯಗಳಲ್ಲಿನ 4450 ಕಂಪೆನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದಿತು.

ಸಂಘಟಿತ ವಲಯದಲ್ಲಿಯೇ ಈ 10 ಲಕ್ಷ ಹೊಸ ಉದ್ಯೋಗ ಲಭ್ಯವಾಗಲಿವೆ. ಅಸಂಘಟಿತ ವಲಯದಲ್ಲಿನ ಕೆಲಸದ ಅವಕಾಶಗಳನ್ನು ಸಮೀಕ್ಷೆ ಲೆಕ್ಕ ಹಾಕಿಲ್ಲ.
ಎಫ್‌ಎಂಸಿಜಿ(1.76 ಲಕ್ಷ ನೌಕರಿ), ಆರೋಗ್ಯ ಶುಶ್ರೂಷೆ(1.72 ಲಕ್ಷ), ಮಾಹಿತಿ ತಂತ್ರಜ್ಞಾನ(1.69 ಲಕ್ಷ), ಹೋಟೆಲ್ -ಪ್ರವಾಸೋದ್ಯಮ ವಲಯ(1.06 ಲಕ್ಷ) ಹಾಗೂ ಚಿಲ್ಲರೆ ವಹಿವಾಟು ಕ್ಷೇತ್ರ(1.02 ಲಕ್ಷ) ಹೊಸದಾಗಿ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿವೆ ಎಂದು  ಸಮೀಕ್ಷೆ ವಿವರಿಸಿದೆ.

ಶಿಕ್ಷಣ, ತರಬೇತಿ ಮತ್ತು ಕನ್ಸಲ್ಟೆನ್ಸಿ ವಿಭಾಗದಲ್ಲಿ 84,200, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ 72,900, ಮಾಧ್ಯಮ ಮತ್ತು ಮನರಂಜನೆ ಸಂಸ್ಥೆಗಳಲ್ಲಿ 66,400 ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ 51,400 ಉದ್ಯೋಗಗಳು ಸೃಷ್ಟಿಯಾಗಲಿವೆ.ಅಲ್ಲದೆ, ವಿವಿಧ ಪರಿಕರಗಳ ತಯಾರಿಕೆ ಕ್ಷೇತ್ರ ಹಾಗೂ ಎಂಜಿನಿಯರಿಂಗ್ ವಿಭಾಗಕ್ಕೂ ಹೊಸ ವರ್ಷದಲ್ಲಿ 63,200 ಕೆಲಸಗಾರರ ಅಗತ್ಯ ಬೀಳಲಿದೆ. ಔಷಧ ತಯಾರಿಕೆ-ಮಾರಾಟ ಕ್ಷೇತ್ರ 43,300 ಹಾಗೂ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿಯೂ 29,870 ನೌಕರರ ನೇಮಕ ನಡೆಯಲಿದೆ ಎಂದು ಸಮೀಕ್ಷೆ ವಿವರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.