ADVERTISEMENT

ಬಜೆಟ್‌: ಜಿಲ್ಲೆಯ ಜನರಲ್ಲಿ ಗರಿಗೆದರಿದ ನಿರೀಕ್ಷೆ

ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದ ಕೊಡುಗೆಗೆ ಕತ್ತರಿಯೋ, ಉತ್ತೇಜನವೋ ?

ಕೆ.ಎಸ್.ಸುನಿಲ್
Published 4 ಮಾರ್ಚ್ 2020, 9:04 IST
Last Updated 4 ಮಾರ್ಚ್ 2020, 9:04 IST
ಕಾಡಾನೆ
ಕಾಡಾನೆ   

ಹಾಸನ: ಮಾರ್ಚ್‌ 5ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸುವ ಬಜೆಟ್‌ನಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡುವರು ಎಂಬ ಚರ್ಚೆ ಶುರುವಾಗಿದೆ.

ಕಳೆದ ವರ್ಷ ಫೆ. 8 ರಂದು ಬಜೆಟ್ ಮಂಡಿಸಿದ್ದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ತವರು ಜಿಲ್ಲೆಗೆ ಭರಪೂರ ಉಡುಗೊರೆ ನೀಡಿದ್ದರು.

ಆದರೆ, ಅಂದು ಘೋಷಣೆ ಮಾಡಲಾಗಿದ್ದ ಎಷ್ಟೋ ಯೋಜನೆಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಜೆಡಿಎಸ್‌ ನಾಯಕರು ಆರೋಪ ಮಾಡುತ್ತಿದ್ದಾರೆ.

ADVERTISEMENT

ಜಿಲ್ಲಾ ಕಾರಾಗೃಹ ಸ್ಥಳಾಂತರ ಪ್ರಸ್ತಾವ ಚರ್ಚೆ ಹಂತದಲ್ಲಿಯೇ ಇದೆ. ಇನ್ನು ಸೋಮನಹಳ್ಳಿ ಕಾವಲು ಬಳಿ ಆಲೂಗಡ್ಡೆ ಸಂಶೋಧನಾ ಕಾಲೇಜು ಮೂಲೆ ಸೇರಿದೆ. ವಿಮಾನ ನಿಲ್ದಾಣ ಯೋಜನೆ ನನೆಗುದಿಗೆ ಬಿದ್ದಿದೆ. ಹೊಸ ಬಸ್ ನಿಲ್ದಾಣ ಬಳಿ ವಿಹಾರಧಾಮದ ಕನಸು ನನಸಾಗಲಿದೆಯೇ ಕಾದು ನೋಡಬೇಕು.

ಹಾಗಾಗಿ ಈ ಬಜೆಟ್ ನಲ್ಲಿ ಹಾಸನಕ್ಕೆ ಹೊಸ ಕೊಡುಗೆ ಏನು ನೀಡುವರು ಎಂಬುದು ಸಹಜವಾಗಿ ಕುತೂಹಲ ಮೂಡಿಸಿದೆ.

ಉದ್ಯೋಗ ಅರಸಿ ಯುವ ಜನರು ಬೆಂಗಳೂರು, ಮಂಗಳೂರು ಹಾಗೂ ಇತರೆ ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪಿಲ್ಲ. ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂಬ ಒತ್ತಾಯವಿದೆ.

ಕಾಫಿ, ಏಲಕ್ಕಿ ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕಾಡಾನೆ ಹಾವಳಿಯಿಂದ ಬೆಳೆಯೂ ನಷ್ಟವಾಗಿದೆ. ‘ವಿಶೇಷ ಪ್ಯಾಕೇಜ್‌ ಘೋಷಣೆ ನೀಡುವ ಮೂಲಕ ನೆರವಿಗೆ ಧಾವಿಸಬೇಕ’ ಎಂಬುದು ಎಂದು ಬೆಳೆಗಾರರ ಆಗ್ರಹ.

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ 12 ದೇಗುಲಗಳನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಳಿಸಲು, 44 ಟೂರಿಸ್ಟ್‌ ಹಾಟ್‌ಸ್ಪಾಟ್‌ ಘೋಷಣೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ವಿಶೇಷ ಒತ್ತು ನೀಡಿದರೆ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.

2007ರಲ್ಲಿ ಬೂವನಹಳ್ಳಿ ವಿಮಾನ ನಿಲ್ದಾಣ ಬಳಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಅಂದಿನ ₹1,200 ಕೋಟಿ ವೆಚ್ಚದ ಯೋಜನೆಗೆ 982 ಎಕರೆ ಭೂಮಿ ಪೈಕಿ 536 ಎಕರೆ ಸ್ವಾಧೀನ ಪಡಿಸಿಕೊಂಡ ಬಳಿಕ ಯೋಜನೆಗೆ ನನೆಗುದಿಗೆ ಬಿದ್ದಿದೆ. ವಾಣಿಜ್ಯ ಚಟುವಟಿಕೆ ಪೂರಕವಾಗಿ ವಿಶೇಷ ಆರ್ಥಿಕ ವಲಯದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಕೃಷಿ ಉತ್ಪನ್ನಗಳು ನೇರವಾಗಿ ರಫ್ತು ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಸಕಲೇಶಪುರ, ಆಲೂರು, ಬೇಲೂರು, ಹಳೇಬೀಡು ಭಾಗದಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ. ಹತ್ತು ವರ್ಷದಲ್ಲಿ ಐವತ್ತಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ನಷ್ಟವೂ ಹೆಚ್ಚಾಗುತ್ತಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆನೆ ಕಾರಿಡಾರ್‌ ನಿರ್ಮಾಣವಾಗಬೇಕೆಂಬ ಕೂಗಿಗೆ ಮನ್ನಣೆ ದೊರಕಿತೇ ಎಂಬುದು ರೈತರ ನಿರೀಕ್ಷೆಯಾಗಿದೆ.

