ADVERTISEMENT

14ರಂದು ಅದಿರು ಹರಾಜು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ):  ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು (ಎನ್‌ಎಂಡಿಸಿ) ಅಕ್ಟೋಬರ್ 14ರಂದು (ಶುಕ್ರವಾರ) ಕರ್ನಾಟಕದಲ್ಲಿ  3 ಲಕ್ಷ ಟನ್ ಕಬ್ಬಿಣದ ಅದಿರಿನ `ಇ- ಹರಾಜು~ ನಡೆಸಲಿದೆ.

ಕಳೆದ10 ದಿನಗಳಲ್ಲಿ `ಎನ್‌ಎಂಡಿಸಿ~ ನಡೆಸುತ್ತಿರುವ ಎರಡನೆಯ`ಇ-ಹರಾಜು~ ಪ್ರಕ್ರಿಯೆ ಇದಾಗಿದೆ. ಅಕ್ಟೋಬರ್ 4ರಂದು ನಡೆದ `ಇ-ಹರಾಜಿನಲ್ಲಿ~ 2  ಲಕ್ಷ ಟನ್ ಕಬ್ಬಿಣ ಅದಿರು ಮಾರಾಟ ಮಾಡಲಾಗಿತ್ತು.

ಕಬ್ಬಿಣ ಅದಿರು ಕೊರತೆಯಿಂದ ಕರ್ನಾಟಕದ ಹಲವು ಉಕ್ಕು ತಯಾರಿಕೆ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಮೂರನೆಯ ಸುತ್ತಿನ `ಇ-ಹರಾಜು~ ಪ್ರಕ್ರಿಯೆ ಮೂಲಕ 3 ಲಕ್ಷ ಟನ್ ಕಬ್ಬಿಣದ ಅದಿರು ಮಾರಾಟಕ್ಕೆ ಮುಂದಾಗಿದ್ದೇವೆ ಎಂದು `ಎನ್‌ಎಂಡಿಸಿ~ಯ ಅಧ್ಯಕ್ಷ ರಾಣಾ ಸೋಮ್ ತಿಳಿಸಿದ್ದಾರೆ.

ADVERTISEMENT

ಮುಂಬರುವ ದಿನಗಳಲ್ಲಿ `ಇ-ಹರಾಜು~ ಪ್ರಕ್ರಿಯೆ ಮೂಲಕ ಮಾರಾಟ ಮಾಡುವ ಕಬ್ಬಿಣದ ಅದಿರಿನ ಪ್ರಮಾಣವನ್ನು ಹೆಚ್ಚಿಸುವ ಕುರಿತು `ಎನ್‌ಎಂಡಿಸಿ~ ಚಿಂತನೆ ನಡೆಸುತ್ತಿದೆ.  ಈ ಹಿನ್ನೆಲೆಯಲ್ಲಿ,  `ನಿಗಾ ಸಮಿತಿ~ಯೊಂದನ್ನು ನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಇದರಿಂದ ಈಗ ಪ್ರತಿ ವಾರ  ನಡೆಯುತ್ತಿರುವ ಅದಿರು `ಇ-ಹರಾಜು~ಗಳ ಸಂಖ್ಯೆ ಹೆಚ್ಚಿಸಬಹುದು. ಇದರಿಂದ ಕಂಪೆನಿಗೆ ಹೆಚ್ಚುವರಿ ಅದಿರು ಸಂಗ್ರಹಿಸುವುದು ತಪ್ಪಿ, ವಿಲೇವಾರಿ ಸರಳವಾಗುತ್ತದೆ ಎಂದು ರಾಣಾ ಹೇಳಿದ್ದಾರೆ. 

ಕಳೆದ ತಿಂಗಳು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ, `ಎನ್‌ಎಂಡಿಸಿ~ ಕರ್ನಾಟಕದಲ್ಲಿ ಹೊರ ತೆಗೆಯುವ ಕಬ್ಬಿಣದ ಅದಿರನ್ನು `ಇ-ಹರಾಜು~ ಪ್ರಕ್ರಿಯೆ ಮೂಲಕ ಮಾರಾಟ ಮಾಡುತ್ತಿದೆ. ಸದ್ಯ `ಎನ್‌ಎಂಡಿಸಿ~ ರಾಜ್ಯದಲ್ಲಿರುವ ಎರಡು ಘಟಕಗಳ ಮೂಲಕ ಪ್ರತಿ ದಿನ 20 ಸಾವಿರ್ ಟನ್‌ಗಳಷ್ಟು ಕಬ್ಬಿಣ ಅದಿರನ್ನು ಹೊರ ತೆಗೆಯುತ್ತಿದೆ. `ಇ-ಹರಾಜು~ ಪ್ರಕ್ರಿಯೆ ಪ್ರಾರಂಭಗೊಂಡ ನಂತರ  ಅದಿರು ಶೀಘ್ರ ವಿಲೇವಾರಿ ಆಗುತ್ತಿದ್ದು, ಇದರಿಂದ ಪ್ರತಿ ದಿನದ ಉತ್ಪಾದನೆ ಸಾಮರ್ಥ್ಯವನ್ನು 30 ಸಾವಿರ ಟನ್‌ಗಳಿಗೆ ಹೆಚ್ಚಿಸಬೇಕಾಗಿದೆ ಎಂದು ರಾಣಾ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್ 14ರಿಂದ ಇಲ್ಲಿಯವರೆಗೆ `ಎನ್‌ಎಂಡಿಸಿ~ ಒಟ್ಟು 3.54 ಲಕ್ಷ ಟನ್ ಅದಿರನ್ನು `ಇ-ಹರಾಜು~ ಮೂಲಕ ಮಾರಾಟ ಮಾಡಿದೆ. ಅದಿರು `ಇ-ಹರಾಜು~ ಪ್ರಾರಂಭಗೊಂಡಿರುವುದರಿಂದ ರಾಜ್ಯದ ಉಕ್ಕು, ಮೆದು ಕಬ್ಬಿಣ ಮತ್ತು ಕಬ್ಬಿಣದ ಅದಿರು ಆಧಾರಿತ ಕಂಪೆನಿಗಳು ನಿಟ್ಟುಸಿರು ಬಿಟ್ಟಿವೆ. ಸುಪ್ರೀಂಕೋರ್ಟ್ ಗಣಿಗಾರಿಕೆ ನಿಷೇಧಿಸಿದ ಹಿನ್ನೆಲೆಯಲ್ಲಿ ಹಲವು ಕಂಪೆನಿಗಳು ಅದಿರಿನ ತೀವ್ರ ಕೊರತೆ ಎದುರಿಸುತ್ತಿದ್ದು, ಘಟಕಗಳನ್ನು ಸ್ಥಗಿತಗೊಳಿಸುವ ಸ್ಥಿತಿಯಲ್ಲಿವೆ.

ರಾಜ್ಯದ ಅತಿ ದೊಡ್ಡ ಉಕ್ಕು ತಯಾರಿಕೆ ಕಂಪೆನಿ `ಜೆಎಸ್‌ಡಬ್ಲ್ಯು~ ವಾರ್ಷಿಕ 10 ದಶಲಕ್ಷ ಟನ್‌ಗಳಷ್ಟು ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಅದಿರಿನ ಕೊರತೆಯಿಂದ ಕಳೆದ ತಿಂಗಳು ಒಟ್ಟು ಉತ್ಪಾದನೆಯನ್ನು ಶೇ 70ರಷ್ಟು ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.