ADVERTISEMENT

16 ಸಾವಿರದ ಗಡಿ ಇಳಿದ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 19:30 IST
Last Updated 21 ನವೆಂಬರ್ 2011, 19:30 IST
16 ಸಾವಿರದ ಗಡಿ ಇಳಿದ ಸೂಚ್ಯಂಕ
16 ಸಾವಿರದ ಗಡಿ ಇಳಿದ ಸೂಚ್ಯಂಕ   

ಮುಂಬೈ (ಪಿಟಿಐ): ಹೂಡಿಕೆದಾರರ ನಿರಂತರ ಮಾರಾಟ ಒತ್ತಡದ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 425 ಅಂಶಗಳಿಗೆ ಎರವಾಗಿ 16 ಸಾವಿರದ ಗಡಿಗಿಂತ ಕೆಳಗೆ ಇಳಿಯಿತು.

ಕಳೆದ ಎಂಟು ವಹಿವಾಟು ದಿನಗಳಲ್ಲಿ ಸೂಚ್ಯಂಕವು 1,623 ಅಂಶಗಳನ್ನು (ಶೇ 9.24) ಕಳೆದುಕೊಂಡಿದೆ. ಈ ಪ್ರಕ್ರಿಯೆಯಲ್ಲಿ ಹೂಡಿಕೆದಾರರಿಗೆ ರೂ 5.5 ಲಕ್ಷ ಕೋಟಿಗಳಷ್ಟು ಸಂಪತ್ತು ನಷ್ಟವಾಗಿದೆ.

ಐರೋಪ್ಯ ಒಕ್ಕೂಟದ ಸಾಲದ ಬಿಕ್ಕಟ್ಟು, ಅಮೆರಿಕ ಸೇರಿದಂತೆ ಹಲವು ಪ್ರಮುಖ ದೇಶಗಳ ಆರ್ಥಿಕ ಕುಂಠಿತ ಮುಂತಾದ ವಿದ್ಯಮಾನಗಳು ವಿಶ್ವದಾದ್ಯಂತ ಹೂಡಿಕೆದಾರರು ಷೇರುಪೇಟೆ ವಹಿವಾಟಿನಿಂದ ದೂರ ಸರಿಯುವಂತೆ ಮಾಡಿವೆ. ದೇಶಿ ಉದ್ದಿಮೆ ಸಂಸ್ಥೆಗಳ ಹಣಕಾಸು ಸಾಧನೆ ಕಳಪೆಯಾಗಿರುವುದು, ಗರಿಷ್ಠ ಮಟ್ಟದಲ್ಲಿನ ಬಡ್ಡಿ ದರ ಮತ್ತು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳದಿರುವುದು ಮತ್ತಿತರ ಕಾರಣಗಳು ಪೇಟೆಯಲ್ಲಿ ನಿರುತ್ಸಾಹ ಮೂಡಿಸಿವೆ.

ಪ್ರಮುಖ 30 ಷೇರುಗಳ ಸಂವೇದಿ ಸೂಚ್ಯಂಕವು ದಿನದ ವಹಿವಾಟಿನ ಉದ್ದಕ್ಕೂ ನಕಾರಾತ್ಮಕವಾಗಿಯೇ ಇತ್ತು. ದಿನದಂತ್ಯಕ್ಕೆ 15,946 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿತು. ಅಕ್ಟೋಬರ್ 5ರ ನಂತರದ ಅತಿ ಕಡಿಮೆ ಮಟ್ಟ ಇದಾಗಿದೆ.ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಪೇಟೆಯಿಂದ ರೂ 1,872 ಕೋಟಿಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.