ಬಜೆಟ್ ಮಂಡನೆಗೆ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ವ್ಹೀಲ್ ಚೇರ್ ನಲ್ಲಿ ಕರೆತಂದರು. ಬಜೆಟ್ ಪ್ರತಿ ಹಿಡಿದುಕೊಂಡಿದ್ದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಸಚಿವರಾದ ಎಚ್.ಸಿ. ಮಹದೇವಪ್ಪ, ಶರಣಪ್ರಕಾಶ ಪಾಟೀಲ, ದಿನೇಶ್ ಗುಂಡೂರಾವ್ ಅವರು ಜತೆಗಿದ್ದರು
‘ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ’ ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಬಜೆಟ್ ಪ್ರತಿಯೊಂದಿಗೆ ಸಿಎಂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದರು
ಮಂಡಿ ನೋವಿನ ಕಾರಣ ಸಿದ್ದರಾಮಯ್ಯ ಅವರು ವ್ಹೀಲ್‌ಚೇರ್‌ನಲ್ಲಿ ವಿಧಾನಸೌಧಕ್ಕೆ ಬಂದರು. ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಬಜೆಟ್‌ಗೆ ಅನುಮೋದನೆ ಪಡೆದರು. ಈ ನಡುವೆ ವಿಧಾನಸೌಧದ ಹೊರಭಾಗದಲ್ಲಿ ಗಾಂಧಿ ಪ್ರತಿಮೆ ಎದುರು ಬಿಜೆಪಿ, ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
16 ನೇ ಬಾರಿ ರಾಜ್ಯ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ ಅವರಿಗೆ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಕಾರ್ಯದರ ಪಿ.ಸಿ. ಜಾಫರ್ ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಹಸ್ತಾಂತರಿಸಿದರು. ಈ ವೇಳೆ ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ .ಕೆ. ಅತೀಕ್ , ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಉಪಸ್ಥಿತರಿದ್ದರು.
ಬೋಗಸ್ ಬಜೆಟ್ ಮಂಡಿಸುವ ಮುನ್ನವೇ ತುಷ್ಟೀಕರಣವನ್ನು ಆರಂಭಿಸಿದ ಭಂಡ ಹಾಗೂ ಭ್ರಷ್ಟರು ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿದೆ.
2025-26ನೇ ಸಾಲಿನ ಬಜೆಟ್ ಪ್ರತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಕರಾವಳಿ, ಮಲೆನಾಡು ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ, ಕಡಲ್ಕೊರೆತ ತಪ್ಪಿಸಲು ಕ್ರಮ, ಭೂಕುಸಿತ ತಪ್ಪಿಸಲು ₹200 ಕೋಟಿ ಅನುದಾನ
ಗದಗ ಜಿಲ್ಲೆ ಡಂಬಳದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ, ತೋಟಗಾರಿಕೆ ಅಭಿವೃದ್ಧಿಗೆ ಯೋಜನೆ–2 ಜಾರಿ.
ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರವಾಗಿ ಅನುಗ್ರಹ ಯೋಜನೆ ಜಾರಿ. ಹಸು, ಕರುಗಳ ಸಾವಿನ ಪರಿಹಾರ ಧನ ₹10 ಸಾವಿರ– 15 ಸಾವಿರ ಗೆ ಹೆಚ್ಚಳ, ಕುರಿ,ಮೇಕೆ ಮೃತಪಟ್ಟರೆ ಪರಿಹಾರ ಧನ ₹5 ಸಾವಿರದಿಂದ ₹7.5 ಸಾವಿರಕ್ಕೆ ಹೆಚ್ಚಳ. ಬೆಂಗಳೂರಿನಲ್ಲಿ ಕುರಿ, ಮೇಕೆ, ಮಾರುಕಟ್ಟೆ ಸ್ಥಾಪನೆ.
ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ₹2ಕೋಟಿ ಮೀಸಲು
ಕೃಷಿಗಾಗಿ 1.81 ಲಕ್ಷ ರೈತರಿಗೆ ನೀರಾವರಿಗಾಗಿ ₹440 ಕೋಟಿ ಸಹಾಯಧನ. 5 ಸಾವಿರ ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಮತ್ತು 12 ಸಾವಿರ ಕೃಷಿ ಹೊಂಡ ನಿರ್ಮಾಣ. ಬೆಳೆಗಳ ಕುರಿತು ನಿಖರ ತೀರ್ಮಾನಕ್ಕೆ ಡಿಜಿಟಲ್ ಕೃಷಿ ಕೇಂದ್ರ ಸ್ಥಾಪನೆ. 10 ತಾಲ್ಲೂಕಿನಲ್ಲಿ ಕೃಷಿ ಪದ್ದತಿ ಮಾದರಿ ಪ್ರಾತ್ಯಕ್ಷಿಕೆ
ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು.
ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಭದ್ರಾ ಮೇಲ್ದಂಡೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಬೆಂಗಳೂರಿಗೆ ಭರ್ಜರಿ ಗಿಫ್ಟ್ ಕೊಟ್ಟ ಸಿಎಂ, ಟನಲ್ ಯೋಜನೆಗೆ ₹40ಸಾವಿರ ಕೋಟಿ ಘೋಷಿಸಿದ್ದಾರೆ.
ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಅಭಿವೃದ್ಧಿಗೆ ಬದ್ಧವಾಗಿದ್ದು, 2030ರ ವೇಳೆಗೆ 20 ಲಕ್ಷ ಉದ್ಯೋಗ ಸೃಜಿಸುವ ಗುರಿ ಹೊಂದಿದೆ.
ಸರ್ಕಾರದ ವಿವಿಧ ಫಲಾನುಭವಿಗಳಿಗೆ ಮಧ್ಯವರ್ತಿಗಳಿಲ್ಲದೆ ₹1 ಲಕ್ಷ ಕೋಟಿ ಹಣವನ್ನು ವರ್ಗಾಯಿಸಲಾಗಿದೆ. ಕಲ್ಯಾಣ ಇಲಾಖೆಗಳ ಮೂಲಕ ಅಸಾಹಯಕರನ್ನು ಬಲಗೊಳಿಸಲು ಈ ಆಯವ್ಯಯವೂ ನೆರವಾಗಲಿದೆ– ಸಿಎಂ
ಈ ಬಾರಿಯ ಬಜೆಟ್ ಗಾತ್ರ ₹4,09,549 ಆಗಿದೆ. ಈ ಮೂಲಕ 2025–26ನೇ ಸಾಲಿನ ಬಜೆಟ್ ಗಾತ್ರ ₹4 ಲಕ್ಷ ಕೋಟಿ ದಾಟಿದೆ.
ಬಜೆಟ್ ಆರಂಭಿಸುವ ಮುನ್ನ ಗೋಪಾಲಕೃಷ್ಣ ಅಡಿಗರ ನುಡಿ ಹೇಳಿದ ಸಿದ್ದರಾಮಯ್ಯ, ಕುಳಿತುಕೊಂಡು ಬಜೆಟ್ ಮಂಡನೆ ಆರಂಭಿಸಿದ್ದಾರೆ.
ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ 49,790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,611 ಕೋಟಿ ರೂ. ಅಂದಾಜು ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಿ ಒಂದು ಲಕ್ಷದ ಎಪ್ಪತ್ತೇಳು ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲಾಗುವುದು.
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೇ ಯೋಜನೆಯನ್ನು ಅನುಷ್ಠಾನ
ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಮಾಸಿಕ ಆದಾಯ ತಲಾ ₹2 ಸಾವಿರ ಹೆಚ್ಚಳ, ಶಾಲೆಗಳಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಮಾಸಿಕ ಗೌರವದಿಂದ ತಲಾ ₹1 ಸಾವಿರ ಹೆಚ್ಚಳ.
ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ 16,347 ಶಾಲೆಗಳ ಅಡುಗೆಮನೆ ಆಧುನೀಕರಣ ಕಾರ್ಯ ಮತ್ತು ಹೊಸ ಪಾತ್ರೆ ಪರಿಕರಗಳನ್ನು ಒದಗಿಸಲು ₹46 ಕೋಟಿ . ವೆಚ್ಚ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ ₹200 ಕೋಟಿ ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಣ.
ರಾಜ್ಯದಲ್ಲಿ ₹2500 ಕೋಟಿ ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ. ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು ₹1,500 ಕೋಟಿ ಮೀಸಲು.
