ADVERTISEMENT

ಕೇಂದ್ರ ಬಜೆಟ್‌ 2020| ಮೂಲಸೌಕರ್ಯ ಸೃಷ್ಟಿಗೆ ಬಲ

ಐದು ವರ್ಷಗಳಲ್ಲಿ ₹ 103 ಲಕ್ಷ ಕೋಟಿ ಹೂಡಿಕೆ l ನಿರುದ್ಯೋಗ ಸಮಸ್ಯೆ ಬಗೆಹರಿಸುವತ್ತ ಚಿತ್ತ

ಪಿಟಿಐ
Published 1 ಫೆಬ್ರುವರಿ 2020, 19:34 IST
Last Updated 1 ಫೆಬ್ರುವರಿ 2020, 19:34 IST
   
""

ನವದೆಹಲಿ: ದೇಶದಲ್ಲಿ ಸಾರಿಗೆ ಮೂಲಸೌಕರ್ಯಗಳ ಸೃಷ್ಟಿ ಹಾಗೂ ಹೆದ್ದಾರಿಗಳ ಅಭಿವೃದ್ಧಿಗಾಗಿ ಮುಂಬರುವ ಹಣಕಾಸು ವರ್ಷದಲ್ಲಿ ₹ 1.70 ಲಕ್ಷ ಕೋಟಿಯಷ್ಟು ಅನುದಾನ ಎತ್ತಿಡಲಾಗಿದೆ.

ಶನಿವಾರ ಮಂಡನೆಯಾದ ಬಜೆಟ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಇದಲ್ಲದೆ, ಮೂಲ ಸೌಕರ್ಯ ಸೃಷ್ಟಿಸುವ ಜತೆಗೆ ನಿರುದ್ಯೋಗ ಸಮಸ್ಯೆಯನ್ನೂ ಪರಿಹರಿಸಲು ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗೆ (ಎನ್‌ಐಪಿ) ₹ 103 ಲಕ್ಷ ಕೋಟಿಯಷ್ಟು ದೊಡ್ಡ ಮೊತ್ತವನ್ನು ವ್ಯಯಿಸುವ ಗುರಿ ಹೊಂದಿದೆ.

ಎನ್‌ಐಪಿ ಅಡಿಯಲ್ಲಿ ಒಟ್ಟಾರೆ 6,500 ಯೋಜನೆಗಳಿಗೆ ಅನುಮತಿ ನೀಡಲಾಗಿದ್ದು, ಇದರಿಂದ ಸುಮಾರು ಎರಡು ಕೋಟಿಯಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

ADVERTISEMENT

ವಸತಿ, ಸುರಕ್ಷಿತ ಕುಡಿಯುವ ನೀರು, ಸ್ವಚ್ಛ ಇಂಧನ, ಆರೋಗ್ಯ, ಶಿಕ್ಷಣ, ವಿಮಾನ, ರೈಲು ಹಾಗೂ ಬಸ್‌ ನಿಲ್ದಾಣಗಳ ಅಭಿವೃದ್ಧಿ, ಸರಕು ಸಾಗಣೆ ಮತ್ತು ದಾಸ್ತಾನಿಗೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದೆ.

ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಕ್ಷೇತ್ರ ಗಳಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಉತ್ತೇಜನವನ್ನು ನೀಡಲು ನಿರ್ಧರಿಸಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ನವೋದ್ಯಮಗಳ ಸಹಭಾಗಿತ್ವಕ್ಕೆ ಅವಕಾಶ ನೀಡುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.

