ADVERTISEMENT

35 ಸೇವೆಗಳಿಗೆ ತೆರಿಗೆ ರಿಯಾಯ್ತಿ?

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಅಂಬುಲೆನ್ಸ್, ಬ್ಯೂಟಿ ಪಾರ್ಲರ್, ಮದುವೆ ಮಂಟಪ, ಬ್ಯಾಂಕ್ ಠೇವಣಿ, ಬಾಡಿಗೆ ಕೊಡುವ ವಾಹನ ಮತ್ತು ಯಂತ್ರೋಪಕರಣಗಳು ಸೇರಿದಂತೆ 35 ಸೇವೆಗಳನ್ನು ಸೇವಾ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ಪ್ರಸಕ್ತ ಬಜೆಟ್‌ನಲ್ಲಿ ಇನ್ನಷ್ಟು ಸೇವೆಗಳನ್ನು ಸೇವಾ ತೆರಿಗೆ ವ್ಯಾಪ್ತಿಗೆ ತರುವುದಕ್ಕೆ  ರಾಜ್ಯಗಳ ವಿರೋಧವಿಲ್ಲ. ಆದರೆ, ಆಯ್ದ 35 ಸೇವೆಗಳಿಗೆರಿಯಾಯ್ತಿ ನೀಡಬೇಕು ಎನ್ನುವುದು ರಾಜ್ಯಗಳ ಬೇಡಿಕೆಯಾಗಿದೆ.

ಸರ್ಕಾರವು ಸೇವಾ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬಹುದಾದ ಸೇವೆಗಳ `ಋಣಾತ್ಮಕ ಪಟ್ಟಿ~ ಸಿದ್ಧಪಡಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಚಿವರ ಉನ್ನತಾಧಿಕಾರ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ಚರ್ಚಿಸಲಿದೆ. ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನೇತೃತ್ವದಲ್ಲಿರುವ ಸಮಿತಿಯು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರದ ನಡುವೆ ಇರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದೆ.
 
ಸರ್ಕಾರ ಸಿದ್ಧಪಡಿಸುತ್ತಿರುವ `ಋಣಾತ್ಮಕ ಪಟ್ಟಿ~ಯಲ್ಲಿ ರಾಜ್ಯಗಳು ಬೇಡಿಕೆ ಇಟ್ಟಿರುವ ಈ 35 ಸೇವೆಗಳೂ ಸೇರಿದ್ದು, ಇದನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಮೋದಿ ಹೇಳಿದ್ದಾರೆ.
ಸದ್ಯಕ್ಕೆ 119ಕ್ಕೂ ಹೆಚ್ಚು ಸೇವೆಗಳ ಮೇಲೆ ಶೇ 10ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿದ್ದು, ಈ ಮೂಲಕ ಸರ್ಕಾರ ವಾರ್ಷಿಕ ರೂ82 ಸಾವಿರ ಕೋಟಿ ವರಮಾನ ಅಂದಾಜಿಸಿದೆ.
 
ದೇಶದ ಒಟ್ಟು ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಸೇವಾ ವಲಯದ ಕೊಡುಗೆ ಶೇ 63ರಷ್ಟಿದ್ದು, ಇದನ್ನು ಹೆಚ್ಚುವರಿಯಾಗಿ ಶೇ 20ರಷ್ಟು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ. 2010-11ನೇ ಸಾಲಿನಲ್ಲಿ ಸೇವಾ ತರಿಗೆಯ ಮೂಲಕ ರೂ70 ಸಾವಿರ ಕೋಟಿ  ಸಂಗ್ರಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.