ADVERTISEMENT

ನಾನು ಮುಚ್ಚುಮರೆ ಮಾಡಿಲ್ಲ: ಬಿಎಸ್‌ವೈ

ಕೇಂದ್ರದ ಪಾಲು ₹ 15 ಸಾವಿರ ಕೋಟಿ ಕಡಿಮೆ– ಒಪ್ಪಿಕೊಂಡ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 12:58 IST
Last Updated 5 ಮಾರ್ಚ್ 2020, 12:58 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ‘ನಾನು ಮುಚ್ಚುಮರೆ ಮಾಡಿಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣ ಕಡಿಮೆ ಆಗಿದೆ. ಇದನ್ನು ಬಜೆಟ್‌ನಲ್ಲೇ ಹೇಳಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘15ನೇ ಹಣಕಾಸು ಆಯೋಗದ ನಿಧಿಯಿಂದ ಬರಬೇಕಾಗಿರುವ ಹಣ ಹಾಗೂ ಕೇಂದ್ರದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಬರುವ ಪಾಲು ಕಡಿತ ಆಗಿದೆ. ಜಿಎಸ್‌ಟಿ ಪರಿಹಾರವೂ ಕಡಿಮೆ ಆಗಿದೆ. ಈ ಎಲ್ಲ ಕಾರಣದಿಂದಾಗಿ ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ ಸಂಪನ್ಮೂಲ ಸಂಗ್ರಹದಲ್ಲಿ ಕೇಂದ್ರದ ಪಾಲು ₹ 15,454 ಕೋಟಿ ಕಡಿಮೆ ಆಗಿದೆ’ ಎಂದು ವಿವರಿಸಿದರು.

ಪಟ್ರೋಲ್‌, ಡೀಸೆಲ್‌ ಮೇಲಿನ ಕರ ಹಾಗೂ ಅಬಕಾರಿ ತೆರಿಗೆ ಹೆಚ್ಚಳವನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡರು. ಪೆಟ್ರೋಲ್‌ ಮತ್ತು ಡೀಸೆಲ್‌ ತೆರಿಗೆ ಹೆಚ್ಚಳದಿಂದ ₹1,500 ಕೋಟಿ ಹಾಗೂ ಅಬಕಾರಿ ತೆರಿಗೆ ಹೆಚ್ಚಳದಿಂದ ₹ 1,200 ಕೋಟಿ ವರಮಾನ ನಿರೀಕ್ಷಿಸಲಾಗಿದೆ’ ಎಂದರು.

ADVERTISEMENT

‘ರೈತರ ಸಾಲ ಮನ್ನಾಕ್ಕೆ ಹಣ ಹೊಂದಿಸಬೇಕಿತ್ತು. ಈ ನಡುವೆ ಕೇಂದ್ರದ ಅನುದಾನ ಕಡಿಮೆ ಆಗಿದೆ. ಇವನ್ನೆಲ್ಲ ಸರಿದೂಗಿಸಲು ಸ್ವಲ್ಪ ತೆರಿಗೆ ಹೆಚ್ಚಿಸುವುದು ಅನಿವಾರ್ಯ. ಈ ನಡುವೆಯೂ ಆರ್ಥಿಕ ಸ್ಥಿತಿ ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಿತ್ತೀಯ ಹೊಣೆಗಾರಿಕೆಯ ಎಲ್ಲ ಮಾನದಂಡಗಳಿಗೂ ಬದ್ಧವಾಗಿ ಬಜೆಟ್‌ ಮಂಡಿಸಿದ್ದೇನೆ’ ಎಂದು ಸಮರ್ಥಿಸಿಕೊಂಡರು.

‘2019–20ನೇಸಾಲಿಗೆ ಹೋಲಿಸಿದರೆ ₹2.34 ಲಕ್ಷ ಕೋಟಿಗಳಷ್ಟಿದ್ದ ಬಜೆಟ್‌ ಗಾತ್ರ 2020–21ರಲ್ಲಿ 2.37 ಲಕ್ಷ ಕೋಟಿಗೆ (ಶೇ 1.6ರಷ್ಟು) ಹೆಚ್ಚಿದೆ. ₹ 42,050 ಕೋಟಿಗಳಷ್ಟಿದ್ದ ವಿತ್ತೀಯ ಕೊರತೆ ₹ 46,072 ಕೋಟಿಗಳಿಗೆ ಹೆಚ್ಚಿದೆ. ಇದು ಜಿಎಸ್‌ಡಿಪಿಯ ಶೇ 2.48ರಷ್ಟಿದ್ದುದು ಶೇ 2.52 ರಷ್ಟಾಗಲಿದೆ. ಆದರೂ ಇದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯಲ್ಲಿ ನಿಗದಿಪಡಿಸಿದ ಶೇ 3ರ ಮಿತಿಯ ಒಳಗೆಯೇ ಇದೆ’ ಎಂದರು.

