ADVERTISEMENT

ಬಜೆಟ್‌ ವಿಶ್ಲೇಷಣೆ: ಆದಾಯ ತೆರಿಗೆ ಇಳಿಕೆ ತಂತ್ರ, ಮತ ಗಳಿಕೆಯ ಮಂತ್ರ

ಪ್ರಮೋದ ಶ್ರೀಕಾಂತ ದೈತೋಟ
Published 1 ಫೆಬ್ರುವರಿ 2023, 19:30 IST
Last Updated 1 ಫೆಬ್ರುವರಿ 2023, 19:30 IST
ಪ್ರಮೋದ ಶ್ರೀಕಾಂತ ದೈತೋಟ
ಪ್ರಮೋದ ಶ್ರೀಕಾಂತ ದೈತೋಟ   

ಹಿಂದೆಯೇ ಜಾರಿಗೆ ಬಂದಿರುವ ‘ಹೊಸ ತೆರಿಗೆ ದರ ಪದ್ದತಿ’ಯನ್ನು ಆದಾಯ ತೆರಿಗೆ ಪಾವತಿಸುವ ಇನ್ನಷ್ಟು ಮಂದಿ ಆಯ್ಕೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಮೂಲ ತೆರಿಗೆಯ ಗರಿಷ್ಠ ಆದಾಯ ವಿನಾಯಿತಿ ಮೊತ್ತವನ್ನು ಈ ಬಾರಿ ₹ 2.50 ಲಕ್ಷದಿಂದ ₹ 3.00 ಲಕ್ಷಕ್ಕೆ ಹೆಚ್ಚು ಮಾಡಲಾಗಿದೆ. ಹೊಸ ತೆರಿಗೆ ದರ ಪದ್ದತಿ ಆಯ್ಕೆ ಮಾಡಿಕೊಂಡವರಿಗೆ ಇದು ಬಹಳಷ್ಟು ಪ್ರಯೋಜನ ನೀಡಲಿದೆ. ಗರಿಷ್ಠ ತೆರಿಗೆ ದರ ಶೇಕಡ 30 ಆಗಿರುವುದರಿಂದ, ಹೆಚ್ಚೆ೦ದರೆ ₹ 15,000ದಷ್ಟು ಮೂಲ ತೆರಿಗೆಯನ್ನು ಉಳಿಸುವ ಅವಕಾಶವಿದೆ.

ಆದಾಯ ತೆರಿಗೆ ಪಾವತಿದಾರರ ಪಾಲಿಗೆ, ಹೊಸ ತೆರಿಗೆ ದರ ಪದ್ಧತಿಯು ಇನ್ನು ಮುಂದೆ ಸಹಜವಾಗಿ ಅನ್ವಯವಾಗಲಿದೆ. ಅಂದರೆ, ನೀವು ಉದ್ಯೋಗ ಮಾಡುವ ಸಂಸ್ಥೆ ಅಥವಾ ಕಂಪನಿಗೆ ನಿಮ್ಮ ಆಯ್ಕೆಯ ತೆರಿಗೆ ಪದ್ದತಿಯನ್ನು (ಹಳೆಯದೋ ಅಥವಾ ಹೊಸದೋ ಎಂಬುದನ್ನು) ಮೊದಲೇ ತಿಳಿಸದೆ ಇದ್ದಲ್ಲಿ ಅವರು ಹೊಸ ಆದಾಯ ತೆರಿಗೆ ದರ ಪದ್ಧತಿಯನ್ನೇ ನಿಮ್ಮ ಆಯ್ಕೆ ಎಂದು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ನಿಮ್ಮ ಆದಾಯಕ್ಕೆ ತೆರಿಗೆ ಕಡಿತಗೊಳಿಸಬಹುದಾಗಿದೆ. ಹೀಗಾಗಿ ಹಳೆಯ ಪದ್ಧತಿಯಲ್ಲಿ ನಿಮಗೆ ಹೆಚ್ಚಿನ ತೆರಿಗೆ ಉಳಿತಾಯಕ್ಕೆ ಅವಕಾಶವಿದ್ದರೂ ನಿಮ್ಮ ಆಯ್ಕೆಯನ್ನು ಮೊದಲೇ ನಿರ್ಧರಿಸದಿದ್ದರೆ ಉದ್ಯೋಗದಾತರಿಂದ ಹೆಚ್ಚಿನ ತೆರಿಗೆ ಕಡಿತ ಆಗಬಹುದಾದ ಸಂಭವ ಇದೆ. ಹೀಗಾಗಿ, ಆದಾಯ ತೆರಿಗೆ ಪಾವತಿದಾರರು ತಮಗೆ ಇಷ್ಟವಾದ ತೆರಿಗೆ ಪದ್ದತಿಯ ಆಯ್ಕೆಯ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸುವುದು ಅಗತ್ಯ.

