ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳಿಂದ ರಾಜ್ಯದ ಆರ್ಥಿಕತೆಯೇ ಕುಸಿದು ಹೋಗಿದೆ’ ಎಂಬ ವಿರೋಧ ಪಕ್ಷಗಳ ಪ್ರತಿಪಾದನೆಯನ್ನು ತಮ್ಮ 16ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಸಿಯಾಗಿಸಿದ್ದಾರೆ. ‘ಜನಹಿತ’ದ ಗ್ಯಾರಂಟಿಗಳನ್ನು ಮುಂದುವರಿಸುವ ಜತೆಗೆ, ನಾಡನ್ನು ಪ್ರಗತಿಯತ್ತ ಕೊಂಡೊಯ್ಯವ ಸ್ಪಷ್ಟ ಮುನ್ನೋಟಗಳಿರುವ ಯೋಜನೆಗಳನ್ನು ಪ್ರಕಟಿಸಿದ್ದಾರೆ.
16ನೇ ವಿಧಾನಸಭೆ ಅವಧಿಯ ಮೊದಲೆರಡು ಬಜೆಟ್‌ನಲ್ಲಿ ‘ಗ್ಯಾರಂಟಿ’ಗಳ ಭಾರವನ್ನು ಸರಿದೂಗಿಸಲು ಕಸರತ್ತುಗಳನ್ನು ಮಾಡಿದ್ದ ಸಿದ್ದರಾಮಯ್ಯ, ಈ ಬಾರಿಯ ಆಯವ್ಯಯದಲ್ಲಿ ತಮ್ಮದೇ ಆದ ಆರ್ಥಿಕ ಚಿಂತನೆಯ ಹಳಿಗೆ ಮರಳಿದ್ದಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶ್ರಮಿಕರು, ಈ ಎಲ್ಲ ಸಮುದಾಯದೊಳಗೆ ಬೆರೆತಿರುವ ಮಹಿಳೆಯರ ಹಿತ ಕಾಯುವ ಆಶಯ ಸಿದ್ದರಾಮಯ್ಯನವರು ಈವರೆಗೆ ಮಂಡಿಸಿದ ಬಜೆಟ್‌ನಲ್ಲಿ ಒಂದು ಬದ್ಧ ಸೂತ್ರದಂತೆ ಹರಿಯುತ್ತಲೇ ಬಂದಿದೆ. ‘ಆಯವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ–ಸಂಖ್ಯೆಗಳ ನಿರ್ಜೀವ ಆಟವಲ್ಲ. ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು’ ಎಂದು ಈ ಬಾರಿಯ ಬಜೆಟ್‌ನ ಆರಂಭದಲ್ಲೇ ಉದ್ಗರಿಸಿದ್ದಾರೆ.
‘ಬಲಿಷ್ಠವಾದುದು ಮಾತ್ರ ಬದುಕುತ್ತದೆ ಎಂಬ ಮೃಗೀಯ ತತ್ವ ಮನುಷ್ಯ ಸಮಾಜದಲ್ಲೂ ರೂಪುಗೊಂಡರೆ ಅದನ್ನು ‘ಸೋಷಿಯಲ್ ಡಾರ್ವಿನಿಸಂ’ ಎಂದು ಕರೆಯಲಾಗುತ್ತದೆ. ಈ ತತ್ವಕ್ಕೆ ವಿರುದ್ಧವಾಗಿ ಮಾನವೀಯ ನೆಲೆಯಲ್ಲಿ ಸಮ ಸಮಾಜದ ಆಶಯದ ಮೂಲಕ ದೇಶವನ್ನು ಕಟ್ಟಲು ಅಂಬೇಡ್ಕರ್ ಅವರು ಸಂವಿಧಾನವನ್ನು ಕೊಟ್ಟಿದ್ದಾರೆ. ಇದರ ಹಿಂದೆ ಬುದ್ಧ, ಬಸವಣ್ಣ, ನಾರಾಯಣಗುರುಗಳ ಕನಸುಗಳಿದ್ದು, ಅವುಗಳನ್ನು ಬದ್ಧತೆಯಿಂದ ಮುನ್ನಡೆಸುತ್ತಿದ್ದೇವೆ’ ಎಂದು ಬಜೆಟ್‌ನಲ್ಲಿ ಪ್ರತಿಪಾದಿಸಿದ್ದಾರೆ.
