ADVERTISEMENT

ವಿತ್ತೀಯ ಕೊರತೆ ಹೆಚ್ಚಳ ನೀತಿ ಆಯೋಗದ ನಿರೀಕ್ಷೆ

ಪಿಟಿಐ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ನವದೆಹಲಿ: ‘2017–18ನೇ ಹಣಕಾಸು ವರ್ಷದಲ್ಲಿನ ವಿತ್ತೀಯ ಕೊರತೆಯು ನಿಗದಿತ ಮಿತಿಗಿಂತ ಹೆಚ್ಚಳಗೊಳ್ಳಲಿದ್ದರೂ, ಸರ್ಕಾರ ಕೈಗೊಂಡ ಕೆಲ ಕ್ರಮಗಳಿಂದ ಅದರ ಪ್ರಮಾಣ ಗಮನಾರ್ಹ ಮಟ್ಟದಲ್ಲಿ ಇರುವುದಿಲ್ಲ’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ.

‘ಷೇರುವಿಕ್ರಯ ಮತ್ತು ತೆರಿಗೆಯೇತರ ವರಮಾನ ಸಂಗ್ರಹದ ವಿಷಯದಲ್ಲಿ ಸರ್ಕಾರದ ಸಾಧನೆ ಉತ್ತಮ ಆಗಿರುವುದರಿಂದ ವಿತ್ತೀಯ ಕೊರತೆ ಆತಂಕಕಾರಿ ಮಟ್ಟದಲ್ಲಿ ಇರುವುದಿಲ್ಲ. ಆದರೆ, 2018–19ನೇ ಹಣಕಾಸು ವರ್ಷದಲ್ಲಿಯೂ ಈ ಕೊರತೆ ಕೆಲಮಟ್ಟಿಗೆ ಹೆಚ್ಚಿಗೆ ಇರುವ ಸಾಧ್ಯತೆ ಇರಲಿದೆ.

‘ನಿಗದಿಪಡಿಸಿದ ಮಿತಿ ಒಳಗೆ ವಿತ್ತೀಯ ಕೊರತೆ ಕಾಯ್ದುಕೊಳ್ಳಲು ಕೈಗೊಂಡ ಕ್ರಮಗಳ ವೈಫಲ್ಯದಿಂದ ಇಂತಹ ಪರಿಸ್ಥಿತಿ ಉದ್ಭವಿಸಲಿದೆ. ತೆರಿಗೆ ವರಮಾನ ಸಂಗ್ರಹವು ಮುಂಬರುವ ದಿನಗಳಲ್ಲಿ ಹೆಚ್ಚಳಗೊಳ್ಳಲಿದೆ. ಆದರೆ, ಕಚ್ಚಾ ತೈಲದ ಬೆಲೆ ವಿಷಯದಲ್ಲಿ ನನಗೆ ಹೆದರಿಕೆ ಇದೆ. ತೈಲ ಬೆಲೆ ಏರಿಕೆ ಹೊರೆ ಹೊರಲು ನಾವು ಸಜ್ಜಾಗಬೇಕಾಗಿದೆ’ ಎಂದೂ ಅವರು ಹೇಳಿದ್ದಾರೆ. ‘2017–18ರಲ್ಲಿ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.2ಕ್ಕೆ ಮತ್ತು 2018–19ರಲ್ಲಿ ಶೇ 3ಕ್ಕೆ ಮಿತಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.