ಹಳೆಯ ತೆರಿಗೆ ದರ ಪದ್ಧತಿ ಆಯ್ಕೆ ಮಾಡಿದವರಿಗೆ, ತೆರಿಗೆಗೆ ಒಳಪಡುವ ಆದಾಯ ₹ 5 ಲಕ್ಷದೊಳಗಿದ್ದರೆ, ಲಭ್ಯವಿರುವ ತೆರಿಗೆ ವಿನಾಯಿತಿಯು ಸೆಕ್ಷನ್ 87 ಎ ಅಡಿ ₹ 12,500 ಅಥವಾ ಸಂಪೂರ್ಣ ತೆರಿಗೆ ಮೊತ್ತ ಆಗಿದೆ. ಈ ಸೆಕ್ಷನ್ ಅಡಿ, ಹೊಸ ತೆರಿಗೆ ದರ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರು ₹ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ತೆರಬೇಕಾಗಿಲ್ಲ ಎಂದು ಬಜೆಟ್‌ ಹೇಳಿದೆ. ಅಂದರೆ ಹೊಸ ತೆರಿಗೆ ದರ ಪದ್ಧತಿಯ ಅಡಿ ₹ 25,000 ತನಕ ಬರುವ ತೆರಿಗೆಗೆ ಸಂಪೂರ್ಣ ವಿನಾಯಿತಿ ಇದೆ. ಹೊಸ ತೆರಿಗೆ ಪದ್ದತಿಯನ್ನು ಇನ್ನಷ್ಟು ಜನಪ್ರಿಯ ಆಗಿಸುವ ಉದ್ದೇಶ ಇಲ್ಲಿದೆ. ತೆರಿಗೆ ಪಾವತಿದಾರರು ತಮ್ಮ ತೆರಿಗೆಯ ಎಷ್ಟಾಗಬಹುದು ಎಂಬುದನ್ನು ಎರಡೂ ಪದ್ಧತಿಗಳ ಅಡಿಯಲ್ಲಿ ಸರಿಯಾಗಿ ಲೆಕ್ಕ ಹಾಕಿ ಸೂಕ್ತ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡಬಹುದು.

ADVERTISEMENT

ಹೊಸ ತೆರಿಗೆ ದರ ಪದ್ಧತಿಯಲ್ಲಿನ ತೆರಿಗೆ ಹಂತಗಳನ್ನು ಬದಲಾಯಿಸಲಾಗಿದೆ. ಮೊದಲೇ ಹೇಳಿದಂತೆ ತೆರಿಗೆ ವಿನಾಯಿತಿ ಮೊತ್ತ ಹೆಚ್ಚಿಸಲಾಗಿದೆ. ಹೀಗಿದ್ದರೂ, ಹೊಸ ತೆರಿಗೆ ಹಾಗೂ ಹಳೆಯ ತೆರಿಗೆ ಪದ್ದತಿಯ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಚಾರವು ಅನೇಕರ ಪಾಲಿಗೆ ಸವಾಲಾಗಿ ಪರಿಣಮಿಸಲಿದೆ. ಕಾರಣ, ಹಳೆಯ ತೆರಿಗೆ ದರ ಪದ್ದತಿಯಲ್ಲಿ ಅನೇಕ ಬಗೆಯ ತೆರಿಗೆ ವಿನಾಯಿತಿಗಳನ್ನು ಪರಿಗಣಿಸಲು ಅವಕಾಶ ಇದೆ. ಉದಾಹರಣೆಗೆ, ಸೆಕ್ಷನ್ 10ರ ಅಡಿ ಸಿಗುವ ಮನೆ ಬಾಡಿಗೆ ವಿನಾಯಿತಿ, ರಜಾ ಪ್ರವಾಸದ ವಿನಾಯಿತಿ, ಮಕ್ಕಳ ವಿದ್ಯಾಭ್ಯಾಸ ಭತ್ಯೆ, ಹಾಸ್ಟೆಲ್ ಭತ್ಯೆ ಇತ್ಯಾದಿ. ಇವಲ್ಲದೆ, ಮನೆ ಸಾಲದ ಮೇಲಿನ ಬಡ್ಡಿ, ಮಕ್ಕಳ ಶಾಲಾ ಶಿಕ್ಷಣಕ್ಕಾಗಿ ಪಾವತಿಸುವ ಶುಲ್ಕ, ಪಿಎಫ್ ಮತ್ತು ಜೀವ ವಿಮಾ ಯೋಜನೆಗಳಲ್ಲಿ ತೊಡಗಿಸಿದ ಮೊತ್ತ ಇತ್ಯಾದಿಗಳ ಮೇಲೆಯೂ ಆದಾಯ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಹಳೆಯ ತೆರಿಗೆ ದರ ಪದ್ಧತಿಯಲ್ಲಿ ಇದೆ.

