ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025–26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಇಂದು (ಫೆಬ್ರುವರಿ 1) ಮಂಡಿಸಿದರು. ಅವರು ಮಂಡಿಸಿದ ಸತತ 8ನೇ ಬಜೆಟ್ ಇದಾಗಿದ್ದು, 75 ನಿಮಿಷಗಳಲ್ಲಿ ಮುಕ್ತಾಯವಾಯಿತು.
2020ರಲ್ಲಿ 2 ಗಂಟೆ 40 ನಿಮಿಷ ಬಜೆಟ್ ಮಂಡಿಸಿ 'ದೀರ್ಘ ಬಜೆಟ್' ಎಂಬ ದಾಖಲೆ ಬರೆದಿದ್ದ ನಿರ್ಮಲಾ ಪಾಲಿಗೆ ಇದು, ಎರಡನೇ 'ಕಿರು' ಬಜೆಟ್.
ನಿರ್ಮಲಾ ಅವರು, 2019ರಲ್ಲಿ 2 ಗಂಟೆ 17 ನಿಮಿಷ, 2021ರಲ್ಲಿ 1 ಗಂಟೆ 50 ನಿಮಿಷ, 2022ರಲ್ಲಿ 1 ಗಂಟೆ 32 ನಿಮಿಷ ಹಾಗೂ 2023ರಲ್ಲಿ 1 ಗಂಟೆ 27 ನಿಮಿಷದಲ್ಲಿ ಬಜೆಟ್ ಓದಿದ್ದರು.
2024ರಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ 56 ನಿಮಿಷಗಳಲ್ಲೇ ಕೊನೆಗೊಂಡಿತ್ತು. ಹಾಗಾಗಿ, ಈ ಬಾರಿಯ ಬಜೆಟ್ ಅವರ ಪಾಲಿಗೆ ಎರಡನೇ ಕಡಿಮೆ ಅವಧಿಯ ಬಜೆಟ್ ಎನಿಸಿತು.
ಗದ್ದಲದ ನಡುವೆ ಬಜೆಟ್ ಮಂಡನೆ
ನಿರ್ಮಲಾ ಅವರು ಬಜೆಟ್ ಮಂಡನೆಗೆ ಅಣಿಯಾಗುತ್ತಿದ್ದಂತೆ ವಿರೋಧ ಪಕ್ಷಗಳು ಗದ್ದಲ ಆರಂಭಿಸಿದವು. ಮಹಾ ಕುಂಭ ಮೇಳದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದವು. ಅದರ ನಡುವೆಯೂ, ನಿರ್ಮಲಾ ಅವರು ಬಜೆಟ್ ಮಂಡನೆ ಮುಂದುವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.