ADVERTISEMENT

ಹೊಸ ನೇಮಕ ಪ್ರಮಾಣ ಇಳಿಕೆ

ಹಣಕಾಸು ವರ್ಷಾಂತ್ಯ; ವೇತನ ಪರಿಷ್ಕರಣೆ ಸಮಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 19:59 IST
Last Updated 12 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಹಣಕಾಸು ವರ್ಷದ ಅಂತ್ಯ ಮತ್ತು ವೇತನ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಹೊಸ ನೇಮಕಾತಿ ಪ್ರಮಾಣ ಮಾರ್ಚ್ ತಿಂಗಳಲ್ಲಿ ಶೇ 1.1ರಷ್ಟು ಇಳಿಕೆ ಕಂಡಿದೆ ಎಂದು ಉದ್ಯೋಗ ಮಾಹಿತಿ ತಾಣ     `ನೌಕರಿ ಡಾಟ್ ಕಾಂ' ಹೇಳಿದೆ. 

ಡಿಸೆಂಬರ್, ಜನವರಿ ಮತ್ತು ಫೆಬ್ರುವರಿಯಲ್ಲಿ ನೇಮಕಾತಿ ಚುರುಕಾಗಿತ್ತು.   ಆದರೆ, ಮಾರ್ಚ್‌ನಲ್ಲಿ ಕಾರ್ಪೊರೇಟ್ ವಲಯದ ಹೆಚ್ಚಿನ ಕಂಪೆನಿಗಳು  ಸಿಬ್ಬಂದಿ ವೇತನ ಪರಿಷ್ಕರಣೆ ಮಾಡುತ್ತವೆ. ಹೀಗಾಗಿ ಸಹಜವಾಗಿ ಹೊಸ ನೇಮಕಾತಿಗೆ ಕಡಿವಾಣ ಬಿದ್ದಿದೆ. ಆದರೆ, ವಾರ್ಷಿಕವಾಗಿ ಒಟ್ಟಾರೆ ನೇಮಕಾತಿ ಪ್ರಮಾಣ ಶೇ 11.5ರಷ್ಟು ಹೆಚ್ಚಿದೆ ಎಂದು ಈ ಅಧ್ಯಯನ ತಿಳಿಸಿದೆ.

ಸಾಫ್ಟ್‌ವೇರ್ ಸೇವೆಗಳು, ಹೊರಗುತ್ತಿಗೆ ಮತ್ತು ಜೌಷಧ ವಲಯದ ಕಂಪೆನಿಗಳು 2012-13ನೇ ಸಾಲಿನಲ್ಲಿ ಹೆಚ್ಚಿನ ಪ್ರಮಾಣದ ನೇಮಕಾತಿ ಮಾಡಿಕೊಂಡಿವೆ. ಜಾಗತಿಕ ಆರ್ಥಿಕತೆ ಇನ್ನಷ್ಟು ಚೇತರಿಕೆ ಕಂಡರೆ ಉದ್ಯೋಗ ಮಾರುಕಟ್ಟೆ ಮತ್ತೆ ಚುರುಕುಗೊಳ್ಳಲಿದೆ ಎಂದು `ನೌಕರಿ ಡಾಟ್‌ಕಾಂ'ನ ಮುಖ್ಯ ಹಣಕಾಸು ಅಧಿಕಾರಿ ಅಂಬರೀಶ್ ರಘುವಂಶಿ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ನಲ್ಲಿ ಐ.ಟಿ, ಸಾಫ್ಟ್‌ವೇರ್, ವಾಹನ ಉದ್ಯಮ, ತೈಲ, ಅನಿಲ ವಲಯಗಳಲ್ಲಿ ಹೊಸ ನೇಮಕಾತಿ ತಗ್ಗಿದೆ. ಆದರೆ, ಔಷಧ ವಲಯ, ಹೊರಗುತ್ತಿಗೆ ಮತ್ತು ರಿಯಲ್ ಎಸ್ಟೇಟ್ ಕಂಪೆನಿಗಳು ಹೊಸ ನೇಮಕಾತಿ ಮಾಡಿಕೊಂಡಿವೆ. ಐ.ಟಿ ಆಧಾರಿತ ವಲಯದಲ್ಲಿ ನೇಮಕಾತಿ ಶೇ 8ರಷ್ಟು ಹೆಚ್ಚಿದೆ. ಬ್ಯಾಂಕಿಂಗ್, ವಿಮಾ ಕ್ಷೇತ್ರಗಳಲ್ಲಿ ಶೇ 13ರಷ್ಟು ಇಳಿಕೆಯಾಗಿದೆ. ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಹಣಕಾಸು ರಂಗಗಳು ಕನಿಷ್ಠ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಂಡಿವೆ.

ಪ್ರಮುಖ 7 ಮೆಟ್ರೊ ನಗರಗಳಲ್ಲಿ ಬೆಂಗಳೂರು ಮತ್ತು ಪುಣೆ ಹೊಸ ನೇಮಕಾತಿಯಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. ಹೈದರಾಬಾದ್‌ನಲ್ಲಿ ನೇಮಕಾತಿ ಶೇ 5ರಷ್ಟು ಹೆಚ್ಚಿದರೆ, ದೆಹಲಿ ಮತ್ತು ಮುಂಬೈನಲ್ಲಿ ಶೇ 5ರಷ್ಟು ಇಳಿಕೆಯಾಗಿವೆ. ಚೆನ್ನೈನಲ್ಲಿ ದಾಖಲೆ ಮಟ್ಟದಲ್ಲಿ ಶೇ 11ರಷ್ಟು ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.