ಕಾಂಗ್ರೆಸ್
ನವದೆಹಲಿ (ಪಿಟಿಐ): ‘ಇದೊಂದು ನಕಲು ಮಾಡಿದ ಬಜೆಟ್. ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ರೂಪಿಸಿದ್ದ ಪ್ರಣಾಳಿಕೆಯನ್ನು ನಕಲು ಮಾಡಿ, ಬಜೆಟ್ ರೂಪಿಸಿದ ‘ನಕಲು ಮಾಡುವ ಸರ್ಕಾರ’ ಎಂದು ಕಾಂಗ್ರೆಸ್ ಮಂಗಳವಾರ ಲೇವಡಿ ಮಾಡಿದೆ.
‘ನಮ್ಮ ಪಕ್ಷದ ಪ್ರಣಾಳಿಕೆಯನ್ನು ನಕಲು ಮಾಡಿದ್ದಾರೆ. ಆದರೂ, ಅವುಗಳನ್ನು ಸರಿಯಾಗಿ ಜಾರಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದು ಪಕ್ಷ ಹೇಳಿದೆ.
‘ನಿರುದ್ಯೋಗವು ಈ ದೇಶದ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಸರ್ಕಾರದ ಪ್ರತಿಕ್ರಿಯೆ ಮಾತ್ರ ಸ್ವಲ್ಪ ಮಾತ್ರವೇ. ಅವರ ನೀತಿಗಳು ನಿರುದ್ಯೋಗದಂಥ ಇಂಥ ಘೋರ ಪರಿಸ್ಥಿತಿಗೆ ತುಸುವೇ ಪರಿಣಾಮ ಬೀರಬಲ್ಲದಂತಾಗಿದೆ’ ಎಂದಿದೆ.
‘ಇದು ದೇಶದ ಪ್ರಗತಿಗಾಗಿ ಮಂಡಿಸಿದ ಬಜೆಟ್ ಅಲ್ಲ. ಮೋದಿ ಸರ್ಕಾರ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಅಷ್ಟೆ. ಜೊತೆಗೆ, ಇದೊಂದು ನಕಲು ಬಜೆಟ್. ಆದರೆ, ಸರ್ಕಾರಕ್ಕೆ ಕಾಂಗ್ರೆಸ್‌ನ ನ್ಯಾಯಪತ್ರವನ್ನು ಸರಿಯಾಗಿ ನಕಲು ಮಾಡಲು ಸಾಧ್ಯವಾಗಿಲ್ಲ! ಎನ್‌ಡಿಎ ಸರ್ಕಾರವನ್ನು ಉಳಿಸಿಕೊಳ್ಳಲು, ಅರೆ ಮನಸ್ಸಿನಿಂದ ಉಚಿತ ಕೊಡುಗೆಗಳನ್ನು ವಿತರಿಸಲಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ಇದು ಕಾಪಿ–ಪೇಸ್ಟ್ ಸರ್ಕಾರ, ಕಾಪಿ–ಪೇಸ್ಟ್ ಬಜೆಟ್’ ಎಂದು ಕಾಂಗ್ರೆಸ್‌ನ ಪವನ್ ಖೇರಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಯುವಜನರಿಗೆ ಸ್ಟೈಫಂಡ್ ನೀಡುವ ಯೋಜನೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಿಂದ ನಕಲು ಮಾಡಲಾಗಿದೆ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯುವ ನ್ಯಾಯವನ್ನು ಉಲ್ಲೇಖಿಸಲಾಗಿತ್ತು. ಅದರಂತೆ ಪದವಿ/ಡಿಪ್ಲೊಮಾ ಹೊಂದಿರುವವರಿಗೆ ವರ್ಷದಲ್ಲಿ ₹1 ಲಕ್ಷ ಸ್ಟೈಫಂಡ್ ನೀಡುತ್ತೇವೆ ಎಂದಿತ್ತು. ಕೇಂದ್ರದ ಬಜೆಟ್‌ನಲ್ಲಿ, ಇಂಟರ್ನ್‌ಶಿಪ್ ಮಾಡುವವರಿಗೆ ವರ್ಷಕ್ಕೆ ₹60 ಸಾವಿರ ನೀಡುತ್ತೇವೆ ಎಂದು ಘೋಷಿಸಲಾಗಿದೆ. ಈ ಐಡಿಯಾ ನೀಡಿದ್ದಕ್ಕಾಗಿ ಮೋದಿ ಅವರು ಕಾಂಗ್ರೆಸ್‌ಗೆ ಧನ್ಯವಾದ ಹೇಳಬೇಕು’ ಎಂದು ಪವನ್ ಖೇರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.