‘ಅಹಿಂದ’ ಆದ್ಯತೆಯಾಗಿರುವಷ್ಟೇ, ಹೊಸ ತಲೆಮಾರಿಗೆ ಚೈತನ್ಯ ತುಂಬಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ದಿಸೆಯಲ್ಲಿ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯೋಗಕ್ಕೆ ಒತ್ತು ನೀಡುವ ಹಲವು ಕಾರ್ಯಕ್ರಮಗಳನ್ನೂ ಘೋಷಿಸಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ), ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕ್ವಾಂಟಂ, ವೈಮಾನಿಕ ತಂತ್ರಜ್ಞಾನ, ಕೃಷಿಯಲ್ಲೂ ತಂತ್ರಜ್ಞಾನದ ಅಳವಡಿಕೆಯ ಹಲವು ಕನಸುಗಳನ್ನು ಬಿತ್ತಿರುವುದು ಆಧುನಿಕ ತಂತ್ರಜ್ಞಾನವನ್ನು ಸರ್ಕಾರ ಆದ್ಯತೆಯಾಗಿರಿಸಿಕೊಂಡಿರುವ ದ್ಯೋತಕದಂತಿದೆ. ಅದಕ್ಕಾಗಿಯೇ, ರಾಜ್ಯದ ಅಭಿವೃದ್ಧಿಗೆ ಆರು ದಾರಿಗಳನ್ನು ಗುರುತಿಸಿದ್ದು, ಹಾದಿ ಸಾಗುವ ಗುರಿಯನ್ನೂ ತೋರಿಸಿದ್ದಾರೆ.
ಬಹು ಆಯಾಮದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನೇ ಕೇಂದ್ರೀಕರಿಸುವ ಬಜೆಟ್ ಮಂಡಿಸಿರುವ ಅವರು, ‘ಪ್ರಗತಿಯ ಪಥ’ದತ್ತ ನಾಡನ್ನು ಕರೆದೊಯ್ಯುವ ಸಂಕಲ್ಪ ಮಾಡಿದಂತಿದ್ದಾರೆ.
ಮೀನುಗಾರಿಕಾ ದೋಣಿಗಳ ಉದ್ದದ ವಿಷಯದಲ್ಲಿ ಇರುವ ನಿರ್ಬಂಧವನ್ನು ಸಡಿಲಿಸುವುದಾಗಿ ಘೋಷಿಸಿರುವುದು ಬಜೆಟ್‌ನ ಆಶಯದ ರೂಪಕದಂತೆ ಭಾಸವಾಗುತ್ತದೆ. ವಿಶಾಲ ಸಮುದ್ರದಲ್ಲಿ ಬದುಕಿನ ಬಂಡಿಯನ್ನು ವಿಸ್ತರಿಸಿಕೊಂಡು ಹೋಗಲು ಅವಕಾಶ ಕಲ್ಪಿಸುವ ದೋಣಿಯಂತೆ, ತಮ್ಮ ಬಜೆಟ್ ಕೂಡ ನಾಡಿನ ಸರ್ವರಿಗೂ ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳುವ ಅವಕಾಶದ ವಿಸ್ತರಣೆಯಂತಿದೆ ಎಂದು ಪ್ರತಿಪಾದಿಸಿದಂತಿದೆ.
ನೂರಾರು ಸಂಖ್ಯೆಯ ವಸತಿ ಶಾಲೆಗಳ ಕಟ್ಟಡ ನಿರ್ಮಾಣ, ವಸತಿಯುತ ಪದವಿಪೂರ್ವ ಕಾಲೇಜುಗಳ ಆರಂಭ, ದೇಶ ಮತ್ತು ವಿದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವವರಿಗೆ ಆರ್ಥಿಕ ನೆರವು, ಕೃತಕ ಬುದ್ಧಿಮತ್ತೆ, ಕೋಡಿಂಗ್‌ನಂತಹ ತಂತ್ರಜ್ಞಾನಗಳ ಕಲಿಕೆಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ವಿದ್ಯಾರ್ಥಿಗಳನ್ನು ತಯಾರು ಮಾಡುವಂತಹ ಯೋಜನೆಗಳು ಇಡೀ ಬಜೆಟ್‌ನ ಗುರಿ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಯೆಡೆಗೆ ನೆಟ್ಟಿದೆ ಎಂಬುದನ್ನು ಸೂಚಿಸುವಂತಿವೆ.
