ADVERTISEMENT

‘ಆಧಾರ್‌’ ಗೊಂದಲ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2013, 19:59 IST
Last Updated 29 ಸೆಪ್ಟೆಂಬರ್ 2013, 19:59 IST

ರ್ಕಾರದ ವಿವಿಧ ಸೇವೆಗಳನ್ನು ಪಡೆದು­ಕೊಳ್ಳಲು ‘ಆಧಾರ್‌’ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಮಧ್ಯಂತರ ತೀರ್ಪು ನೀಡಿದೆ. ಇದರಿಂದ ‘ಆಧಾರ್’ ಗುರುತಿನ ಸಂಖ್ಯೆ ಹೊಂದುವ ಕುರಿತು ಜನರಲ್ಲಿದ್ದ ಗೊಂದಲ ದೂರವಾಗಿದ್ದರೂ ಅದಿಲ್ಲದಿದ್ದರೆ ಸಬ್ಸಿಡಿ ಹಣ ಕಳೆದುಕೊಳ್ಳ­ಬೇಕಲ್ಲ ಎನ್ನುವ ಆತಂಕವೂ ಮೂಡಿದೆ.  ಕೋರ್ಟ್‌ನ ಈ ಮಧ್ಯಂತರ ತೀರ್ಪು, ‘ಆಧಾರ್’ ಗುರುತಿನ ಚೀಟಿ ನೀಡುವ ಪ್ರಕ್ರಿಯೆಗೆ ದೇಶದಾದ್ಯಂತ ಇನ್ನಷ್ಟು ಚುರುಕು ನೀಡುವ ಸಾಧ್ಯತೆಯನ್ನಂತೂ ಕಡಿಮೆ ಮಾಡಿದೆ.

ವ್ಯಕ್ತಿಯ ಗುರುತು ಮತ್ತು ವಿಳಾಸದ ದೃಢೀಕರಣಕ್ಕೆ ನೆರವಾಗುವ  12 ಸಂಖ್ಯೆಯ ‘ಆಧಾರ್’ ಸಂಖ್ಯೆಯು ಭಾರತೀಯರಿಗೆ ಕಡ್ಡಾಯವೋ ಅಥವಾ ಐಚ್ಛಿಕವೋ ಎನ್ನುವ ಗೊಂದಲ ಇತ್ತೀಚೆಗೆ ಜನರಲ್ಲಿ ಮೂಡಿತ್ತು. 2009ರಲ್ಲಿ  ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಉದ್ದೇಶದಿಂದ  ವಿಶಿಷ್ಟ ಗುರುತು ಪ್ರಾಧಿಕಾರ (Unique Iden­tifi­cation Authority of India – UIDAI) ರಚಿಸಲಾಗಿತ್ತು. ಇನ್ಫೊಸಿ­ಸ್‌ನ ಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ ಅವರನ್ನು ಪ್ರಾಧಿ­ಕಾರದ ಅಧ್ಯಕ್ಷರನ್ನಾಗಿ ನೇಮಿಸ­ಲಾಗಿತ್ತು.

ಸಮಾಜ ಕಲ್ಯಾಣ ಕಾರ್ಯಕ್ರಮಗಳ ಜಾರಿಯಲ್ಲಿ ಎದುರಾಗುವ ಸಮಸ್ಯೆ­ಗಳನ್ನು ಮತ್ತು ಭ್ರಷ್ಟಾಚಾರ ತೊಡೆದು ಹಾಕಿ ಫಲಾನುಭವಿಗಳಿಗೆ ಕಿರಿಕಿರಿ ಮುಕ್ತ ಸೇವೆ ಒದಗಿಸಲು ‘ಆಧಾರ್’ ನೆರವಾಗ­ಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು.  ಸಬ್ಸಿಡಿಯನ್ನು ಫಲಾನುಭವಿ­ಗಳಿಗೆ ನೇರವಾಗಿ ಪಾವತಿಸುವ, ಪಿಂಚಣಿ, ವಿದ್ಯಾರ್ಥಿವೇತನ ಮತ್ತಿತರ ಯೋಜನೆ­ಗಳ ಹಣಕಾಸಿನ ನೆರವು  ನೀಡಲೂ ‘ಆಧಾರ್’ ಸಂಖ್ಯೆ ಕಡ್ಡಾಯಗೊಳಿಸ­ಲಾಗಿತ್ತು. ನೇರ ನಗದು ವರ್ಗಾವಣೆಗೆ ‘ಆಧಾರ್’ ಇಲ್ಲದೇ ಜಾರಿಗೊಳಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಒಂದೆಡೆ ಎಲ್‌ಪಿಜಿ ಸಬ್ಸಿಡಿ ಪಡೆ­ಯಲು ‘ಆಧಾರ್’ ಕಡ್ಡಾಯ ಎಂದು ದೊಡ್ಡದಾಗಿ ಜಾಹೀರಾತು ನೀಡುವುದು ಮತ್ತು ಇನ್ನೊಂದೆಡೆ `ಆಧಾರ್’ ಸಂಖ್ಯೆ ಪಡೆಯುವುದು ಕಡ್ಡಾಯವಲ್ಲ ಎಂದು ಹೇಳುವ ಸರ್ಕಾರದ ಧೋರಣೆಯು ಜನರಲ್ಲಿ ಗೊಂದಲ ಮೂಡಿಸಿತ್ತು.

