ADVERTISEMENT

ಬಜೆಟ್‌ ವಿಶ್ಲೇಷಣೆ: ಕೃಷಿ ವಲಯದ ಬೆಳವಣಿಗೆಗೆ ವೇಗವರ್ಧಕ

ಆರ್‌.ಎಸ್. ದೇಶಪಾಂಡೆ
Published 1 ಫೆಬ್ರುವರಿ 2023, 19:30 IST
Last Updated 1 ಫೆಬ್ರುವರಿ 2023, 19:30 IST
ಆರ್‌.ಎಸ್‌. ದೇಶಪಾಂಡೆ
ಆರ್‌.ಎಸ್‌. ದೇಶಪಾಂಡೆ   

ಈ ಬಾರಿಯ ಬಜೆಟ್‌ಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಎರಡು ಪ್ರಮುಖ ಸವಾಲುಗಳನ್ನು ಪ್ರಸ್ತಾಪಿಸಲಾಗಿತ್ತು. ನಿರುದ್ಯೋಗ ಮತ್ತು ಹಣದುಬ್ಬರ ವಿಷಯಗಳ ಕುರಿತು ಹಣಕಾಸು ಸಚಿವರ ಗಮನಸೆಳೆಯಲಾಗಿತ್ತು.

ಆದರೆ, ಕಳೆದ ಎರಡು ವರ್ಷಗಳಿಂದ ಕೃಷಿ ಕ್ಷೇತ್ರದ ಸಾಧನೆ ಸಾಮಾನ್ಯವಾಗಿತ್ತು. ಹೀಗಾಗಿ, ಸದ್ಯಕ್ಕೆ ಇದು ಪ್ರಮುಖ ಸವಾಲುಗಳನ್ನು ಎದುರಸುತ್ತಿರುವ ಕ್ಷೇತ್ರವಾಗಿಲ್ಲ. ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ₹6 ಸಾವಿರ ನೀಡುವ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿ’ ಯೋಜನೆಯು ಈಗಾಗಲೇ 11.4 ಕೋಟಿ ರೈತರನ್ನು ತಲುಪಿದೆ.

ಬಜೆಟ್‌ ಭಾಷಣದಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚು ವಿಷಯಗಳನ್ನು ಪ್ರಸ್ತಾಪಿಸಿಲ್ಲ. ಕೃಷಿ ಕ್ಷೇತ್ರವನ್ನು ಮತ್ತಷ್ಟು ಆಧುನಿಕ ತಂತ್ರಜ್ಞಾನದತ್ತ
ಕೊಂಡೊಯ್ಯುವ ನಿಟ್ಟಿನಲ್ಲಿ ಡಿಜಿಟಲ್‌ ವೇದಿಕೆಯನ್ನು ಸೃಷ್ಟಿಸುವುದಾಗಿ ಘೋಷಿಸಲಾಗಿದೆ. ‘ಕೃಷಿಗಾಗಿ ಡಿಜಿಟಲ್‌ ಸಾರ್ವಜನಿಕ ಮೂಲ
ಸೌಕರ್ಯ’ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿಪ್ರಸ್ತಾಪಿಸಲಾಗಿದೆ. ಇದು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬಹುದು. ಬಿತ್ತನೆ, ಬೆಳೆ ಪದ್ಧತಿ, ಮಾರುಕಟ್ಟೆ ವಿವರಗಳು ಮತ್ತು ಕೃಷಿ– ತಂತ್ರಜ್ಞಾನ ಆಧಾರಿತ ಉದ್ಯಮದ ಬೆಳವಣಿಗೆಗೆ ಪೂರಕವಾಗಬಹುದು. ಈ ತಂತ್ರ ಜ್ಞಾನವು ಮೊಬೈಲ್‌ನಲ್ಲಿ ಲಭ್ಯವಾಗಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ವೇಳೆ, ಲಭ್ಯವಾಗುವುದಾದರೆ ಕೃಷಿಕರಿಗೆ ಬಹಳಷ್ಟು ಅನುಕೂಲಗಳಾಗಲಿವೆ. ಇದರಲ್ಲಿ ಒಂದು ತೊಡಕು ಕಾಣಿಸಿಕೊಳ್ಳಬಹುದು. ಭಾರತದಲ್ಲಿ ಭೂ ದಾಖಲೆಗಳನ್ನು ಸರಳವಾಗಿ ನಿರ್ವಹಿಸಿಲ್ಲ ಮತ್ತು ಸಮರ್ಪಕವಾಗಿ ಕಾಲಕ್ಕೆ ತಕ್ಕಂತೆ ಉನ್ನತೀಕರಿಸಿಲ್ಲ. ಇದರಿಂದಾಗಿ, ಈ ವಿಷಯದಲ್ಲಿ ಡಿಜಿಟಲ್‌ ವೇದಿಕೆಯನ್ನು ನಿರ್ವಹಿಸುವಲ್ಲಿ ಕಷ್ಟಕರವಾಗಬಹುದು.

