ADVERTISEMENT

ರಫ್ತು ಉತ್ತೇಜಿಸಲು ತೆರಿಗೆ ರಿಯಾಯ್ತಿ

ಪಿಟಿಐ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಫ್ತು ವಹಿವಾಟಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು 102 ಸರಕುಗಳ ಮೇಲಿನ ತೆರಿಗೆ ಮರಳಿಸುವ ದರವನ್ನು ಹೆಚ್ಚಿಸಿದೆ.

ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ದೇಶಿ ಸರಕುಗಳ ರಫ್ತು ಹೆಚ್ಚು ಸ್ಪರ್ಧಾತ್ಮಕವಾಗಲಿದೆ. ವ್ಯಾಪಾರ ಮತ್ತು ಉದ್ದಿಮೆ ವಲಯಗಳು ರಫ್ತು ರಿಯಾಯ್ತಿ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

ಸಾಗರ ಉತ್ಪನ್ನಗಳು, ವಾಹನ, ಸೈಕಲ್‌ ಟೈರ್‌ – ಟ್ಯೂಬ್‌, ಚರ್ಮ, ಉಣ್ಣೆ, ಗಾಜಿನ ಕರಕುಶಲ ಸರಕುಗಳು ಹೆಚ್ಚಾಗಿ ರಫ್ತಾಗುತ್ತಿವೆ. ಪರಿಷ್ಕೃತ ದರಗಳು ರಫ್ತು ವಲಯದ ಕಳವಳ ದೂರ ಮಾಡಲಿವೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.

ADVERTISEMENT

ತೆರಿಗೆ ಮರಳಿಸುವುದು ವಿಳಂಬವಾಗಿದ್ದರಿಂದ ಮತ್ತು ಜಿಎಸ್‌ಟಿಯಲ್ಲಿ ಹೂಡುವಳಿ ತೆರಿಗೆ ವೆಚ್ಚ ಹೆಚ್ಚಳವಾಗಿದ್ದರಿಂದ ರಫ್ತು ವಹಿವಾಟಿನ ಮೇಲೆ ಕಂಡುಬಂದಿದ್ದ ವ್ಯತಿರಿಕ್ತ ಪರಿಣಾಮಗಳು ಈಗ ದೂರವಾಗಲಿವೆ. ರಫ್ತುದಾರರ ಬಳಿ ಹಣದ ಲಭ್ಯತೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

‘ಇದೊಂದು ಸ್ವಾಗತಾರ್ಹ ನಿರ್ಧಾರವಾಗಿದೆ. ಇದರಿಂದ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ರಫ್ತುದಾರರು ಸ್ಪರ್ಧಾತ್ಮಕವಾಗಿ ತಮ್ಮ ಸರಕು ರಫ್ತು ಮಾಡಲು ನೆರವಾಗಲಿದೆ’ ಎಂದು ಭಾರತದ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಮಹಾ ನಿರ್ದೇಶಕ ಅಜಯ್‌ ಸಹಾಯ್‌ ಹೇಳಿದ್ದಾರೆ.

ಜಿಎಸ್‌ಟಿ ಜಾರಿ ಮುನ್ನ, ರಫ್ತು ಸರಕಿಗೆ ಬಳಸಿದ ಕಚ್ಚಾ ಸರಕಿನ ಮೇಲೆ ವಿಧಿಸಲಾದ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಡ್ಯೂಟಿಗಳನ್ನು ರಫ್ತುದಾರರಿಗೆ ಮರಳಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಗೆ ಬಂದ ನಂತರ ಈ ತೆರಿಗೆ ಮರಳಿಸುವ ಪ್ರಮಾಣ ತಗ್ಗಿಸಲಾಗಿತ್ತು. ಈಗ ಅದನ್ನು ಮತ್ತೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.