ರಾಷ್ಟ್ರೀಯ ಸರಕು ಸಾಗಣೆ ನೀತಿಯನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಸಚಿವರು ಪ್ರಕಟಿಸಿದ್ದಾರೆ. ಸರಕು ಸಾಗಣೆಗೆ ಸಂಬಂಧಿಸಿದ ನಿರ್ಬಂಧಗಳು, ನಿಯಮಗಳ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾತ್ರದ ವಿವರಗಳನ್ನು ಈ ನೀತಿ ಹೊಂದಿರಲಿದೆ. ಸುಗಮ ಸರಕು ಸಾಗಾಟ ವ್ಯವಸ್ಥೆಗೆ
ಇ–ಲಾಜಿಸ್ಟಿಕ್‌ ಏಕಗವಾಕ್ಷಿ ಜಾರಿಗೆ ನಿರ್ಧರಿಸಲಾಗಿದೆ.

ಎನ್‌ಐಪಿಯನ್ನು ಪ್ರಕಟಿಸಿದ ಸಚಿವೆ ನಿರ್ಮಲಾ ಸೀತಾರಾಮನ್‌, ‘ಮೂಲಸೌಕರ್ಯ ಅಭಿವೃದ್ಧಿಯ ಈ ಯೋಜನೆಗಳು ದೇಶದ ಪ್ರತಿಯೊಬ್ಬ ನಾಗರಿಕನ ಜೀವನ ಮಟ್ಟವನ್ನು ಸುಧಾರಿಸುವುದು ಖಚಿತವಾಗಿದೆ’ ಎಂದು ಹೇಳಿದ್ದಾರೆ. ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ ವೇ ಸೇರಿದಂತೆ ಹಲವು ಮಹತ್ವದ ಯೋಜನೆಗಳು 2023ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಅವರು ಪ್ರಕಟಿಸಿದ್ದಾರೆ.

ಒಳನಾಡು ಜಲಸಾರಿಗೆಗೆ ಒತ್ತು ನೀಡಲಾಗಿದ್ದು, ಜಲವಿಕಾಸ ಮಾರ್ಗಗಳ ಅಭಿವೃದ್ಧಿ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ‘ಮೂಲಸೌಕರ್ಯ ಸೃಷ್ಟಿಗಾಗಿ ಮುಂದಿನ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ಹೂಡಿಕೆ ಬಹುದೊಡ್ಡ ಗುರಿಯಾಗಿ ಕಾಣಿಸುತ್ತಿದೆ. ಆದರೆ, ಸರ್ಕಾರ ಈ ವಲಯಕ್ಕೆ ಎಷ್ಟೊಂದು ಮಹತ್ವ ನೀಡಿದೆ ಎಂಬುದು ಬಜೆಟ್‌ನಿಂದ ವ್ಯಕ್ತವಾಗುತ್ತಿದೆ’ ಎಂದು ಆರ್ಥಿಕತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವುದಕ್ಕೆ ಎಷ್ಟು ಅನುದಾನ?


₹ 1.70 ಲಕ್ಷ ಕೋಟಿ: ಸಾರಿಗೆ ಮೂಲಸೌಕರ್ಯಕ್ಕೆ ಒದಗಿಸಿದ ಅನುದಾನ

₹ 72,216 ಕೋಟಿ: ರೈಲ್ವೆ

₹ 91,823 ಕೋಟಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ

₹ 50,040:ವಸತಿ ಮತ್ತು ನಗರಾಭಿವೃದ್ಧಿ

***

ಸುಧಾರಣೆಯಲ್ಲಿ ಸರ್ಕಾರಕ್ಕೆ ನಂಬಿಕೆಯಿಲ್ಲ. ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆಯ ಎಲ್ಲ ಚಿಂತನೆಗಳನ್ನು ತಿರಸ್ಕರಿಸಿದ್ದಾರೆ.ಆರ್ಥಿಕತೆಗೆ ಪುನಶ್ಚೇತನ, ವೃದ್ಧಿ ದರ ಏರಿಕೆ ಅಥವಾ ಉದ್ಯೋಗ ಸೃಷ್ಟಿ ಯತ್ನಗಳನ್ನು ಕೈಬಿಡಲಾಗಿದೆ. ಬಿಜೆಪಿಯ ನಿಷ್ಠ ನಾಯಕರಿಗೂ ಬಜೆಟ್‌ ಚಿಂತನೆಗಳು ಅರ್ಥವಾಗುವುದಿಲ್ಲ

