ADVERTISEMENT

ಕರ್ನಾಟಕ ಬಜೆಟ್‌ 2023 | ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 8:36 IST
Last Updated 18 ಫೆಬ್ರುವರಿ 2023, 8:36 IST
   

ಬೆಂಗಳೂರು: ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗೆ ‘ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ’ ಸ್ಥಾಪಿಸಲಾಗುವುದು ಎಂದು
ಬಜೆಟ್‌ನಲ್ಲಿ ಘೋಷಿಸಲಾಗಿದೆ. ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಉದ್ದೇಶದಿಂದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯಿಂದ ₹ 5 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನ ಮಾಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಹಿಂದಿನ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿಯಲ್ಲಿ 3,155 ಕಾಮಗಾರಿ ನಡೆಸಲಾಗಿತ್ತು.

ಹಳೇ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್‌ಯಾರ್ಡ್‌ ಕಾರ್ಯಾಚರಣೆ ಆರಂಭಿಸಲಾಗುವುದು. ಇದರಿಂದ ಕರಾವಳಿ ಪ್ರದೇಶದಲ್ಲಿ ಕೈಗಾರಿಕೆ, ಮೀನುಗಾರಿಕೆ ಕ್ಷೇತ್ರದಲ್ಲಿ ಬೆಳವಣಿಗೆ ಆಗಲಿದೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಹಾಗೂ ಸಾಗರಮಾಲಾ ಯೋಜನೆ ಅಡಿ, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿಅತ್ಯಾಧುನಿಕ ಮೀನುಗಾರಿಕೆ ಬಂದರು ನಿರ್ಮಿಸಲು ₹ 275 ಕೋಟಿ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಉತ್ತೇಜಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ‘ಮರೀನಾ’ ತಾಣ ಅಭಿವೃದ್ಧಿ ಪಡಿಸಲಾಗುವುದು.

ADVERTISEMENT

ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಜಲಸಾರಿಗೆ ಸಂಪರ್ಕ ಕಲ್ಪಿಸಲು ಬಾರ್ಜ್‌ ಸೇವೆ ಆರಂಭಿಸಲಾಗುವುದು. ಬಾಗಲಕೋಟೆ–ಕಂಕಣವಾಡಿ – ಕದಮ್‌ಪುರ, ಕಲಬುರಗಿ– ಸನ್ನತಿ, ಶಿವಮೊಗ್ಗ– ಕೊಗರು–ಶಿಗ್ಲು, ಮಂಗಳೂರು –ಹಂಗಾರಕಟ್ಟೆಯಲ್ಲಿ ನೂತನ ಲಘು ಕಾರ್ಗೊ ಬೋಟ್‌ ಸೇವೆ ಆರಂಭಿಸಲು ಯೋಜಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ಜನರ ಸುಗಮ ಸಂಚಾರ ಹಾಗೂ ವಾಣಿಜ್ಯ ವ್ಯವಹಾರ ಉತ್ತಮಗೊಳಿಸಲು ಮಂಗಳೂರು– ಕಾರವಾರ–ಗೋವಾ–ಮುಂಬೈ ಜಲಮಾರ್ಗವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಕಟಿಸಲಾಗಿದೆ.

ಆಕಾಂಕ್ಷಿ ತಾಲ್ಲೂಕಿಗೆ ಅನುದಾನ
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಆರೋಗ್ಯ ಸುಧಾರಣೆಗೆ ₹ 720 ಕೋಟಿ ವೆಚ್ಚ ಮಾಡಲಾಗುವುದು. ಇದೇ ವರ್ಷ ₹ 345 ಕೋಟಿ ವೆಚ್ಚದಲ್ಲಿ, 25 ತಾಲ್ಲೂಕುಗಳಲ್ಲಿ 25 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗದಲ್ಲಿ ತಲಾ ಒಂದರಂತೆ ನಾರಾಯಣ ಗುರು ವಸತಿಶಾಲೆ ನಿರ್ಮಿಸಲಾಗುವುದು. ಪ್ರತಿ ಶಾಲೆಗೆ ₹ 18 ಕೋಟಿ ವೆಚ್ಚವಾಗಲಿದೆ. ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ₹ 50 ಕೋಟಿ ವೆಚ್ಚದಲ್ಲಿ 250 ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ (14ರಿಂದ 18 ವರ್ಷದ ಬಾಲಕಿಯರಿಗೆ) ‘ಪೂರಕ ಪೌಷ್ಟಿಕ ಆಹಾರ’ ನೀಡುವ ಯೋಜನೆ ವಿಸ್ತರಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ಅಭಿವೃದ್ಧಿ ಆಕಾಂಕ್ಷಿ 93 ತಾಲ್ಲೂಕಿನಲ್ಲಿ 1,230 ಕೊಠಡಿಗಳ ನಿರ್ಮಾಣ, ಹಳೆಯ ಮತ್ತು ಅಧಿಕ ಮಳೆಯಿಂದ ಹಾನಿಯಾಗಿರುವ 2,777 ಕೊಠಡಿಗಳ ದುರಸ್ತಿ ಮಾಡಲಾಗುವುದು. ಅಧಿಕ ದಾಖಲಾತಿಯ ಶಾಲಾ, ಕಾಲೇಜುಗಳಲ್ಲಿ ಹೆಚ್ಚುವರಿ ಶೌಚಾಲಯ ನಿರ್ಮಿಸಲಾಗುವುದು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ 260 ತರಗತಿ ಕೊಠಡಿಗಳ ನಿರ್ಮಿಸಲಾಗುತ್ತಿದ್ದು ಇದಕ್ಕೆ ₹ 632 ಕೋಟಿ ವೆಚ್ಚವಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.

ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಹೆಚ್ಚಿಸಿ, ಫಲಿತಾಂಶ ಉತ್ತಮ ಪಡಿಸಲು ₹ 135 ಕೋಟಿ ಅನುದಾನ ಮೀಸಲಿಡಲಾಗಿದೆ. 73 ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ ₹ 15 ಕೋಟಿ ವೆಚ್ಚದಲ್ಲಿ ‘ಸೃಷ್ಟಿ’ ಟಿಂಕರಿಂಗ್‌ ಪ್ರಯೋಗಾಲಯ ಸ್ಥಾಪಿಸಲಾಗುವುದು.

ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಂದಿಲ್ಲದ 23 ತಾಲ್ಲೂಕುಗಳಲ್ಲಿ ಹೊಸದಾಗಿ ಶಾಲೆ ನಿರ್ಮಿಸಲು ಮತ್ತು ಕಾರ್ಯ ನಿರ್ವಹಿಸುತ್ತಿರುವ 46 ಶಾಲೆಗಳ ಅಭಿವೃದ್ಧಿಗೆ ₹ 100 ಕೋಟಿ ಅನುದಾನ ನೀಡಲಾಗುವುದು.

24,347 ಶಾಲೆಗಳಲ್ಲಿ ₹ 20 ಕೋಟಿ ಅನುದಾನದಲ್ಲಿ ಪುಸ್ತಕ, ಪತ್ರಿಕೆ, ನಿಯತಕಾಲಿಕೆ ಒದಗಿಸುವ ಮೂಲಕ ಗ್ರಂಥಾಲಯಗಳ ಬಲವರ್ಧನೆ ಹಾಗೂ ರೀಡಿಂಗ್ ಕಾರ್ನರ್‌ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಜೆ-ಪಾಲ್ ಲ್ಯಾಬ್ ಸಹಯೋಗದಲ್ಲಿ ಪರಿಹಾರಾತ್ಮಕ ಚಟುವಟಿಕೆ ‘ಅಭ್ಯುದಯ’ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಉನ್ನತ ಶಿಕ್ಷಣವನ್ನು ಬಲಪಡಿಸಲು ಒಟ್ಟು ₹ 125 ಕೋಟಿ ಅನುದಾನ ನೀಡಲಾಗುವುದು. ಈ ಅನುದಾನದಲ್ಲಿ ಕೊಠಡಿಗಳು, ಶೌಚಾಲಯಗಳು ಮತ್ತು ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗುವುದು. ‘ವಿದ್ಯಾವರ್ಧಿನಿ’ ಯೋಜನೆ ಅಡಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಪಾಲಿಟೆಕ್ನಿಗಳಿಗೆ ಸೌಲಭ್ಯ ಹಾಗೂ ಶೈಕ್ಷಣಿಕ ಉಪಕರಣ ಒದಗಿಸಲಾಗುವುದು. ಎಲ್ಲಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿ ನೀಡಲಾಗುವುದು ಎಂದು ಪ್ರಸ್ತಾಪಿಸಿದ್ದಾರೆ. ಅಭಿವೃದ್ಧಿ ಆಕಾಂಕ್ಷಿ 25 ತಾಲ್ಲೂಕುಗಳಲ್ಲಿ 28 ಹೊಸ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕೆ ₹ 345 ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.