ಎನ್‌ಪಿಎಸ್‌ನಲ್ಲಿ ತೊಡಗಿಸುವ ಮೊತ್ತ, ಆರೋಗ್ಯ ವಿಮೆ, ಯಾವುದೇ ದೇಣಿಗೆ ಮೊತ್ತಕ್ಕೂ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಹೊಸ ಪದ್ದತಿಯ ಅಡಿ ಇಂತಹ ಅವಕಾಶವಿಲ್ಲ. ಆದರೆ, ವೇತನದಾರರಿಗೆ ₹ 50,000ದ ಸ್ಟ್ಯಾಂಡರ್ಡ್ ಡಿಡಕ್ಷನ್ ಹಾಗೂ ಕೌಟುಂಬಿಕ ಪಿಂಚಣಿ ಪಡೆಯುವ ತೆರಿಗೆದಾರರಿಗೆ ₹ 15,000ದ ತನಕದ ವಿನಾಯಿತಿ ಕೊಟ್ಟಿರುವುದು ವಿಶೇಷ. ಇವೆರಡನ್ನು ಹೊರತುಪಡಿಸಿದರೆ, ಉಳಿದ ಯಾವುದೇ ವಿನಾಯಿತಿಗಳು ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಇರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಹೀಗಾಗಿ, ಎಲ್ಲ ವಿನಾಯಿತಿಗಳ ಪ್ರಯೋಜನವನ್ನು ತುಲನೆ ಮಾಡಿ ಲೆಕ್ಕ ಹಾಕಿದಾಗಲಷ್ಟೇ ತೆರಿಗೆದಾರರು ತಮಗೆ ಸರಿಯಾದ ತೆರಿಗೆ ದರ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಅಡಿ ಪ್ರಸ್ತುತ ಶೇ 8ರ ಬಡ್ಡಿ ದರದಲ್ಲಿ ₹ 15 ಲಕ್ಷದವರೆಗೆ ಹೂಡಿಕೆಗೆ ಅವಕಾಶವಿದೆ. ಈ ಮಿತಿಯನ್ನು ₹ 30 ಲಕ್ಷಕ್ಕೆ ಹೆಚ್ಚಿಸಿದ್ದು ಹೆಚ್ಚಿನ ಹೂಡಿಕೆಗೆ ಅವಕಾಶ ಹಾಗೂ ನಿವೃತ್ತಿ ಬದುಕಿಗೆ ಹೆಚ್ಚಿನ ಆದಾಯ ಒದಗಿಸಿಕೊಡಲಿದೆ. ಈ ಯೋಜನೆಯಲ್ಲದೆ, ಮಾಸಿಕ ಬಡ್ಡಿ ಆದಾಯ ಆಧರಿಸಿ ಬದುಕುವ ಹಿರಿಯ ನಾಗರಿಕರಿಗೆ ಗರಿಷ್ಠ ₹ 4.5 ಲಕ್ಷದವರೆಗೆ ಮಾತ್ರ ಹೂಡಿಕೆ ಮಾಡುವ ಅವಕಾಶ ಅಂಚೆ ಇಲಾಖೆಯ ತಿಂಗಳ ಆದಾಯ ಯೋಜನೆಯಲ್ಲಿ ಇದುವರೆಗೆ ಇತ್ತು. ಇನ್ನು ಮುಂದೆ ₹ 9 ಲಕ್ಷದವರೆಗೆ ಹೂಡಿಕೆ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಂಟಿ ಖಾತೆಯಲ್ಲಿ ₹ 15 ಲಕ್ಷದವರೆಗೆ ಹೂಡಿಕೆ ಮಾಡಲು ಇನ್ನು ಮುಂದೆ ಅವಕಾಶ ಸಿಗಲಿದೆ (ಇದು ಈವರೆಗೆ ₹ 9 ಲಕ್ಷ ಆಗಿತ್ತು). ಈ ಎರಡೂ ಕ್ರಮಗಳು ಸ್ವಾಗತಾರ್ಹ. ಒಟ್ಟಿನಲ್ಲಿ, ಚುನಾವಣೆಯ ಮೇಲೆ ಒಂದು ಕಣ್ಣಿಟ್ಟೇ ತೆರಿಗೆ ವಿನಾಯಿತಿಯನ್ನು ಒಂದಿಷ್ಟು ಹೆಚ್ಚಿಸಲಾಗಿದೆ.

⇒ಲೇಖಕ: ಲೆಕ್ಕಪರಿಶೋಧಕ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.