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು. ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್ ಮತ್ಸ್ಯದರ್ಶಿನಿ ಆರಂಭ
ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ: ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸುವುದರ ಮೂಲಕ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿ ರಾಜ್ಯವನ್ನಾಗಿಸಲು ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು ₹88 ಕೋಟಿ ಮೀಸಲು
ಗ್ರಾಮ ಪಂಚಾಯತಿಗಳ ವಿದ್ಯುತ್ ಬಿಲ್‌ನ ಹೊರೆ ತಗ್ಗಿಸಲು ಸಾರ್ವಜನಿಕ–ಖಾಸಗಿ ಸಹಬಾಗಿತ್ವದಲ್ಲಿ ಸೋಲಾರ್– ಮೈಕ್ರೋ ಗ್ರಿಡ್ ಸ್ಥಾಪನೆ. ಆಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರ ವಿತರಿಸಲು ಇ–ಸ್ವತ್ತು ಅಭಿಯಾನ
ಮಹಿಳೆಯರಿಗಾಗಿ ಸಂವಿಧಾನ ಸಾಕ್ಷರತೆ, ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ ಹಾಗೂ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ‘ಅಧಿಕಾರ–ಸಾಕಾರ’ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜನೆ
ಉಳಿತಾಯ ಮತ್ತು ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಮಹಿಳೆಯರಿಗೆ ರಾಜ್ಯಮಟ್ಟದಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ ಆರಂಭ. ಮಹಿಳೆಯರಿಗಾಗಿ ಸ್ತ್ರೀ ಸಂಘ ನಿರ್ಮಾಣ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅಕ್ಕ ಕೆಫೆ, ಮತ್ತು ಕ್ಯಾಂಟೀನ್ ಸ್ಥಾಪನೆ
ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇತರೆ ವಿದೇಶಿ ಭಾಷಾ ಕಲಿಕೆಗೆ ಕೌಶಲ್ಯ ತರಬೇತಿ ಹಾಗೂ ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಸಲು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ.
ಮೋಂದಾಯಿತ ಕಟ್ಟಡ ಕಾರ್ಮಿಕರು ಸಹಜ ಮರಣ ಹೊಂದಿದಲ್ಲಿ ನೀಡುವ ಎಕ್ಸ್ ಗ್ರೇಷಿಯಾ ಹಣವನ್ನು ₹75 ಸಾವಿರದಿಂದ ₹1.5ಲಕ್ಷಕ್ಕೆ ಹೆಚ್ಚಳ ಮತ್ತು ಕೆಲಸ ಸ್ಥಳದಲ್ಲಿ ಮರಣ ಹೊಂದಿದರೆ ಅವಲಂಬಿತರಿಗೆ ಪರಿಹಾರವಾಗಿ ₹5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಳ
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಎಲ್ಲ ಜಿಲ್ಲೆಗಳಲ್ಲಿ 6 ರಿಂದ 12ನೇ ತರಗತಿವರೆಗೆ ವಸತಿ ಶಾಲೆಗಳ ನಿರ್ಮಾಣ ಇದಕ್ಕೆ ₹750 ಕೋಟಿ ವೆಚ್ಚ
ಜೈನ ಅರ್ಚಕರು, ಸೇರಿ ಮಸೀದಿಗಳ ಪೇಷ್ ಇಮಾಮಗಳಿಗೆ ಮಾಸಿಕ ಗೌರವ ಧನ ₹6 ಸಾವಿರಕ್ಕೆ ಹೆಚ್ಚಳ, ಸಿಖಜ್ ಸಹಾಯಕ ಗ್ರಂಥಿ, ಮೋಝೀನ್‌ಗಳಿಗೆ ₹5 ಸಾವಿರ ಹೆಚ್ಚಳ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬೆಂಗಳೂರು ಹಜ್ ಭವನದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತೆರೆದು ವಿವಿಧ ಪದವಿ/ ಸ್ನಾತಕೋತ್ತರ ಪದವಿ ಶಿಕ್ಷಣ. ವಕ್ಫ ಸಂಸ್ಥೆಗಳ ಖಾಲಿ ನಿವೇಶನದಲ್ಲಿ 15 ಮಹಿಳಾ ಕಾಲೇಜು ನಿರ್ಮಾಣಕ್ಕೆ ಕ್ರಮ