ಚಿದಂಬರಂ, ಕಾಂಗ್ರೆಸ್ ಮುಖಂಡ

***

ಎಲ್‌ಐಸಿ ಚಿಕ್ಕ ಪ್ರಮಾಣದ ಷೇರು ವಿಕ್ರಯ ಮಾಡುವುದರಿಂದ ಸಂಸ್ಥೆಯ ಪಾದರ್ಶಕತೆ ಹಾಗೂ ಹೊಣೆಗಾರಿಕೆ ಹೆಚ್ಚಾಗಲಿದೆ. ಇದರಲ್ಲಿ ದೋಷ ಇದೆ ಎಂದು ನನಗೆ ಅನಿಸುತ್ತಿಲ್ಲ. ರಾಹುಲ್ ಗಾಂಧಿ ಅವರು ವಿಷಯಾಧಾರಿತವಾಗಿ ಪ್ರಶ್ನೆ ಕೇಳಿದರೆ ಅವರಿಗೆ ಉತ್ತರಿಸಲು ನಾನು ಸಿದ್ಧ

ಪೀಯೂಷ್ ಗೋಯಲ್, ಕೇಂದ್ರ ಸಚಿವ

***

ಎಲ್‌ಐಸಿ ಷೇರು ವಿಕ್ರಯ ನಿರ್ಧಾರವು ಸಾರ್ವಜನಿಕ ವಲಯದ ಸಂಸ್ಥೆಗಳ ಪರಂಪರೆಯನ್ನು ಹಾಳುಮಾಡುವ ಸಂಚು. ಸರ್ಕಾರದ ಈ ನಿರ್ಧಾರ ನನ್ನಲ್ಲಿ ಆಘಾತ ಹಾಗೂ ದಿಗಿಲು ಮೂಡಿಸಿದೆ. ಇದು ಸುರಕ್ಷತಾ ಭಾವದ ಅಂತ್ಯ

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ಮಧ್ಯಮವರ್ಗದ ಆಶೋತ್ತರಗಳನ್ನು ಬಜೆಟ್ ಈಡೇರಿಸಿದೆ. ಎಲ್ಲರಿಗೂ ಮನೆ, ಮನೆ ಕೊಳ್ಳುವವರಿಗೆ ಸಬ್ಸಿಡಿ, ಆದಾಯ ತೆರಿಗೆಯಲ್ಲಿ ವಿನಾಯಿತಿ, ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದ್ಧಿಗೆ ಅನುದಾನ, ಜಲಜೀವನ ಮಿಷನ್‌ನಂತಹ ಯೋಜನೆಗಳನ್ನು ಘೋಷಿಸಲಾಗಿದೆ

ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

***

ತೆರಿಗೆ ವ್ಯಾಜ್ಯ ಮೊದಲಾದ ಪ್ರಕರಣಗಳಲ್ಲಿ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿಯಮವನ್ನು ಕೈಬಿಡುವ ಮೂಲಕ ‘ಕಂಪನಿ ಕಾಯ್ದೆ’ಗೆ ತಿದ್ದುಪಡಿ ತರುವ ಪ್ರಸ್ತಾವವು ಉದ್ದಿಮೆಗಳಲ್ಲಿ ವಿಶ್ವಾಸ ಹೆಚ್ಚಿಸಲಿದೆ. ಪಿಪಿಪಿ ಮೂಲಕ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಣೆ ನಿರ್ಧಾರವು ಆಯುಷ್ಮಾನ್ ಭಾರತ ಕಾರ್ಯಕ್ರಮಕ್ಕೆ ಬಲ ತುಂಬಲಿದೆ

ಕಿರಣ್ ಮಜುಂದಾರ್ ಷಾ, ಬಯೋಕಾನ್ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.