ನವದೆಹಲಿ: ಜನಸ್ನೇಹಿ ಹಾಗೂ ಪ್ರಗತಿಪರ ಬಜೆಟ್ ಮಂಡಿಸಿರುವುದಕ್ಕಾಗಿ ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆಯ ಮುಖ್ಯಾಂಶಗಳು:
ಹೊಸ ಭರವಸೆ ಮತ್ತು ಅವಕಾಶ ತಂದಿದೆ:
2022-23ನೇ ಸಾಲಿನ ಬಜೆಟ್ ದೇಶದ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದು ಅವಕಾಶಗಳನ್ನು ತೆರೆದಿದೆ. ಇದು ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಎಂದು ಹೇಳಿದ್ದಾರೆ.
ಹೆಚ್ಚು ಉದ್ಯೋಗ ಸೃಷ್ಟಿ, ಉಜ್ವಲ ಭವಿಷ್ಯ:
ಈ ಬಜೆಟ್ ಮೂಲಕ ದೇಶವು ಹೆಚ್ಚಿನ ಪ್ರಗತಿ, ಹೆಚ್ಚಿನ ಮೂಲ ಸೌಕರ್ಯ, ಹೆಚ್ಚು ಹೂಡಿಕೆ ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಸಲು ನೆರವಾಗಲಿದೆ. ಯುವ ಜನಾಂಗಕ್ಕೆ ಉಜ್ವಲ ಭವಿಷ್ಯವನ್ನು ಖಾತ್ರಿಗೊಳಿಸುತ್ತದೆ ಎಂದು ಪ್ರತಿಕ್ರಿಯಿಸಿದರು.
ಮೊದಲ ಬಾರಿಗೆ 'ಪರ್ವತ ಮಾಲಾ' ಯೋಜನೆ:
ದೇಶದಲ್ಲಿ ಮೊದಲ ಬಾರಿಗೆ 'ಪರ್ವತ ಮಾಲಾ' ಯೋಜನೆಯನ್ನು ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗದಲ್ಲಿ ಆರಂಭಿಸಲಾಗುತ್ತದೆ. ಇದು ಬೆಟ್ಟದಲ್ಲಿ ಆಧುನಿಕ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಗಡಿ ಗ್ರಾಮಗಳಿಗೆ ಶಕ್ತಿ ತುಂಬಲಿದೆ ಎಂದರು.
'ಗಂಗಾ ಶುದ್ಧೀಕರಣ'
ಗಂಗಾ ಶುದ್ಧೀಕರಣದ ಜೊತೆಗೆ ರೈತರ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಡಲಾಗಿದೆ. ಉತ್ತಾರಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ದಡದಲ್ಲಿ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲಾಗುವುದು. ಇದು ಗಂಗಾ ನಂದಿಯನ್ನು ರಾಸಾಯನಿಕ ಮುಕ್ತಗೊಳಿಸಲು ಸಹಾಯ ಮಾಡಲಿದೆ ಎಂದರು.
ಬಜೆಟ್ 2022 ಸಮಗ್ರ ಮಾಹಿತಿ
ರೈತರ ಆದಾಯ ದ್ವಿಗುಣ:
2.25 ಲಕ್ಷ ಕೋಟಿಗಿಂತ ಹೆಚ್ಚಿನ ಎಂಎಸ್‌ಪಿಯ ಘೋಷಣೆಯನ್ನು ನೇರವಾಗಿ ರೈತರಿಗೆ ವರ್ಗಾಯಿಸಲಾಗುವುದು. ಬಜೆಟ್ ರೈತರ ಆದಾಯವನ್ನು ದ್ವಿಗುಣಗೊಳಿಸಲಿದೆ. ಎಂಎಸ್‌ಎಂಇಗಳಿಗಾಗಿ ಸಾಲದ ಗ್ಯಾರಂಟಿ ಹಾಗೂ ಅನೇಕ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ನಾಳೆ (ಬುಧವಾರ) ಬೆಳಿಗ್ಗೆ 11 ಗಂಟೆಗೆ ಬಜೆಟ್ ಕುರಿತು ವಿವರವಾಗಿ ಮಾತನಾಡುತ್ತೇನೆ ಎಂದು ಪ್ರಧಾನಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.