ADVERTISEMENT

ಬಜೆಟ್‌ ವಿಶ್ಲೇಷಣೆ | ಚಾಂಪಿಯನ್‌ಗಳ ಅನುಕೂಲಕ್ಕಾಗಿ ರೂಪಿಸಿದ ಬಜೆಟ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 23:55 IST
Last Updated 1 ಫೆಬ್ರುವರಿ 2025, 23:55 IST
<div class="paragraphs"><p>ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ 2022, ತನ್ನ 25 ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಐಟಿ, ಬಯೋಟೆಕ್ನಾಲಜಿ, ಡೀಪ್‌ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದರು.ಚಿತ್ರ ಕಿಶೋರ್ ಕುಮಾರ್</p></div>

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಶೃಂಗಸಭೆ 2022, ತನ್ನ 25 ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಐಟಿ, ಬಯೋಟೆಕ್ನಾಲಜಿ, ಡೀಪ್‌ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದರು.ಚಿತ್ರ ಕಿಶೋರ್ ಕುಮಾರ್

   

ಭಾರತದ ಆರ್ಥಿಕ ಕ್ಷೇತ್ರವು ಮೂರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿರುವ ಬಲಾಢ್ಯ ಬಂಡವಾಳಶಾಹಿ ‘ರಾಷ್ಟ್ರೀಯ ಚಾಂಪಿಯನ್‌’ಗಳಿಗೆ ಅನುಕೂಲವಾಗುವ ಆರ್ಥಿಕ ನೀತಿಗಳನ್ನಷ್ಟೇ ರೂಪಿಸಿ ಜಾರಿಗೆ ತರುವುದು ಮೊದಲನೆಯ ಸಮಸ್ಯೆ. ರಾಷ್ಟ್ರೀಯ ಚಾಂಪಿಯನ್‌ಗಳ ಲಾಭ ಹೆಚ್ಚಿಸಲು ಒಕ್ಕೂಟ ಸರ್ಕಾರ ರಕ್ಷಣಾತ್ಮಕ ವಿಧಾನಗಳನ್ನು ದಿನೇದಿನೇ ಹೆಚ್ಚೆಚ್ಚು ಬೆಳೆಸಿಕೊಳ್ಳುತ್ತಿರುವುದು ಎರಡನೆಯ ಸಮಸ್ಯೆ. ರಾಷ್ಟ್ರೀಯ ಚಾಂಪಿಯನ್‌ಗಳಾಚೆ ಬಂಡವಾಳವನ್ನು ಆಕರ್ಷಿಸಲು ಸಮರ್ಪಕ ತಂತ್ರವನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಿರುವುದು ಮೂರನೆಯ ಸಮಸ್ಯೆ.

ಈ ಸಾಲಿನ ಬಜೆಟ್‌ನಲ್ಲಿ ಮೇಲೆ ತಿಳಿಸಿದ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಇದರ ಪರಿಣಾಮ ಮುಂದಿನ ವರ್ಷಗಳಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯಲ್ಲಿ ನಿರೀಕ್ಷೆಯಷ್ಟು ಏರಿಕೆ ಆಗದಿರಬಹುದು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಗಮನಿಸಬೇಕಿದೆ.

ADVERTISEMENT

ಬಜೆಟ್‌ನ ಕ್ಷೇತ್ರವಾರು ಹಂಚಿಕೆ:

ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ 2018–19ರಲ್ಲಿ ಕೇಂದ್ರ ಸರ್ಕಾರದ ಒಟ್ಟು ಬಜೆಟ್‌ ಗಾತ್ರದ ಶೇಕಡ 6.3ರಷ್ಟು ಅನುದಾನವನ್ನು ಒದಗಿಸಲಾಗಿತ್ತು. ಈ ವರ್ಷದ ಬಜೆಟ್‌ನಲ್ಲಿ ಅದು ಶೇ 5.26ಕ್ಕೆ ಕುಸಿದಿದೆ. ಶಿಕ್ಷಣಕ್ಕೆ 2018–19ರಲ್ಲಿ ಶೇ 3.75ರಷ್ಟು ಅನುದಾನ ಮೀಸಲಿಟ್ಟಿದ್ದು, ಈ ಬಾರಿ ಅದನ್ನು ಶೇ 2.53ಕ್ಕೆ ಇಳಿಸಲಾಗಿದೆ. ಸಮಾಜ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಶೇ 1.75ರಿಂದ ಶೇ 1.18ಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನ ಶೇ 2.47ರಿಂದ ಶೇ 1.94ಕ್ಕೆ ಇಳಿಕೆ ಮಾಡಲಾಗಿದೆ.