ಐದು ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರ ಹಿಂದಿನ ಎರಡು ವರ್ಷಗಳಿಗಿಂತಲೂ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಗ್ಯಾರಂಟಿಗಳ ಒಟ್ಟು ವೆಚ್ಚವನ್ನು ₹51,034 ಕೋಟಿಗಳಿಗೆ ನಿರ್ಬಂಧಿಸಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ₹975 ಕೋಟಿ ಉಳಿತಾಯವಾಗಲಿದೆ.
ಈ ಬಾರಿಯ ಬಜೆಟ್ ಗಾತ್ರ ₹4.09 ಲಕ್ಷ ಕೋಟಿಯಷ್ಟಿದ್ದು, ₹19,262 ಕೋಟಿ ರಾಜಸ್ವ ಕೊರತೆ ಮತ್ತು ₹90,428 ಕೋಟಿ ವಿತ್ತೀಯ ಕೊರತೆ ಇದೆ. ಇದನ್ನು ಭರಿಸಲು ₹1.16 ಲಕ್ಷ ಕೋಟಿಯಷ್ಟು ಸಾಲ ಪಡೆಯುವ ಪ್ರಸ್ತಾವವನ್ನು ಮಾಡಿದ್ದು, ಇದರೊಂದಿಗೆ ರಾಜ್ಯದ ಒಟ್ಟು ಸಾಲದ ಮೊತ್ತ ₹7.64 ಲಕ್ಷ ಕೋಟಿಗೆ ತಲುಪಲಿದೆ.
ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ ಒಟ್ಟು ₹42,018 ಕೋಟಿ ಒದಗಿಸಲಾಗಿದೆ. ಉಳಿದಂತೆ ಎಲ್ಲ ಸಮುದಾಯಗಳಿಗೂ ಬಜೆಟ್‌ನಲ್ಲಿ ಪಾಲು ದೊರಕಿಸುವ ಪ್ರಯತ್ನ ಮಾಡಲಾಗಿದೆ. ಜಾತಿವಾರು ಮಠ– ಮಂದಿರಗಳಿಗೆ ಈ ಬಾರಿ ಅನುದಾನ ಘೋಷಿಸಿಲ್ಲ.
ಟೀಕೆ ಹಿಮ್ಮೆಟ್ಟಿಸಲು ಯೋಜನೆ
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ’ ಎಂಬ ಟೀಕೆಗಳನ್ನು ಬದಿಗೆ ಸರಿಸಲು ಬಜೆಟ್‌ನಲ್ಲಿ ಬಲವಾದ ಪ್ರಯತ್ನ ಮಾಡಿರುವ ಸಿದ್ದರಾಮಯ್ಯ, ₹8,000 ಕೋಟಿ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯೂ ಸೇರಿದಂತೆ ಹತ್ತು ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ನಗರಾಭಿವೃದ್ಧಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದಂತೆಯೂ ಭರಪೂರ ಘೋಷಣೆಗಳೂ ಇವೆ.
ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗದಿರುವುದು, ತೆರಿಗೆ ಪಾಲಿನ ಹಂಚಿಕೆಯಲ್ಲಿ ಅನ್ಯಾಯ, ತೆರಿಗೆ ಪಾಲು ನೀಡುವಲ್ಲಿನ ತಾರತಮ್ಯದ ಕುರಿತು ಈ ಬಜೆಟ್‌ನಲ್ಲೂ ಮುಖ್ಯಮಂತ್ರಿಯವರು ಧ್ವನಿ ಎತ್ತಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದನ್ನು ಪ್ರಸ್ತಾಪಿಸಿದ್ದು, 2025–26ನೇ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ₹6,050 ಕೋಟಿ ಅನುದಾನ ಘೋಷಿಸಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ಅಸಹಕಾರದ ಮಧ್ಯೆಯೂ ರಾಜ್ಯ ಸ್ವತಂತ್ರವಾಗಿ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸಬಲ್ಲುದು ಎಂಬ ಸಂದೇಶ ರವಾನಿಸಲು ಯತ್ನಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ವಿವಿಧ ಹಂತದ 6,600 ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಘೋಷಣೆಗಳು ಬಜೆಟ್‌ನಲ್ಲಿವೆ. ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಚಾಲ್ತಿಯಲ್ಲಿರುವ 48 ನೀರಾವರಿ ಯೋಜನೆಗಳನ್ನು ಪ್ರಸಕ್ತ ವರ್ಷ ಪೂರ್ಣಗೊಳಿಸುವ ವಾಗ್ದಾನವನ್ನೂ ಮಾಡಲಾಗಿದೆ. ಬೆಂಗಳೂರು ನಗರವೂ ಸೇರಿದಂತೆ ನಗರ ಪ್ರದೇಶಗಳ ಅಭಿವೃದ್ಧಿಗೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ದುಪ್ಪಟ್ಟು ಅನುದಾನ ಘೋಷಿಸಲಾಗಿದೆ.
