ADVERTISEMENT

ಅಗ್ರಿಗೋಲ್ಡ್‌: ಫೆ. 19ರ ಒಳಗೆ ಹೇಳಿಕೆ ದಾಖಲಿಸಲು ಆದೇಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಅಗ್ರಿಗೋಲ್ಡ್‌: ಫೆ. 19ರ ಒಳಗೆ ಹೇಳಿಕೆ ದಾಖಲಿಸಲು ಆದೇಶ
ಅಗ್ರಿಗೋಲ್ಡ್‌: ಫೆ. 19ರ ಒಳಗೆ ಹೇಳಿಕೆ ದಾಖಲಿಸಲು ಆದೇಶ   

ಹೈದರಾಬಾದ್‌: ಲಕ್ಷಾಂತರ ಠೇವಣಿದಾರರಿಗೆ ವಂಚನೆ ಎಸಗಿರುವ ಅಗ್ರಿಗೋಲ್ಡ್‌ ಸ್ವಾಧೀನಕ್ಕೆ ಮುಂದಾಗಿರುವ ಝೀ ಎಸ್ಸೆಲ್‌ ಗ್ರೂಪ್‌, ಸಂಸ್ಥೆಯ ಆಸ್ತಿ ಮತ್ತು ಸಾಲದ ಹೊರೆ ಲೆಕ್ಕ ಹಾಕಲು ತನಗೆ ಇನ್ನೂ ಎರಡು ತಿಂಗಳ ಕಾಲಾವಕಾಶ ನೀಡಬೇಕು ಎಂದು ಆಂಧ್ರಪ್ರದೇಶದ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದೆ.

ಅಗ್ರಿಗೋಲ್ಡ್‌ ಠೇವಣಿದಾರರು ಮತ್ತು ಏಜೆಂಟರು ದಾಖಲಿಸಿರುವ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಪೀಠವು, ಎರಡು ತಿಂಗಳ ಕಾಲಾವಕಾಶ ನೀಡಬೇಕೆಂಬ ಝೀ ಎಸ್ಸೆಲ್‌ನ ಮನವಿಯನ್ನು ತಳ್ಳಿ ಹಾಕಿದೆ. ಫೆಬ್ರುವರಿ 19ರ ಒಳಗೆ ದಾಖಲೆಗಳನ್ನು ಪರಿಶೀಲಿಸಿ ತನ್ನ ಹೇಳಿಕೆ ದಾಖಲಿಸಬೇಕು ಎಂದು ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆಯನ್ನು ಪೀಠವು ಫೆಬ್ರುವರಿ 20ಕ್ಕೆ ನಿಗದಿ ಮಾಡಿದೆ.

ಆರಂಭದಲ್ಲಿ ಅಗ್ರಿಗೋಲ್ಡ್‌ ಸ್ವಾಧೀನಕ್ಕೆ ಒಲವು ತೋರಿಸಿದ್ದ ಝೀ ಎಸ್ಸೆಲ್‌ ಗ್ರೂಪ್‌, ಆನಂತರ ಸಂಸ್ಥೆಯ ಸಂಪತ್ತನ್ನಷ್ಟೇ ಖರೀದಿಸಲು ತನಗೆ ಆಸಕ್ತಿ ಇದೆ. ಕಳಂಕಿತ ಸಂಸ್ಥೆಯನ್ನು ಮುನ್ನಡೆಸಲು ತನ್ನಿಂದ ಸಾಧ್ಯವಾಗುವುದಿಲ್ಲ ಎಂದು ಹಠಾತ್ತಾಗಿ ನಿಲುವು ಬದಲಿಸಿತ್ತು.

ADVERTISEMENT

ಅಗ್ರಿಗೋಲ್ಡ್‌ನ ಎಲ್ಲ ನಿರ್ದೇಶಕರನ್ನು  ಒಂದೇ ಜೈಲಿಗೆ ಸ್ಥಳಾಂತರಿಸಿದರೆ ಸಂಸ್ಥೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ತನಗೆ ಸಾಧ್ಯವಾಗಲಿದೆ ಎಂದೂ ಮನವಿ ಮಾಡಿಕೊಂಡಿತ್ತು. ಈ ಮಧ್ಯೆ ಆಂಧ್ರಪ್ರದೇಶ ಸರ್ಕಾರವು  ತನ್ನ ಸಿಐಡಿ ಮೂಲಕ ಠೇವಣಿದಾರರ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿತ್ತು.

ಕಾಲ ಕಾಲಕ್ಕೆ ಎಸ್ಸೆಲ್‌ ಗ್ರೂಪ್‌ನ ಬದಲಾಗುತ್ತಿರುವ ನಿಲುವು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಲಕ್ಷಾಂತರ ಠೇವಣಿದಾರರ ಸಹನೆ ಪರೀಕ್ಷಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.