ADVERTISEMENT

‘ಕೃಷಿ ವೇಗವರ್ಧಕ ನಿಧಿ’ (ಎಎಎಫ್‌) ಸ್ಥಾಪಿಸುವ ಕುರಿತು ಮತ್ತೊಂದು ಮಹತ್ವದ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ನಿಧಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ, ಕೃಷಿಕರ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಮಹತ್ವದ ಹೆಜ್ಜೆಯಾಗಬಹುದು. ‘ಎಎಎಫ್‌’ ಅನ್ನು ಯಾವ ರೀತಿಯಲ್ಲಿ ಬಳಸಲಾಗುತ್ತದೆ ಮತ್ತು ಕೃಷಿಕರಿಗಾಗುವ ಪ್ರಯೋಜನಗಳ ಬಗ್ಗೆ ಮುಂದಿನ ದಿನಗಳಲ್ಲಿ ವಿಶ್ಲೇಷಿಸಬಹುದು.‌

ಕೃಷಿ ವಲಯಕ್ಕೆ ವೆಚ್ಚ ಮಾಡುವುದನ್ನು ಹೆಚ್ಚಿಸಲಾಗಿದೆ. ₹8 ಸಾವಿರ ಕೋಟಿಯಷ್ಟು ಮೊತ್ತವನ್ನು ಈ ವಲಯದಲ್ಲಿ ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಿಂದ, ಎಎಎಫ್‌ಗೂ ಸಾಕಷ್ಟು ಮೊತ್ತ ದೊರೆಯಲಿದೆ. ಹಣಕಾಸು ಸಚಿವರು ಬಜೆಟ್‌ ಭಾಷಣದಲ್ಲಿ ಹತ್ತಿ ಮತ್ತು ಸಿರಿಧಾನ್ಯಗಳಿಗೂ ಪ್ರಾಮುಖ್ಯತೆ ನೀಡುವುದಾಗಿ ಪ್ರಸ್ತಾಪಿಸಿದ್ದಾರೆ. ಹತ್ತಿ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಇದು ಗಮನಾರ್ಹ ಅಂಶವಾಗಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ದೊರೆಯುವ ಅನುದಾನದಲ್ಲಿ ಕ್ಲಸ್ಟರ್‌ ಆಧಾರಿತ ಹೊಸ ಯೋಜನೆಯನ್ನು ಘೋಷಿಸಲಾಗಿದೆ.