ತಾಯಿ ಮತ್ತು ಶಿಶುಗಳ ಮರಣ ತಗ್ಗಿಸುವುದು, ಮಕ್ಕಳಲ್ಲಿನ ಚಯಾಪಚಯ ಕಾಯಿಲೆಗಳನ್ನು ಪತ್ತೆಹಚ್ಚುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಕೇಂದ್ರೀಕರಿಸಿ ಆರೋಗ್ಯ ಇಲಾಖೆಗೆ ಅನುದಾನ ಒದಗಿಸಿದೆ. ಕೆಳಹಂತದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ₹5 ಲಕ್ಷದವರೆಗೆ ನಗದುರಹಿತ ಉಚಿತ ಚಿಕಿತ್ಸೆಗೆ ಪ್ರಕಟಿಸಿರುವ ಯೋಜನೆಯು, ದೊಡ್ಡ ಸಮೂಹಕ್ಕೆ ನೆರವಾಗಲಿದೆ.
ಬೆಂಗಳೂರಿನಾಚೆ ಚಿತ್ತ: ಕೈಗಾರಿಕೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳನ್ನು ಬೆಂಗಳೂರಿನಾಚೆಯ ಎರಡನೇ ಹಂತದ ನಗರಗಳಿಗೆ ಸೆಳೆಯುವ ಯೋಜನೆಗಳೂ ಬಜೆಟ್‌ನಲ್ಲಿವೆ.
ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಬಲ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ಮಿಸುವ ಕೈಗಾರಿಕಾ ಬಡಾವಣೆಗಳಲ್ಲಿ ಶೇಕಡ 20ರಷ್ಟು ನಿವೇಶನಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ–1, ಪ್ರವರ್ಗ–2 ಮತ್ತು ಅಲ್ಪಸಂಖ್ಯಾತರಿಗೆ (ಪ್ರವರ್ಗ 2–ಬಿ) ಮೀಸಲಿಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಈವರೆಗೆ ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಮೀಸಲಾತಿ ಇತ್ತು.
ಸರ್ಕಾರದ ವಿವಿಧ ಇಲಾಖೆಗಳ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸುವುದಾಗಿ ಘೋಷಿಸಲಾಗಿದೆ. ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸುವ ಘೋಷಣೆಯನ್ನು ಬಜೆಟ್‌ನಲ್ಲೇ ಮಾಡಿದ್ದು, ಮೀಸಲು ಒದಗಿಸುವ ಕಾಮಗಾರಿಗಳ ವೆಚ್ಚದ ಮಿತಿಯನ್ನು ₹1 ಕೋಟಿಯಿಂದ ₹2 ಕೋಟಿಗೆ ಹೆಚ್ಚಿಸಲಾಗಿದೆ. ₹1 ಕೋಟಿವರೆಗಿನ ಸರಕು ಮತ್ತು ಸಂಗ್ರಹಣೆಗಳ ಟೆಂಡರ್ ಪ್ರಕ್ರಿಯೆಗೂ ಈ ಮೀಸಲಾತಿಯನ್ನು ಅನ್ವಯಿಸಲಾಗಿದೆ.
ವೃತ್ತಿ ತೆರಿಗೆ ಹೆಚ್ಚಳ
ಈ ಬಾರಿ ಸ್ವಂತ ತೆರಿಗೆ ಮೂಲಗಳಿಂದ ₹2.08 ಲಕ್ಷ ಕೋಟಿ ರಾಜಸ್ವ ಸಂಗ್ರಹಿಸುವ ಗುರಿ ಇದೆ. ವೇತನ ಪಡೆಯುವ ನೌಕರರು ಪಾವತಿಸಬೇಕಾದ ವೃತ್ತಿ ತೆರಿಗೆಯ ಮೊತ್ತವನ್ನು ₹200ರಿಂದ ₹300ಕ್ಕೆ ಹೆಚ್ಚಿಸಲಾಗಿದೆ. ₹2,500ರ ಗರಿಷ್ಠ ಮಿತಿಯನ್ನೂ ನಿಗದಿಪಡಿಸಲಾಗಿದೆ.
