ADVERTISEMENT

ಕೇಂದ್ರ ಬಜೆಟ್‌: ಆದಾಯ ತೆರಿಗೆ ಕಡಿತ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 21:10 IST
Last Updated 23 ಜನವರಿ 2020, 21:10 IST
ತೆರಿಗೆ ಕಡಿತ
ತೆರಿಗೆ ಕಡಿತ   

ನವದೆಹಲಿ: ವೇತನ ವರ್ಗ ಮತ್ತು ಮಧ್ಯಮ ವರ್ಗದವರಿಗೆ 2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಕಡಿತದ ಶುಭ ಸುದ್ದಿ ಕಾದಿದೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ.

ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಪ್ರಧಾನಿ ಕಚೇರಿ (ಪಿಎಂಒ) ಮಧ್ಯೆ ನಡೆದಿರುವ ಉನ್ನತ ಮಟ್ಟದ ಹಲವು ಸುತ್ತಿನ ಮಾತುಕತೆಗಳನ್ನು ಗಮನಿಸಿದರೆ, ತೆರಿಗೆ ಹಂತ ಮತ್ತು ತೆರಿಗೆ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಆದಾಯ ತೆರಿಗೆ ಕಡಿತ ಮಾಡಬೇಕು ಎಂದು ಸಾರ್ವಜನಿಕರಿಂದ ಗರಿಷ್ಠ ಸಂಖ್ಯೆಯಲ್ಲಿ ಮನವಿಗಳು ಬಂದಿವೆ. ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಲು ವೇತನ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ವಿನಾಯ್ತಿ ನೀಡಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಂಘಟನೆಗಳೂ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ಕಾರವು ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸಿದ ನಂತರ ವೈಯಕ್ತಿಕ ಆದಾಯ ತೆರಿಗೆಯಲ್ಲಿಯೂ ವಿನಾಯ್ತಿ ನೀಡಬೇಕೆಂಬ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ. ಈ ಬೇಡಿಕೆಗೆ ಬಜೆಟ್‌ನಲ್ಲಿ ಉತ್ತರ ಸಿಗಲಿದೆ. ಸದ್ಯಕ್ಕೆ ₹ 2.5 ಲಕ್ಷದಿಂದ ₹ 5 ಲಕ್ಷವರೆಗಿನ ವಾರ್ಷಿಕ ಆದಾಯಕ್ಕೆ ಶೇ 5, ₹ 5 ಲಕ್ಷದಿಂದ ₹ 10 ಲಕ್ಷಕ್ಕೆ ಶೇ 20 ಮತ್ತು ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.