ವೆಚ್ಚ
ಈ ಯೋಜನೆಗೆರೂ 18,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸ­ಲಾಗಿದೆ. 2012–13ನೇ ಸಾಲಿನ ಬಜೆಟ್‌ನಲ್ಲಿರೂ 1,700 ಕೋಟಿ ಹಂಚಿಕೆ ಮಾಡಲಾಗಿತ್ತು. ರಾಜ್ಯದಲ್ಲಿ ‘ಆಧಾರ್’ ನೋಂದಣಿ ಕಾರ್ಯವನ್ನು ಒಟ್ಟು 18 ಖಾಸಗಿ ಕಂಪೆನಿ­ಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಒಂದು ನೋಂದಾವಣೆಗೆ ಕಂಪೆನಿಗಳು ಸರ್ಕಾರದಿಂದರೂ26 ಪಡೆದುಕೊಳ್ಳುತ್ತಿವೆ.

ಗೊಂದಲ
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಾಧಿಕಾರ ಸಹ ಜನರ ಬಯೊ ಮೆಟ್ರಿಕ್‌ ಮಾಹಿತಿ ಸಂಗ್ರಹಿಸುತ್ತಿರುವ ಕಾರಣ, ‘ಆಧಾರ್’ ಯೋಜನೆ ಮುಂದು ವರಿಸಬೇಕೇ ಬೇಡವೇ ಎಂಬ ಗೊಂದಲ ಸರ್ಕಾರವನ್ನು 2011ರಲ್ಲೂ ಕಾಡಿತ್ತು.  ಆಗ ‘ಆಧಾರ್’ ನೋಂದಣಿ ಕಾರ್ಯ­ವನ್ನು ಸರಿಸುಮಾರು ಒಂದು ವರ್ಷದ­ವರೆಗೆ ನಿಲ್ಲಿಸಲಾಗಿತ್ತು. ನಂತರ ಕಳೆದ ಡಿಸೆಂಬರ್‌ನಲ್ಲಿ ನೋಂದಣಿ ಕಾರ್ಯಕ್ಕೆ ಮರುಚಾಲನೆ ನೀಡಲಾ­ಯಿತು. ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪಿನ ಹೊರತಾಗಿಯೂ ‘ಆಧಾರ್’ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ.

ಗೊಂದಲದ ಮೂಲ
ಎಲ್ಲ ನಾಗರಿಕರಿಗೆ ‘ಆಧಾರ್’ ಸಂಖ್ಯೆ ವಿತರಣೆ ಮಾಡಿ ಮುಗಿಸುವ ಮೊದಲೇ ಈ ಕಾರ್ಡ್‌ಗಳನ್ನು ಬಳಸಿಕೊಂಡು ಅಕ್ರಮಗಳನ್ನು ತಡೆಯುವ ಪ್ರಯತ್ನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಹಾಕಿದ್ದೇ ಎಲ್ಲ ಗೊಂದಲಗಳಿಗೆ ಕಾರಣ.  ‘ಆಧಾರ್‌’ ಕಾರ್ಡ್‌ ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದರೂ ಅದು ಅಷ್ಟು ವ್ಯವಸ್ಥಿತವಾಗಿಲ್ಲ.