ಮುಸ್ಲಿಮರಷ್ಟೇ ಅಲ್ಪಸಂಖ್ಯಾತರಲ್ಲ: ಸಿದ್ದರಾಮಯ್ಯ
ಮುಸ್ಲಿಮರಿಗೆ ಹೆಚ್ಚು ಅನುದಾನ ನೀಡಲಾಗಿದೆ. ಓಲೈಕೆ ಬಜೆಟ್ ಎಂಬ ಆರೋಪಗಳು ಬಿಜೆಪಿ ಮುಖಂಡರ ಮನಃಸ್ಥಿತಿ ತೋರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಅಲ್ಪಸಂಖ್ಯಾತರು ಎಂದರೆ ಬರೀ ಮುಸ್ಲಿಮರು ಎನ್ನುವ ಅಪಪ್ರಚಾರ ನಡೆಸುತ್ತಿದ್ದಾರೆ. ಎಲ್ಲ ವರ್ಗದ ಜನರಿಗೆ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ’ ಎಂದರು.
ಪರಿಶಿಷ್ಟರ ಕಲ್ಯಾಣಕ್ಕೆ ₹42,018 ಕೋಟಿ, ಅಲ್ಪಸಂಖ್ಯಾತರಿಗೆ ₹4,500 ಕೋಟಿ ನೀಡಲಾಗಿದೆ. ಹಿಂದುಳಿದ ವರ್ಗಗಳಿಗೆ ಬೇರೆಬೇರೆ ಯೋಜನೆಗಳ ಮೂಲಕ ಹಣ ನೀಡುವ ಜತೆಗೆ, ಪ್ರತ್ಯೇಕವಾಗಿ ₹4,300 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.
ಕೆಲವರ ತುಷ್ಟೀಕರಣ, ಬಹುತೇಕರ ತುಚ್ಛೀಕರಣ. ಇದು ಕಾಂಗ್ರೆಸ್ ಸರ್ಕಾರದ ಆಯವ್ಯಯದ ಹೂರಣ. ಬಜೆಟ್ ದ್ರೋಹ. ತಾರತಮ್ಯದ ಬಜೆಟ್, ಸುಳ್ಳು ಭರವಸೆಗಳೇ ತುಂಬಿವೆಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಯಾವುದೇ ಹೊಸ ಘೋಷಣೆಗಳು ಇಲ್ಲ. ಆದರೆ, ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನೇ ಮುಂದುವರಿಸಲಾಗಿದೆ. ‘ಅನ್ನಭಾಗ್ಯ’ ಹೋಗಿ ‘ಕುಡುಕರ ಭಾಗ್ಯ’ ಬಂದಿದೆ.ಆರ್.ಅಶೋಕ, ವಿರೋಧಪಕ್ಷದ ನಾಯಕ
ಅಭಿವೃದ್ಧಿಗೆ ಆರು ದಾರಿ
* ಕಲ್ಯಾಣ ಕಾರ್ಯಕ್ರಮಗಳು
* ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
* ಅಭಿವೃದ್ಧಿ ಕೇಂದ್ರಿತ
* ನಗರಾಭಿವೃದ್ಧಿ
* ಹೂಡಿಕೆ ಮತ್ತು ಉದ್ಯೋಗ ಸೃಜನೆ
* ಆಡಳಿತ ಸುಧಾರಣೆ
ಮುಖ್ಯಾಂಶಗಳು...
ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ‘ನನ್ನ ವೃತ್ತಿ ನನ್ನ ಆಯ್ಕೆ’
ಅಕ್ಕಮಹಾದೇವಿ ಕೋ ಆಪರೇಟಿವ್ ಸೊಸೈಟಿ ಸ್ಥಾಪನೆ
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಪೀಠ
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನಸಿಂಗ್ ಹೆಸರು
ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ₹ 1,000 ಹೆಚ್ಚಳ
ಅಂಗನವಾಡಿ ಸಹಾಯಕಿಯರಿಗೆ ₹ 750 ಹೆಚ್ಚಳ
ಅರ್ಚಕರ ತಸ್ತೀಕ್ ಮೊತ್ತ ವಾರ್ಷಿಕ ₹ 72 ಸಾವಿರಕ್ಕೆ ಏರಿಕೆ
ಗುತ್ತಿಗೆ ನೌಕರರಿಗೆ ನಗದು ರಹಿತ ಉಚಿತ ಚಿಕಿತ್ಸೆ ಯೋಜನೆ
ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ₹8,000 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.