2023–24ರಲ್ಲಿ ಸಾಲಿನಲ್ಲಿ ಪದವಿ ಪೂರ್ವ ತರಗತಿಗಳಲ್ಲಿ ಪ್ರಾರಂಭಿಸಲಾಗಿರುವ 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗ ಆರಂಭ. ಯುವಕ ಯುವತಿಯರಿಗೆ ನವೋದ್ಯಮ ಆರಂಭಕ್ಕೆ ಉತ್ತೇಜನ
ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಭೂ ಒಡೆತನ ಯೋಜನೆ ಅನುಷ್ಠಾನ. ಕೈಗಾರಿಕಾ ಪ್ರದೇಶ ಹಂಚಿಕೆಯಲ್ಲಿ ಪ್ರವರ್ಗ–1, ಪ್ರವರ್ಗ–2 ಮತ್ತು 2ಬಿ ಸಮುದಾಯಗಳಿಗೆ ಶೇ 20ರಷ್ಟು ಭೂಮಿ ಮೀಸಲು
ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುವವ 13 ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ
78 ಬುಡಕಟ್ಟು ವಸತಿ ಶಾಲೆಗಳಲ್ಲಿ 7 ನೇ ತರಗತಿ ಆರಂಭ. ಚಾಮರಾಜನಗರ, ಮೈಸೂರು ಮತ್ತು ಕೊಡಗಿನಲ್ಲಿ ಐದು ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೆ ಏರಿಕೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ₹1,000 ಹಾಗೂ ಸಹಾಯಕಿಯರ ಗೌರವ ಧನ ₹750 ಹೆಚ್ಚಳ.
ವಿಶೇಷ ಪಾಲನಾ ಯೋಜನೆಯಡಿ ಹೆಚ್.ಐ.ವಿ. ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಧನಸಹಾಯವನ್ನು ₹1,000 ರೂ.ನಿಂದ ₹2,000 ರೂ.ಗೆ ಹೆಚ್ಚಳ.
ಬೆಂಗಳೂರು ಅಭಿವೃದ್ಧಿಗೆ ಪ್ರತಿ ವರ್ಷ ನೀಡುತ್ತಿದ್ದ ₹3ಸಾವಿರ ಕೋಟಿ ಅನುದಾನವನ್ನು ₹7 ಸಾವಿರ ಕೋಟಿಗೆ ಹೆಚ್ಚಳ
ವಾಹನ ದಟ್ಟಣೆ ಸಮಸ್ಯೆ ನಿವಾರಣೆಗೆ ನಮ್ಮ ಮೆಟ್ರೊ ಹಂತ –3 40.50 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಪ್ಲೈಓವರ್ ರಸ್ತೆ ನಿರ್ಮಾಣ
ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ‘ಕೃಷಿ ಪಥ’ ಯೋಜನೆ ಜಾರಿ. ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಮಂಡಳಿಗಳಿಗೆ ₹83 ಕೋಟಿ ಅನುದಾನ
ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ ಮತ್ತು ಅನುಭವ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪನೆ
ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೊ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋಧ್ಯಮ ಯೋಜನೆಗಳಿಗೆ ಯೋಜನೆ
ಕಾರವಾರ ನೌಕಾ ನೆಲೆ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಅನುದಾನದ ಮೂಲಕ ಕಾಮಗಾರಿ ಆರಂಭ
ರಾಜ್ಯವು ನಕ್ಸಲ್ ಮುಕ್ತವಾಗಿದೆ. ಹೀಗಾಗಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ₹10ಕೋಟಿ ವಿಶೇಷ ಪ್ಯಾಕೇಜ್
ಕನ್ನಡ ಸಿನಿಮಾಗಳಿಗಾಗಿ ಒಟಿಟಿ ವೇದಕೆ ಸೃಜಿಸಲು ಕ್ರಮ ಹಾಗೂ ಮಲ್ಟಿಫ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರ ₹200 ಸೀಮಿತ
ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್–ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು ₹3 ಕೋಟಿ ವೆಚ್ಚದಲ್ಲಿ ಚಲನಚಿತ್ರ ಭಂಡಾರ ಸ್ಥಾಪನೆ
