ADVERTISEMENT

ಹೊಸ ಬಡ್ಡಿದರ: ಗೃಹ ಸಾಲ ಅಗ್ಗ

‘ಎಂಸಿಎಲ್‌ಆರ್‌’ಗೆ ಜೋಡಣೆ: ಗ್ರಾಹಕರಿಗೆ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಹೊಸ ಬಡ್ಡಿದರ: ಗೃಹ ಸಾಲ ಅಗ್ಗ
ಹೊಸ ಬಡ್ಡಿದರ: ಗೃಹ ಸಾಲ ಅಗ್ಗ   

ನವದೆಹಲಿ: 2016ರ ಏಪ್ರಿಲ್‌ ಮುಂಚೆ ಪಡೆದಿರುವ ಗೃಹ ಸಾಲಗಳು ಇನ್ನು ಮುಂದೆ ಅಗ್ಗವಾಗಲಿವೆ.

ಈ ಸಾಲಗಳಿಗೆ ವಿಧಿಸುವ ಬಡ್ಡಿ ದರ ನಿಗದಿಪಡಿಸಲು ವಾಣಿಜ್ಯ ಬ್ಯಾಂಕ್‌ಗಳು ಏಪ್ರಿಲ್‌ 1ರಿಂದ ಹೊಸ ವಿಧಾನ ಅಳವಡಿಸಿಕೊಳ್ಳಲಿವೆ. ಹೊಸ ವ್ಯವಸ್ಥೆಯಡಿ, ಬದಲಾಗುವ ಬಡ್ಡಿ ದರದ ಸಾಲಗಳನ್ನು, ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರಕ್ಕೆ (ಎಂಸಿಎಲ್ಆರ್‌) ಜೋಡಿಸಲಾಗುತ್ತಿದೆ. ಬ್ಯಾಂಕ್‌ಗಳು ಈ ಮೊದಲು ಅನುಸರಿಸುತ್ತಿದ್ದ ಮೂಲ ದರಕ್ಕೆ ಹೋಲಿಸಿದರೆ ಈ ಹೊಸ ದರಗಳು ಶೇ 0.50ರಷ್ಟರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಗೃಹ ಸಾಲಗಳ ಕಂತಿನ ಪ್ರಮಾಣವೂ ಇಳಿಕೆಯಾಗಲಿದೆ.

ಮಾರುಕಟ್ಟೆ ದರಗಳಿಗೆ ತಕ್ಕಂತೆ ಗೃಹ ಸಾಲಗಳನ್ನು ಪರಿಷ್ಕರಿಸದ ಬ್ಯಾಂಕ್‌ಗಳು ಈಗ ಹೊಸ ಬಡ್ಡಿ ದರ ಅನ್ವಯಿಸಬೇಕಾಗಿದೆ. ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದಾಗಲೆಲ್ಲ ಬ್ಯಾಂಕ್‌ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣಕ್ಕೆ ಕೇಂದ್ರೀಯ ಬ್ಯಾಂಕ್‌ 2016ರ ಏಪ್ರಿಲ್‌1ರಿಂದ ‘ಎಂಸಿಎಲ್‌ಆರ್‌’ ವ್ಯವಸ್ಥೆ ಜಾರಿಗೆ ತಂದಿತ್ತು. ಮೂಲ ದರ ಆಧರಿಸಿ ಮಂಜೂರು ಮಾಡಿದ ಸಾಲಗಳು ‘ಎಂಸಿಎಲ್‌ಆರ್‌‘ ವ್ಯವಸ್ಥೆಗೆ ಬದಲಾಗಬೇಕಿತ್ತು. ಆದರೆ, ಬ್ಯಾಂಕ್‌ಗಳು ಇದನ್ನು ಪಾಲಿಸಿರಲಿಲ್ಲ.

ADVERTISEMENT

2016ರ ಏಪ್ರಿಲ್‌ ನಂತರದ ಗೃಹ ಸಾಲಗಳಿಗೆ ಮಾತ್ರ ‘ಎಂಸಿಎಲ್ಆರ್‌’ ಪ್ರಯೋಜನ ದೊರೆಯುತ್ತಿದೆ. ಬ್ಯಾಂಕ್‌ಗಳು ಅದಕ್ಕೂ ಮುಂಚಿನ ಗೃಹ ಸಾಲಗಳಿಗೆ ಏಕಪಕ್ಷೀಯವಾಗಿ ಮೂಲ ದರ ಆಧರಿಸಿಯೇ ಬಡ್ಡಿ ವಸೂಲಿ ಮಾಡುತ್ತಿದ್ದವು.  ಇನ್ನು ಮುಂದೆ ಹಾಗೆ ಮಾಡುವಂತಿಲ್ಲ.

ವೈಯಕ್ತಿಕ ಸಾಲ, ಕಾರ್‌ ಖರೀದಿ ಸಾಲಗಳು ಸ್ಥಿರ ಬಡ್ಡಿ ದರ ಆಧರಿಸಿರುವುದರಿಂದ ಅವುಗಳಿಗೆ ಈ ಸೌಲಭ್ಯ ಅನ್ವಯಗೊಳ್ಳುವುದಿಲ್ಲ.
**
ಆಮದು ಸ್ಮಾರ್ಟ್‌ಫೋನ್‌ ದುಬಾರಿ

ಆಮದು ಮಾಡಿಕೊಂಡ ಸ್ಮಾರ್ಟ್‌ಫೋನ್‌, ಕೈಗಡಿಯಾರಗಳು ತುಟ್ಟಿಯಾಗಲಿವೆ. ಇವುಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿಯನ್ನು  ಬಜೆಟ್‌ನಲ್ಲಿ  ಶೇ 20ಕ್ಕೆ ಹೆಚ್ಚಿಸಲಾಗಿದೆ. ಆಮದು ಮಾಡಿಕೊಳ್ಳುವ ವಜ್ರದ ಆಭರಣ ಮತ್ತು ರೇಷ್ಮೆ ಬಟ್ಟೆ ದುಬಾರಿಯಾಗಲಿವೆ. ಸೌಂದರ್ಯ ಪ್ರಸಾಧನಗಳೂ ತುಟ್ಟಿಯಾಗಲಿವೆ. ಆದರೆ, ಚರ್ಮದ ಉತ್ಪನ್ನಗಳು ಮತ್ತು ಗೋಡಂಬಿ ಅಗ್ಗವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.