ಕಳೆದ ಆರೇಳು ವರ್ಷಗಳಿಂದ ಒಕ್ಕೂಟ ಸರ್ಕಾರ ಯಾವ ರೀತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರವನ್ನು ಕಡೆಗಣಿಸುತ್ತಿದೆ ಎಂಬುದು ಮೇಲಿನ ಅಂಕಿಅಂಶಗಳನ್ನು ಗಮನಿಸಿದರೆ ಅರ್ಥವಾಗುತ್ತದೆ. ಯಾವ ದೇಶ ಸಾಮಾಜಿಕ ಬೆಳವಣಿಗೆಗೆ ಬಂಡವಾಳ ಹೂಡಿಕೆ ಮಾಡುವುದಿಲ್ಲವೋ, ಅಂತಹ ದೇಶದಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಮಾನವ ಸಂಪನ್ಮೂಲದ ಅಭಿವೃದ್ಧಿ ಸಾಧ್ಯವಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ಸಾಮಾಜಿಕ ಕ್ಷೇತ್ರಗಳ ಮೇಲಿನ ಬಂಡವಾಳ ಹೂಡಿಕೆಯನ್ನು ಯಾವ ರೀತಿಯಲ್ಲಿ ಕಡಿಮೆ ಮತ್ತು ಸ್ಥಗಿತಗೊಳಿಸಿದ್ದಾರೆ ಎಂದು ನೋಡೋಣ. 2024 – 25ರ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಶಿಕ್ಷಣ ಅಭಿಯಾನ (ಪಿಎಂ–ಉಷಾ) ಯೋಜನೆಗೆ ಘೋಷಿಸಿದ್ದ ₹ 1,815 ಕೋಟಿಯಲ್ಲಿ ಖರ್ಚು ಮಾಡಿದ್ದು ಕೇವಲ ₹ 895 ಕೋಟಿ. ಘೋಷಿಸಿದ ಅನುದಾನದಲ್ಲಿ ಶೇ 50ರಷ್ಟು ಬಳಕೆಯಾಗದೇ ಖೋತಾ ಆಗಿದೆ. ಈ ವರ್ಷದ ಬಜೆಟ್‌ನಲ್ಲಿ ಮತ್ತೊಮ್ಮೆ ಇದೇ ಯೋಜನೆಗೆ ₹ 1,815 ಕೋಟಿ ಘೋಷಣೆ ಮಾಡಿದ್ದಾರೆ. ಹಿಂದಿನ ವರ್ಷದ ಲೆಕ್ಕ ನೋಡಿದರೆ ಈ ವರ್ಷವೂ ಬಳಕೆಯ ಹಂತದಲ್ಲಿ ಎಷ್ಟು ಖೋತಾ ಮಾಡಬಹುದು ಎಂದು ಸುಲಭವಾಗಿ ಊಹಿಸಬಹುದು. ಇದೇ ರೀತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಶೇ 69, ರಾಷ್ಟ್ರೀಯ ವಿಕಾಸ್ ಯೋಜನೆಯಲ್ಲಿ ಶೇ 20, ರಾಷ್ಟ್ರೀಯ ಆಯುಷ್ ಯೋಜನೆಯಲ್ಲಿ ಶೇ 13, ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ (ಪಿಎಂ– ಪೋಷಣ್‌) ಯೋಜನೆಯಲ್ಲಿ ಶೇ 20ರಷ್ಟು ಖೋತಾ ಆಗಿದೆ. ಈ ರೀತಿಯಲ್ಲಿ ಹಲವಾರು ಸಾಮಾಜಿಕ ಕ್ಷೇತ್ರಗಳ ಯೋಜನೆಗಳಲ್ಲಿ ಅನುದಾನದ ಖೋತಾ ಆಗಿರುವ ವಿವರಗಳನ್ನು ಈ ಸಲದ ಬಜೆಟ್‌ನಲ್ಲಿ ನೋಡಬಹುದು.

ಈ ಬಾರಿಯ ಬಜೆಟ್ ಭಾಷಣದ ಪ್ರಾರಂಭದಲ್ಲಿ ವಿತ್ತ ಸಚಿವರು ತೆಲುಗು ಕವಿ ಗುರುಜಾದ ಅಪ್ಪರಾವ್ ಅವರ – ‘ದೇಶವೆಂದರೆ ಮಣ್ಣು ಅಲ್ಲವೋ, ದೇಶವೆಂದರೆ ಮನುಷ್ಯರೋ’ ಎಂಬ ಮಾತನ್ನು ಉಲ್ಲೇಖಿಸಿದರು. ಆದರೆ, ಇಡೀ ಬಜೆಟ್ ಅನ್ನು ಗಮನಿಸಿದರೆ ತಾವೇ ಉಲ್ಲೇಖಿಸಿರುವ ಮಾತಿಗೆ ಸಚಿವರು ಬದ್ಧರಾಗಿಲ್ಲ ಎನ್ನುವುದು ಎದ್ದು ಕಾಣುತ್ತದೆ. ಏಕೆಂದರೆ ದೇಶದ ಜನರ ಅಭಿವೃದ್ಧಿಗಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಮೇಲಿನ ಬಂಡವಾಳ ಹೂಡಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಆದ್ದರಿಂದ ಈ ಬಜೆಟ್ ದೇಶದ ಜನರಿಗಾಗಿ ಅಲ್ಲ, ಇದು ಕೇವಲ ರಾಷ್ಟ್ರೀಯ ಚಾಂಪಿಯನ್‌ಗಳಿಗಾಗಿ ಎನ್ನುವುದು ಸ್ಪಷ್ಟವಾಗುತ್ತದೆ.

* ಲೇಖಕ– ಸಹ ಪ್ರಾಧ್ಯಾಪಕ, ಪಿಇಎಸ್‌ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.