ADVERTISEMENT

ಬಜೆಟ್ ವಿಶ್ಲೇಷಣೆ | ಮಕ್ಕಳ ಯೋಜನೆಗಳಿಗೇ ಬಂತು ಬಡತನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶೇ 12ರಷ್ಟು ಅನುದಾನ ಖೋತಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 18:57 IST
Last Updated 5 ಮಾರ್ಚ್ 2020, 18:57 IST
ಮಧುಸೂದನ್‌ ರಾವ್‌ ಬಿ.ವಿ.
ಮಧುಸೂದನ್‌ ರಾವ್‌ ಬಿ.ವಿ.   

ಮಹಿಳೆಯರು ಮತ್ತು ಮಕ್ಕಳು ಸಮಾಜದ ಎರಡು ಕಣ್ಣುಗಳು. ಮಕ್ಕಳ ವಿಚಾರದಲ್ಲಂತೂ ಸರ್ಕಾರದ ಎಲ್ಲ ಯೋಜನೆಗಳೂ ಅವರನ್ನು ಸಮರ್ಪಕವಾಗಿ ತಲುಪಲೇಬೇಕು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಮಕ್ಕಳಿಗೇ ‘ಬಡತನ’ ಕಾಡಿದೆ, ಆದಾಯದ ಕೊರತೆಯಿಂದ ಮಕ್ಕಳ ಯೋಜನೆಗಳಿಗೆ ಕತ್ತರಿ ಬಿದ್ದಿದೆ.

ಸರ್ಕಾರದ ಮಹತ್ವಾಕಾಂಕ್ಷಿ ‘ಭಾಗ್ಯಲಕ್ಷ್ಮಿ’ ಯೋಜನೆಗೇ ದುಡ್ಡು ಕಡಿಮೆ ನೀಡಲಾಗಿದೆ ಎಂದ ಮೇಲೆ ಇತರ ಯೋಜನೆಗಳ ಸ್ಥಿತಿ ಏನಾಗಿರಬಹುದು ಎಂದು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಹಲವು ಯೋಜನೆಗಳಿಗೆ ಅನುದಾನ ಕಡಿತವಾಗಿದ್ದು ಸತ್ಯ.ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್‌ ಪ್ರಸ್ತಾಪ ಮಾಡಿದ್ದರೂ, ಅದು ಅಂತರರಾಷ್ಟ್ರೀಯ ಕಾರಣಕ್ಕೆ, ಇದರಲ್ಲಿ ಈ ಇಲಾಖೆಗಳಿಗೆ ನೀಡುವ ವೇತನ ಸಹಿತ ಇತರ ಎಲ್ಲ ವೆಚ್ಚವೂ ಸೇರುತ್ತದೆ ಎಂಬುದನ್ನು ಮರೆಯಲಾಗದು.

ಎಲ್ಲೆಲ್ಲೂ ಖೋತಾ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 2020-21ನೇ ಸಾಲಿನ ಬಜೆಟ್‌ನಲ್ಲಿ ಅಭಿಯಾಚನೆ (11) ರಲ್ಲಿ ₹4,364.89 ಕೋಟಿ ಒದಗಿಸಲಾಗಿದೆ. ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಶೇ 12ರಷ್ಟು ಇಳಿಕೆಯಾಗಿದೆ.

ADVERTISEMENT

ಮಕ್ಕಳ ಕಲ್ಯಾಣಕ್ಕಾಗಿ ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ₹581 ಕೋಟಿಗಳಾಗಿದ್ದು, ಈ ಬಾರಿ ₹370 ಕೋಟಿಗೆ ಇಳಿದಿದೆ. ಮಹಿಳೆಯರ ಕಲ್ಯಾಣ ಕಾರ್ಯಕ್ರಮಗಳು ಕಳೆದ ವರ್ಷದ ಪರಿಷ್ಕೃತ ಅಂದಾಜಿನ ₹425 ಕೋಟಿಗಳಾಗಿದ್ದು, ಈ ಬಾರಿ ₹179 ಕೋಟಿಗೆ ಇಳಿದಿದೆ.

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಗೆ ಕೇವಲ ₹100 ಕೋಟಿ ಒದಗಿಸಲಾಗಿದೆ. ಕಳೆದ ವರ್ಷದ ಪರಿಷ್ಕೃತ ಅಂದಾಜಿನ ₹309 ಕೋಟಿಗಳಾಗಿದ್ದು, ಅದರ ಹಿಂದಿನ ವರ್ಷ ₹294 ಕೋಟಿ ವೆಚ್ಚವಾಗಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಗೆ ಯಾವುದೇ ಹಣ ಮೀಸಲು ಇರಿಸಿಲ್ಲ. ಉದ್ಯೋಗಿನಿ ಯೋಜನೆಯಡಿ ₹20 ಕೋಟಿ ಮೀಸಲಿರಿಸಲಾಗಿದೆ. ಇದನ್ನು ಇನ್ನೂ ಹೆಚ್ಚು ಮಾಡಬೇಕಿತ್ತು.