‘ರೈತರಿಗೆ ಆದ್ಯತೆ ನೀಡುವ ವಿಚಾರದಲ್ಲಿ ಒಂದು ಹೆಜ್ಜೆಯನ್ನೂ ಹಿಂದೆ ಇಟ್ಟಿಲ್ಲ. ಕೃಷಿ ಅಭಿವೃದ್ಧಿಗೆ ಹಲವಾರು ಯೊಜನೆ ರೂಪಿಸಿದ್ದೇನೆ. ಬರಪೀಡಿತ ಪ್ರದೇಶದಲ್ಲಿ ಕೃಷಿ ಉತ್ತೇಜನಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಏತ ನೀರಾವರಿಗೆ ಮೊದಲ ಬಾರಿ ₹ 5ಸಾವಿರ ಕೋಟಿ ಮೀಸಲಿಟ್ಟಿದ್ದೇನೆ. ನೆರೆ ಹಾವಳಿಗೆ ಹಿಂದೆಂದೂ ನೀಡದಷ್ಟು ನೆರವು (₹ 21,301 ಕೋಟಿ ) ನೀಡಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿಗೆ ₹ 500 ಕೋಟಿ ಮೀಸಲಿಟ್ಟಿದ್ದೇವೆ. ಎತ್ತಿನ ಹೊಳೆ ಆದಷ್ಟು ಬೇಗ ಪೂರ್ಣಗೊಳಿಸಲು ₹ 1,500 ಕೋಟಿ ಕಾಯ್ದಿರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಿದ್ದೇನೆ’ ಎಂದರು.

ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗೆ ಅನುದಾನ ಕಡಿತ ಆಗಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಈ ಯೋಜನೆಗೆ ಬಜೆಟ್‌ನ ಶೇ 24.01ರಷ್ಟು ಅನುದಾನ ಮೀಸಲಿಡಬೇಕು. ಅದಕ್ಕಿಂತ ಹೆಚ್ಚು ಅನುದಾನ ಹಂಚಿಕೆ ಮಾಡಿದ್ದೇನೆ’ ಎಂದರು.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಬೆಳವಣಿಗೆ ದರ ಶೇ 1ರಷ್ಟು ಇಳಿಕೆ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇಡೀ ದೇಶದಲ್ಲಿ ಜಿಡಿಪಿ ಬೆಳವಣಿಗೆ ಕಡಿಮೆ ಆಗಿದೆ. ಅದರ ಪರಿಣಾಮವಾಗಿ ರಾಜ್ಯದಲ್ಲೂ ಆಗಿದೆ’ ಎಂದರು.

‘ಕೇಂದ್ರ ಅನುದಾನ ಕಡಿತ– ಸಭೆಯಲ್ಲಿ ಪ್ರಸ್ತಾಪ’

‘15ನೇ ಹಣಕಾಸು ಆಯೋಗದ ಸಭೆ ಇದೇ13ನೇ ರಂದು ಇದೆ. ಕೇಂದ್ರದ ತೆರಿಗೆಯಲ್ಲಿ ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಪಾಲು ಕಡಿತ ಮಾಡಿರುವ ಬಗ್ಗೆ ಆ ಸಭೆಯಲ್ಲಿ ಧ್ವನಿ ಎತ್ತಲು ಅವಕಾಶ ಇದೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

14ನೇ ಹಣಕಾಸು ಆಯೋಗದ ಅನುದಾನದಲ್ಲಿ ಹಿಂದೆ ರಾಜ್ಯಕ್ಕೆ ಶೇ 4.7 ರಷ್ಟು ಪಾಲನ್ನು ಹಂಚಿಕೆ ಮಾಡಲಾಗಿತ್ತು. 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಈ ಪಾಲನ್ನು ಶೇ 3.6ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ರಾಜ್ಯಕ್ಕೆ ವರ್ಷದಲ್ಲಿ ಸುಮಾರು ₹ 11ಸಾವಿರ ಕೋಟಿ ಕಡಿತವಾಗಲಿದೆ.

‘ಎರಡೂ ಕಡೆ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಒಳ್ಳೆಯದು ಎಂದು ಬಿಜೆಪಿ ಹೇಳಿತ್ತು. ಬಜೆಟ್‌ ಇದಕ್ಕೆ ವ್ಯತಿರಿಕ್ತವಾಗಿದೆಯಲ್ಲಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.