ADVERTISEMENT

Karnataka Budget 2023 | ಜನಕೇಂದ್ರಿತ ಬಜೆಟ್‌ಗೆ ಸಿದ್ದರಾಮಯ್ಯ ಒತ್ತು ನೀಡುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಸೋಮವಾರ ವಿಧಾನಸೌಧದಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿದರು  ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸೌಧದಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಜೆಟ್ ಮಂಡಿಸುವಲ್ಲಿ ತಮ್ಮದೇ ದಾಖಲೆಯನ್ನು ಶುಕ್ರವಾರ ಮುರಿಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯ ಬಜೆಟ್‌ನಲ್ಲಿ ಜನ ಕೇಂದ್ರಿತ ಆರ್ಥಿಕತೆಯ ಅನುಷ್ಠಾನಕ್ಕೆ ಆದ್ಯತೆ ನೀಡುವ ಸಂಭವ ಇದೆ.

ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಬಸವರಾಜ ಬೊಮ್ಮಾಯಿ, ಜುಲೈ ಅಂತ್ಯದವರೆಗೆ ಬೇಕಾದ ವೆಚ್ಚಕ್ಕೆ ಸೀಮಿತವಾಗಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆದಿದ್ದರು. ಮುಂದಿನ ಎಂಟು ತಿಂಗಳ ಆದಾಯ ಮತ್ತು ಖರ್ಚನ್ನು ಆಧರಿಸಿ ಸಿದ್ದರಾಮಯ್ಯ, ಹೊಸ ಬಜೆಟ್‌ ಮಂಡಿಸಲಿದ್ದಾರೆ. ಬಜೆಟ್ ಗಾತ್ರ ₹3.30 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಜಗತ್ತಿನ ಅನೇಕ ದೇಶಗಳು ಜನಕೇಂದ್ರಿತ ಆರ್ಥಿಕತೆ ಪ್ರತಿಪಾದಿಸುತ್ತಿದ್ದು, ಈ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆ ಪ್ರಬಲಗೊಳ್ಳುತ್ತಿದೆ. ಉಳ್ಳವರು ಮತ್ತು ಇಲ್ಲದವರ ಮಧ್ಯದ ಅಂತರವನ್ನು ತುಸು ಕಡಿಮೆ ಮಾಡುವ ಆಶಯವನ್ನು ಇದು ಹೊಂದಿದೆ. ಸಂಪತ್ತು ಕೆಲವರ ಕೈಯಲ್ಲೇ ಕೇಂದ್ರೀಕೃತಗೊಳ್ಳುವುದನ್ನು ತೊಡೆದು ಹಾಕುವ ಆರ್ಥಿಕ ನೀತಿ ಇದಾಗಿದೆ. ಹೊಸ ಅಭಿವೃದ್ಧಿ ಮಾದರಿ ಪರಿಚಯಿಸುವ ಈ ನೀತಿಯನ್ನು ರಾಜ್ಯದಲ್ಲೂ ಅನುಷ್ಠಾನ ಮಾಡಲು ಅಗತ್ಯವಾದ ನೀತಿಗಳನ್ನು ಬಜೆಟ್‌ನಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ADVERTISEMENT

ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳಿಗೆ ಮುಂದಿನ ಎಂಟು ತಿಂಗಳಿನಲ್ಲಿ ಸುಮಾರು ₹40 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ ಸಂಪನ್ಮೂಲ ಹೊಂದಿಸಲು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ದಾರಿಯನ್ನು ಹುಡುಕಲಾಗಿದೆ. ಯಾರನ್ನೋ ಒಲೈಸಲು ಬೊಕ್ಕಸದ ಹಣವನ್ನು ಬೇಕಾಬಿಟ್ಟಿ ಹಂಚಿಕೆ ಮಾಡುತ್ತಿದ್ದ ನೀತಿಯನ್ನು ಕೈಬಿಟ್ಟು, ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಾದ ರಾಜ್ಯ ನಿರ್ದೇಶಕ ತತ್ವಗಳು ಜನರ ಹಕ್ಕುಗಳಾಗಬೇಕು ಎಂಬ ಸಂಕಲ್ಪ ಬಜೆಟ್‌ನ ಹೂರಣವಾಗಿರಲಿದೆ ಎಂದು ತಿಳಿಸಿವೆ.

ಆದಾಯ ಹೆಚ್ಚಿಸಿಕೊಳ್ಳಲು ಸೋರಿಕೆ ತಡೆಗೆ ಕಠಿಣ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುತ್ತದೆ. ಜತೆಗೆ, ಮೋಟಾರು ವಾಹನ ಶುಲ್ಕ, ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸುವ ಸಂಭವ ಇದೆ. ಮದ್ಯದ ಮೇಲಿನ ಸುಂಕ ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿದ್ದು, ಅದನ್ನು ಮುಟ್ಟುವ ಗೋಜಿಗೆ ಹೋಗುವ ಸಂಭವ ಕಡಿಮೆ ಎಂದೂ ಮೂಲಗಳು ಹೇಳಿವೆ.

ಹೆಚ್ಚು ಘೋಷಣೆಗಳಿಲ್ಲದೇ ಇದ್ದರೂ, 2013–18ರ ಅವಧಿಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿದ್ದ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತೆ ಅನುಷ್ಠಾನ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದು ಗೊತ್ತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.