ಜಿಲ್ಲೆಯ ಜನರ ನಿರೀಕ್ಷೆಗಳು..

*ನೇಪಥ್ಯಕ್ಕೆ ಸರಿದಿರುವ ಆಲೂಗೆಡ್ಡೆ ಬೆಳೆಗೆ ಪುನಶ್ಚೇತನ ಯೋಜನೆ.

*ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

*ಕಾಡಾನೆ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗೋಪಾಯ

*ಬಹುನಿರೀಕ್ಷಿತ ಆನೆ ಕಾರಿಡಾರ್ ನಿರ್ಮಾಣ

*ಅರಸೀಕೆರೆಯಲ್ಲಿ ಜಿಲ್ಲೆಯ ಮೊದಲ ಕರಡಿಧಾಮ ನಿರ್ಮಾಣ

*ಕುಂಟುತ್ತಾ ಸಾಗಿರುವ ಅಮೃತ ಯೋಜನೆಗೆ ಒತ್ತು

*ಗೊರೂರಿನಲ್ಲಿ ಬೃಂದಾವನ ಮಾದರಿ ಉದ್ಯಾನ ಯೋಜನೆ

*ಪ್ರವಾಸೋದ್ಯಮಕ್ಕೆ ಉತ್ತೇಜನ ಭರವಸೆ

*ನಿರುದ್ಯೋಗ ನಿವಾರಣೆಗೆ ಹೊಸ ಕೈಗಾರಿಕಾ ಘಟಕಗಳ ನಿರ್ಮಾಣ

*ಶ್ರವಣಬೆಳಗೊಳದ ಪ್ರಾಕೃತ ವಿ.ವಿ ಕನಸಿಗೆ ವೇಗ

*ಕಾಫಿ-ಏಲಕ್ಕಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್

ಕುಮಾರಸ್ವಾಮಿ ಅವಧಿಯಲ್ಲಿನ ಕೊಡುಗೆ..

*ವಿಟಿಯು ಮಾದರಿ ತಾಂತ್ರಿಕ ವಿದ್ಯಾಲಯ

*ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ

*ಆಲೂಗೆಡ್ಡೆ ಬೆಳೆಗಾರರ ಸಬ್ಸಿಡಿಗೆ ₹ 50 ಕೋಟಿ

*ಬೇಲೂರು ರಣಘಟ್ಟ ಯೋಜನೆ ಪುನಶ್ವೇತನಕ್ಕೆ ₹100 ಕೋಟಿ

*ಅರಸೀಕೆರೆಗೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ

*ಹೇಮಾವತಿ ಎಡದಂಡೆ ನಾಲೆ ಆಧುನೀಕರಣಕ್ಕೆ ₹ 80 ಕೋಟಿ

* 8 ತಾಲ್ಲೂಕುಗಳ ಕೆರೆ ತುಂಬಿಸಲು ಅನುದಾನ

*ಬಾಲಕಿಯರ ಕ್ರೀಡಾಶಾಲೆ ನಿರ್ಮಾಣಕ್ಕೆ ₹18 ಕೋಟಿ

*ಆನೆ ಕಾಟಕ್ಕೆ ರೈಲು ಹಳಿ ತಡೆಗೋಡೆ ನಿರ್ಮಾಣಕ್ಕೆ ₹228 ಕೋಟಿ

*ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ₹ 4 ಕೋಟಿ

*ಅರಸೀಕೆರೆಯಲ್ಲಿ 200 ಕೈದಿಗಳ ಸಾಮರ್ಥ್ಯವುಳ್ಳ ಉಪ ಕಾರಾಗೃಹ

*ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ₹50 ಕೋಟಿ

*ಅರಕಲಗೂಡು ತಾಲ್ಲೂಕಿನ ಕೆರೆಕಟ್ಟೆ ತುಂಬಿಸಲು ₹ 120 ಕೋಟಿ

*ಕಾಚೇನಹಳ್ಳಿ ಏತನೀರಾವರಿ ಯೋಜನೆ 3ನೇ ಹಂತಕ್ಕೆ ₹ 100 ಕೋಟಿ

*ಸಕಲೇಶಪುರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ₹ 12 ಕೋಟಿ

*
ಜಿಲ್ಲೆಯ ಮೂಲಸೌಲಭ್ಯ, ಉದ್ಯೋಗ ಸೃಷ್ಟಿ, ರೈತರ ಸಮಸ್ಯೆ ನಿವಾರಣೆ ಬಗ್ಗೆ ಸಿ.ಎಂ ಜತೆ ಚರ್ಚಿಸಿದ್ದೇನೆ. ಸಾಕಷ್ಟು ನೆರವು ನೀಡುವ ಭರವಸೆ ದೊರತಿದೆ.‌
-ಪ್ರೀತಂ ಗೌಡ, ಹಾಸನ ಕ್ಷೇತ್ರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.