ಗುರುತಿನ ಚೀಟಿಗಳು
ಸದ್ಯಕ್ಕೆ ಆಧಾರ್, ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ), ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪಡಿತರ ಚೀಟಿ, ವಾಹನ ಚಾಲನಾ ಪತ್ರ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಚೀಟಿ, ಭಾವಚಿತ್ರ ಇರುವ ಕ್ರೆಡಿಟ್ ಕಾರ್ಡ್, ಕಿಸಾನ್ ಭಾವಚಿತ್ರ ಪಾಸ್ ಬುಕ್, ಪಿಂಚಣಿದಾರರ ಭಾವಚಿತ್ರ ಇರುವ ಚೀಟಿ ಮತ್ತು ವಿದ್ಯಾರ್ಥಿ ಗುರುತಿನ ಚೀಟಿ, ಖಾಸಗಿ ಸಂಸ್ಥೆಗಳ ಗುರುತಿನ ಚೀಟಿ ಮುಂತಾದವು ಬಳಕೆಯಲ್ಲಿ ಇವೆ.

ಹಿನ್ನೆಲೆ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 2009ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ‘ಭಾರತೀಯ ರಾಷ್ಟ್ರೀಯ ಗುರುತು ಪ್ರಾಧಿಕಾರ ಮಸೂದೆ–-2010’ಯನ್ನು ರಾಜ್ಯಸಭೆ­ಯಲ್ಲಿ ಮಂಡಿಸಲಾಯಿತು. ಯಶವಂತ ಸಿನ್ಹಾ ನೇತೃತ್ವದ ಹಣಕಾಸು ಸ್ಥಾಯಿ ಸಮಿತಿಯು ಈ ಮಸೂದೆ­ಯನ್ನು 2011­ರಲ್ಲಿಯೇ ತಿರಸ್ಕರಿಸಿ, ಕೆಲ ಬದಲಾವಣೆಗಳನ್ನು ಶಿಫಾರಸು ಮಾಡಿತ್ತು. ಎರಡು ವರ್ಷಗಳವರೆಗೆ ಸರ್ಕಾರವು ಸ್ಥಾಯಿ ಸಮಿತಿ ವರದಿ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದೂ ಸದ್ಯದ ಗೊಂದಲಕ್ಕೆ ಕಾರಣವಾಗಿದೆ. 2014ರ ಹೊತ್ತಿಗೆ ‘ಆಧಾರ್’ ನೋಂದಣಿ ಸಂಖ್ಯೆ 43 ಕೋಟಿಗೆ ತಲುಪುವ ನಿರೀಕ್ಷೆ ಇದೆ.

ಆಕ್ಷೇಪ
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಎಸ್. ಪುಟ್ಟಸ್ವಾಮಿ ಅವರು ‘ಆಧಾರ್’ ಕಡ್ಡಾಯ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಾನೂನು ಮಾನ್ಯತೆ ಇಲ್ಲದ ‘ಆಧಾರ್’ ಸಂಖ್ಯೆಯಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗು­ತ್ತಿದೆ ಎಂಬುದು ಅವರ ದೂರಾಗಿತ್ತು.

ಕಾನೂನು ಬೆಂಬಲ ಇಲ್ಲ
ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕಾನೂನಿನ ಬೆಂಬಲವೇ ಇಲ್ಲದಿರುವುದೂ ಒಂದು ಪ್ರಮುಖ ಲೋಪವಾಗಿದೆ. ಕೋರ್ಟ್‌ ತೀರ್ಪೀನ ನಂತರ ಎಚ್ಚೆತ್ತು­ಕೊಂಡಿರುವ ಕೇಂದ್ರ ಸರ್ಕಾರವು, ‘ಆಧಾರ್’ ಸಂಖ್ಯೆಗೆ ಕಾನೂನು ಮಾನ್ಯತೆ ನೀಡಲು ಸಂಸತ್ತಿನ ಚಳಿಗಾಲದ ಅಧಿ­ವೇಶನದಲ್ಲಿ ಮಸೂದೆ  ಮಂಡಿಸಿ ಅಂಗೀಕರಿಸಲು  ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT