ಬಳ್ಳಾರಿ: ಬಳ್ಳಾರಿಯ ಕಂಟೋನ್‌ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ರೈಲ್ವೆ ಇಲಾಖೆಯ ಸ್ಟಾಕ್‌ಯಾರ್ಡ್‌ನಲ್ಲಿ ಅನೇಕ ದಿನಗಳಿಂದ ಇರಿಸಿದ್ದ ಒಟ್ಟು 12 ಸಾವಿರ ಟನ್ ಕಬ್ಬಿಣದ ಅದಿರನ್ನು ಜಿಲ್ಲಾಡಳಿತ ಸೋಮವಾರ ರಾತ್ರಿ ವಶಪಡಿಸಿಕೊಂಡಿದೆ.
ಕೋಲ್ಕತ್ತಾ ಮೂಲದ ಜಿ.ಜಿ. ಎಕ್ಸ್‌ಪೋರ್ಟ್ಸ್‌ಗೆ ಸೇರಿದೆ ಎನ್ನಲಾದ ಒಟ್ಟು ಅಂದಾಜು ರೂ3 ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ರೈಲ್ವೆ ಸ್ಟಾಕ್‌ಯಾರ್ಡ್‌ನಲ್ಲಿ ಇರಿಸಿದ್ದು, ಸುಪ್ರೀಂ ಕೋರ್ಟ್ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಿದ್ದರಿಂದ ಅಲ್ಲಿಯೇ ಬಿಡಲಾಗಿತ್ತು ಎಂದು ರೈಲ್ವೆಇಲಾಖೆ ಮೂಲಗಳು ತಿಳಿಸಿವೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಬುಧವಾರ ಹೇಳಿದ್ದಾರೆ.
ಆದರೆ, ಈ ಅದಿರನ್ನು ಅಕ್ರಮವಾಗಿ ಸಾಗಿಸಿ ತಂದು ಇರಿಸಲಾಗಿದೆಯೇ ಅಥವಾ ಸೂಕ್ತ ಪರ್ಮಿಟ್‌ಗಳೊಂದಿಗೆ ಸಾಗಿಸಲಾಗಿದೆಯೇ ಎಂಬುದನ್ನು ದೃಢಪಡಿಸುವಂತೆ ರಫ್ತು ಕಂಪೆನಿಗೆ ಪತ್ರ ಬರೆದು ಕೋರಲಾಗಿದೆ. ಜಿಲ್ಲೆಯಲ್ಲಿ ಲಭ್ಯ ಅದಿರನ್ನು ಇ-ಟೆಂಡರ್ ಮೂಲಕವೇ ಹರಾಜು ಹಾಕಬೇಕಿದ್ದು, ಇದೀಗ ವಶಪಡಿಸಿಕೊಂಡಿರುವ ಅದಿರನ್ನೂ ಇ- ಟೆಂಡರ್ ಮೂಲಕವೇ ಹರಾಜು ಹಾಕಲಾಗುವುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಸ್ಟಾಕ್‌ಯಾರ್ಡ್‌ನಲ್ಲಿ ಶೇ 10ರಿಂದ 15ರಷ್ಟು ಪ್ರಮಾಣದಲ್ಲಿ ಹೊಸದಾಗಿ ಸಾಗಿಸಿದ ಅದಿರು ದೊರೆತಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.