ADVERTISEMENT

ಆರ್ಥಿಕ ಸಮೀಕ್ಷೆ: 2020–21ರಲ್ಲಿ ಜಿಡಿಪಿ ಅಂದಾಜು ಶೇ 6–6.5

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 8:47 IST
Last Updated 31 ಜನವರಿ 2020, 8:47 IST
ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರ್ಥಿಕ ಸಮೀಕ್ಷೆ ಮಂಡಿಸಿದರು
ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆರ್ಥಿಕ ಸಮೀಕ್ಷೆ ಮಂಡಿಸಿದರು   

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 5ರಷ್ಟು ಇರಲಿದೆ ಹಾಗೂ ಮಾರ್ಚ್‌ 2021ಕ್ಕೆ ಕೊನೆಯಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6–6.5 ರಷ್ಟು ಇರಲಿದೆ ಎಂದು ಸರ್ಕಾರದ ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ 2019–20 ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 7ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಆದರೆ, ಜಿಡಿಪಿ ಶೇ 5ಕ್ಕೆ ಕುಸಿದಿದೆ. ಆರ್ಥಿಕತೆಗೆ ಚೇತರಿಕೆ ನೀಡುವುದು, ಏಪ್ರಿಲ್‌ನಿಂದ ಆರಂಭವಾಗುವ 2020–21 ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ಸವಾಲು ಎದುರಿಸಲು ವಿತ್ತೀಯ ಕೊರತೆ ಗುರಿಯನ್ನು ಸಡಿಲಗೊಳಿಸುವ ಅನಿವಾರ್ಯತೆ ಇರುವುದಾಗಿ ಸಮೀಕ್ಷೆ ಹೇಳಿದೆ.

2019ರ ಏಪ್ರಿಲ್‌ನಲ್ಲಿ ಶೇ 3.2ರಷ್ಟಿದ್ದಹಣದುಬ್ಬರ ಡಿಸೆಂಬರ್‌ ವೇಳೆಗೆ ಶೇ 2.6ಕ್ಕೆ ಕುಸಿದಿದೆ. ಆರ್ಥಿಕತೆ ಮೇಲೆ ಆಗಿರುವ ಬೇಡಿಕೆ ಕುಸಿತದ ಪರಿಣಾಮವನ್ನು ಇದು ಬಿಂಬಿಸುತ್ತಿದೆ.

ADVERTISEMENT

2018-19ರಲ್ಲಿ ವಿತ್ತೀಯ ಕೊರತೆ ಗುರಿ ಶೇ.3.3ರಷ್ಟಿತ್ತು.2019ರ ಬಜೆಟ್ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಗುರಿಯನ್ನು ಶೇ.3.4ರಿಂದ ಶೇ.3.3ಕ್ಕೆ ಇಳಿಸಿದ್ದರು. ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಪರಿಷ್ಕರಿಸುವ ಅಗತ್ಯ ತಿಳಿಸಲಾಗಿದ್ದು, ಎಂಕೇಯ್‌ ಬ್ರೊಕರೇಜ್‌ ಶೇ 3.5 ಆಗಲಿದೆ ಎಂದು ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.