ADVERTISEMENT

Budget 2024 | ಹೈನುಗಾರಿಕೆಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 16:22 IST
Last Updated 1 ಫೆಬ್ರುವರಿ 2024, 16:22 IST
   

ನವದೆಹಲಿ: ದೇಶದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು ಸಮಗ್ರ ಯೋಜನೆ ಜಾರಿಗೊಳಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ನಂ.1 ಸ್ಥಾನದಲ್ಲಿದೆ. ಆದರೆ ಕಡಿಮೆ ಹಾಲು ನೀಡುವ ಹಸುಗಳ ಸಂಖ್ಯೆ ಹೆಚ್ಚಿದೆ. ಉತ್ಪಾದನೆ ಪ್ರಮಾಣ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

2022–23 ರಲ್ಲಿ ದೇಶದಲ್ಲಿ 230 ದಶಲಕ್ಷ ಟನ್‌ ಹಾಲು ಉತ್ಪಾದನೆಯಾಗಿದ್ದು, ಒಟ್ಟು ಪ್ರಮಾಣ ಶೇ 4 ರಷ್ಟು ಏರಿಕೆಯಾಗಿದೆ. ಹೊಸದಾಗಿ ಅನುಷ್ಠಾನಗೊಳ್ಳಲಿರುವ ಯೋಜನೆಗಳು ಈಗಾಗಲೇ ಜಾರಿಯಲ್ಲಿರುವ ರಾಷ್ಟ್ರೀಯ ಗೋಕುಲ್‌ ಯೋಜನೆ ಮತ್ತು ರಾಷ್ಟ್ರೀಯ ಜಾನುವಾರು ಯೋಜನೆಗಳಿಗೆ ಪೂರಕವಾಗಿ ಇರಲಿವೆ.  

ಮೀನುಗಾರಿಕೆ: 55 ಲಕ್ಷ ಉದ್ಯೋಗ ಸೃಷ್ಟಿ ಗುರಿ

ADVERTISEMENT

ಮೀನುಗಾರರಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರವು ಮೀನುಗಾರಿಕೆಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದೆ ಎಂದು ಹಣಕಾಸು ಸಚಿವರು ಹೇಳಿದರು. ಮೀನುಗಾರರು, ಮೀನು ಮಾರಾಟಗಾರರು ಹಾಗೂ ಈ ಕ್ಷೇತ್ರದ ಉದ್ಯಮಗಳ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸಲಾಗುವುದು ಎಂದು ನುಡಿದರು.

‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ’ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಿ ಪ್ರತಿ ಹೆಕ್ಟೇರ್‌ಗೆ ಮತ್ಸ್ಯ ಉತ್ಪಾದನೆ ಪ್ರಮಾಣವನ್ನು ಮೂರು ಟನ್‌ಗಳಿಂದ ಐದು ಟನ್‌ಗಳಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಮುಂದಿನ ಕೆಲ ವರ್ಷಗಳಲ್ಲಿ ಸೀಫುಡ್‌ ರಫ್ತು ಪ್ರಮಾಣವನ್ನು ದ್ವಿಗುಣಗೊಳಿಸಿ, 55 ಲಕ್ಷ ಉದ್ಯೋಗ ಸೃಷ್ಟಿ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.