‘ಮಾತೃಶ್ರೀ’ ಯೋಜನೆಗೆ ಯಾವುದೇ ಹಣ ಒದಗಿಸಿಲ್ಲ. ‘ಮಾತೃ ವಂದನಾ’ ಯೋಜನೆಗೆ ಕೇವಲ ₹57 ಕೋಟಿ ನೀಡಲಾಗಿದೆ. ಇದನ್ನು ಕನಿಷ್ಠ₹300 ಕೋಟಿಗೆ ಹೆಚ್ಚಿಸುವ ಅಗತ್ಯವಿತ್ತು. ಇದು ಪ್ರಸವ ಪೂರ್ವ ಹಾಗೂಪ್ರಸವ ನಂತರದ ಆರೈಕೆಗೆ ಬಡವರಿಗೆ ಬಹಳ ಅನುಕೂಲವಾದ ಯೋಜನೆ. ‘ಮಾತೃಶ್ರೀ’ ಯೋಜನೆಗೆ ಕಳೆದ ವರ್ಷದ ಪರಿಷ್ಕೃತ ಅಂದಾಜು ₹223 ಕೋಟಿಯಷ್ಟಾಗಿತ್ತು.

ಸಬಲ - ಪ್ರಾಯಪೂರ್ವ ಬಾಲಕಿಯರ ಸಬಲೀಕರಣಕ್ಕೆ ₹7.12 ಕೋಟಿ ನೀಡಿದ್ದು ಬಹಳ ಅನುಕೂಲವಾಗಲಿದೆ. ಇದು ಮಹಿಳೆಯರ ಹಾಗೂ ಮಕ್ಕಳ ಪೋಷಣೆ ಜಾಗೃತಿಗೆ ಹಾಗೂ ಸಬಲೀಕರಣಕ್ಕೆ ಅತ್ಯಂತ ಉಪಯುಕ್ತ.

ಉದ್ಯೋಗಸ್ಥ ಮಾತೆಯರ ಮಕ್ಕಳಿಗಾಗಿ ಶಿಶು ವಿಹಾರಕ್ಕಾಗಿ ₹8.3 ಕೋಟಿಯಿಂದ ₹5 ಕೋಟಿಗೆ ಇಳಿಸಲಾಗಿದೆ. ಇದನ್ನು ಹೆಚ್ಚಿಸಬೇಕಿತ್ತು. ಅಂಗನವಾಡಿ ನೌಕರರ ತರಬೇತಿಗಾಗಿ ವೆಚ್ಚ ತಗ್ಗಿಸಲಾಗಿದೆ. ಸಮಗ್ರ ಶಿಶು ಅಭಿವೃದ್ಧಿಯೋಜನೆಗಾಗಿ ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ₹30 ಕೋಟಿ ಕಡಿಮೆ ಮಾಡಲಾಗಿದೆ.

ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆಗಾಗಿ ಸುಮಾರು ₹70 ಕೋಟಿ ಕಡಿಮೆ ಮಾಡಲಾಗಿದೆ. ಪೋಷಣ ಆಭಿಯಾನಕ್ಕೆ ನಿಗದಿಪಡಿಸಿದ ಅನುದಾನವನ್ನು ₹129 ಕೋಟಿಯಿಂದ ₹125 ಕೋಟಿಗೆ ಕಡಿಮೆ ಮಾಡಲಾಗಿದೆ. ಮಹಿಳಾ ಅಭಿವೃದ್ದಿ ನಿಗಮದಿಂದ ಉದ್ಯೋಗಿನಿ ಯೋಜನೆಯಲ್ಲಿ ಮೀಸಲಿಟ್ಟಿರುವ ದುಡ್ಡು ₹20 ಕೋಟಿ. ಇದು ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ₹5 ಕೋಟಿ ಕಡಿಮೆ. ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯರಿಗೆ ರಕ್ಷಣೆ ನೀಡುವ ಯೋಜನೆ ₹9.4 ಕೋಟಿಯಿಂದ ₹7.04 ಕೋಟಿಗೆ ಕಡಿಮೆ ಮಾಡಲಾಗಿದೆ. ಅಂಗನವಾಡಿ ಕಟ್ಟಡಕ್ಕಾಗಿ ಸುಮಾರು ₹68 ಕೋಟಿ ಮೀಸಲಾಗಿರಿಸಿದೆ. ಇದನ್ನು ಇನ್ನೂ ಹೆಚ್ಚು ಮಾಡಬೇಕಿತ್ತು.

ಒಟ್ಟಾರೆಯಾಗಿ ಆದಾಯದ ಕೊರತೆ ಎಲ್ಲಾ ಯೋಜನೆಗಳ ಮೇಲೆ ಪರಿಣಾಮ ಬೀರಿದೆ. ಮಕ್ಕಳ ಯೋಜನೆಗಳ ಮೇಲೆ ಬಿದ್ದ ಪರಿಣಾಮ ಬಹಳ ಅಪಾಯಕಾರಿ ಎಂದು ಕಾಣಿಸುತ್ತದೆ.

ಲೇಖಕರು: ಹಿರಿಯ ಸಂಶೋಧನಾ ಸಲಹೆಗಾರರು, ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.