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಮಾಸಾಶವನ್ನು ₹12 ಸಾವಿರದಿಂದ ₹15 ಸಾವಿರಕ್ಕೆ ಹೆಚ್ಚಳ ಹಾಗೂ ಕುಟುಂಬ ಮಾಸಾಶನವು ₹ 6 ಸಾವಿರದಿಂದ ₹7,500ಕ್ಕೆ ಹೆಚ್ಚಳ
ಮಾಧ್ಯಮ ಮಾನ್ಯತೆ ಹೊಂದಿರುವ 2,500 ಪತ್ರಕರ್ತರು ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ ₹5 ಲಕ್ಷ ನಗದುರಹಿತ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನ ಯೋಜನೆ ಜಾರಿ
ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿ ತೆರವು. ಭೂ ವರಾಹ ಯೋಜನೆಯಡಿ ದೇವಾಲಯಗಳ ಸ್ಥಿರಾಸ್ತಿಗಳ ದಾಖಲೀಕರಣ
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ ದೇವಾಲಯಗಳಲ್ಲಿರುವ ಅರ್ಚಕರಿಗೆ ನೀಡುತ್ತಿರುವ ವಾರ್ಷಿಕ ತಸ್ತೀಕ್ ₹60 ಸಾವಿರದಿಂದ ₹72 ಸಾವಿರಕ್ಕೆ ಹೆಚ್ಚಳ
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದ ಅಭಿವೃದ್ಧಿ
ನಿವೃತ್ತಿ ಹೊಂದಿರುವ ಅಂತರರಾಷ್ಟ್ರೀಯ ಕುಸ್ತಿಪಟುಗಳ ಮಾಸಾಶನ ₹6 ಸಾವಿರಕ್ಕೆ ಹಾಗೂ ರಾಷ್ಟ್ರ ಮಟ್ಟದ ಕುಸ್ತಿಪಟುಗಳ ಮಾಸಾಶನ ₹5 ಸಾವಿರ ಹಾಗೂ ರಾಜ್ಯಮಟ್ಟದ ಕುಸ್ತಿಪಟುಗಳಿಗೆ ₹4,500ಕ್ಕೆ ಹೆಚ್ಚಳ
ಬೆಂಗಳೂರು ಗ್ರಾಮಾಂತರದ ಆದಿನಾರಾಯಣ ಹೊಸಹಳ್ಳಿಯಲ್ಲಿ 20 ಎಕೆರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಹಾಗೂ 12 ತಾಲ್ಲೂಕುಗಳಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ
₹10 ಕೋಟಿ ವೆಚ್ಚದಲ್ಲಿ ಯಾದಗಿರಿಯಲ್ಲಿ ಕ್ರೀಡಾ ವಸತಿ ಶಾಲೆ ಆರಂಭ
ಸವದತ್ತಿ ರೇಣುಕಾ ಯಲ್ಲಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ರೇಣುಕಾರಾಣಿ ರೋರಿಚ್ ಎಸ್ಟೇಟ್ ಅಭಿವೃದ್ಧಿ
ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರ ಸಂಖ್ಯೆ ಒಂದು ಸಾವಿರಕ್ಕೆ ಹೆಚ್ಚಳ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು 24*7 ಪ್ರವಾಸಿ ಸಹಾಯವಾಣಿ ಆರಂಭ
ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ಯಮಟ್ಟದ ವಸ್ತು ಸಂಗ್ರಹಾಲಯ ಸ್ಥಾಪನೆ
₹2 ಕೋಟಿ ವೆಚ್ಚದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ಆಯೋಜನೆ
ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶವನ್ನು ₹2 ಸಾವಿರದಿಂದ ₹2,500ಕ್ಕೆ ಹೆಚ್ಚಳ
ರಾಜ್ಯದಲ್ಲಿ ಸುಮಾರು 2 ಲಕ್ಷ ಉದ್ಯೋಗ ಸೃಜಿಸುವ ಉದ್ದೇಶದಿಂದ ಜವಳಿ– ನೀತಿ 2025–30 ಆರಂಭ ಹಾಗೂ ರಾಜ್ಯದಾದ್ಯಂತ ಜವಳಿ ಪಾರ್ಕ್ ಸ್ಥಾಪನೆ. ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಹಾಗೂ ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಮತ್ತು ಕೇಂದ್ರದ ಸಹಯೋಗದಿಂದ ಕಲಬುರಗಿಯಲ್ಲಿ ಮಿತ್ರ ಜವಳಿ ಪಾರ್ಕ್ ನಿರ್ಮಾಣ
ಇ.ವಿ ವಾಹನಗಳ ತಯಾರಿಕೆ ಹಾಗೂ ಬಳಕೆಯ ಉತ್ತೇಜನಕ್ಕೆ ಬೆಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಇ.ವಿ ಕ್ಲಸ್ಟರ್ ನಿರ್ಮಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.