ಸಿರಿಧಾನ್ಯಗಳಿಗಾಗಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ‘ಶ್ರೀ ಅನ್ನ’ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ, ಇದು ಯಾವ ರೀತಿ ಕಾರ್ಯನಿರ್ವಹಿಸಲಿದೆ ಎನ್ನುವ ಬಗ್ಗೆ ಸ್ಪಷ್ಟವಾದ ವಿವರಗಳು ಇಲ್ಲ. ಸಿರಿಧಾನ್ಯಗಳು ಮತ್ತು ಸಂಶೋಧನೆಗೆ ಮೀಸಲಾದ ಭಾರತೀಯ ಸಿರಿಧಾನ್ಯಗಳ ಸಂಶೋಧನೆ ಸಂಸ್ಥೆಯ ಜತೆಗೆ ಹೆಚ್ಚುವರಿಯಾಗಿ ಇನ್ನೊಂದು ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆಯೇ ಎನ್ನುವಬಗ್ಗೆ ಸ್ಪಷ್ಟತೆ ಇಲ್ಲ. ಹೊಸ ಸಂಸ್ಥೆಯು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲುಸೀಮಿತವಾಗಲಿದೆಯೇ ಅಥವಾ ಇಲ್ಲಿನ ಸಂಶೋಧನೆಗಳು ಕೃಷಿಕರ ಜಮೀನುಗಳಿಗೆ ತಲು
ಪಲಿವೆಯೇ ಎನ್ನುವ ಬಗ್ಗೆ ವಿವರ ಅಗತ್ಯವಿದೆ.

ದೇಶದಾದ್ಯಂತ 1930ರಲ್ಲಿ ಸ್ಥಾಪಿಸಲಾದ ಒಣ ಬೇಸಾಯ ಸಂಶೋಧನಾ ಕೇಂದ್ರದ ಕುರಿತ ನಮ್ಮ ಅನುಭವಗಳು ಇದಕ್ಕೆ ಕನ್ನಡಿ ಹಿಡಿದಿವೆ. ಒಣ ಬೇಸಾಯ ಸಂಶೋಧನಾ ಕೇಂದ್ರ ಸುತ್ತಮುತ್ತ ಪ್ರದೇಶದಲ್ಲೇ ರೈತರಿಗೆ ಸಿರಿಧಾನ್ಯಗಳ ಹೊಸ ತಳಿಗಳ ಬಗ್ಗೆ ಅಥವಾ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಆಸಕ್ತಿದಾಯಕ ವಿಷಯ ಏನೆಂದರೆ, ಈ ಎಲ್ಲ ಘೋಷಣೆಗಳು ಕೆಲವು ವರ್ಷಗಳ ಬಳಿಕವೇ ಅನುಷ್ಠಾನಗೊಳ್ಳಲಿವೆ. ಹೀಗಾಗಿ, ಇಂತಹ ಸಂಸ್ಥೆಗಳಿಂದ ಅನುಕೂಲಗಳು ಸದ್ಯಕ್ಕೆ ದೊರೆಯುವುದಿಲ್ಲ. ಈ ವರ್ಷ ಇಂತಹ ಸಂಸ್ಥೆಗಳನ್ನು ಸ್ಥಾಪಿಸುವುದರಲ್ಲೇ ಸಮಯ ಕಳೆದು ಹೋಗುತ್ತದೆ.

ಹಣಕಾಸು ಸಚಿವರು ಕೃಷಿಗೆ ಪೂರಕವಾದ ಮೀನುಗಾರಿಕೆ ಮತ್ತು ತೋಟಗಾರಿಕೆಯಂತಹ ಇತರ ವಲಯಗಳ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಇದು ಸ್ವಾಗತಾರ್ಹ ಬದಲಾವಣೆ. ಮೌಲ್ಯವರ್ಧಿತ ತೋಟಗಾರಿಕೆಗಳ ಬೆಳೆಗಳಿಗಾಗಿ ರೋಗ ಮುಕ್ತ ಸಸಿಗಳಿಗೆ ಆದ್ಯತೆ ನೀಡುವ ಯೋಜನೆಯನ್ನು ಪ್ರಕಟಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೂಪಿಸಲಾಗುವ ‘ಆತ್ಮನಿರ್ಭರ ಕ್ಲೀನ್‌ ಪ್ಲ್ಯಾಂಟ್‌ ಯೋಜನೆ’ ಶ್ಲಾಘನೀಯ.

ಲೇಖಕರು: ಐಸೆಕ್‌ ಮಾಜಿ ನಿರ್ದೇಶಕ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.