ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.
ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಪ್ರಸಕ್ತ ಸಾಲಿನಲ್ಲಿ ಇ-ಪೌತಿ ಆಂದೋಲನವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಗ್ರಾಮ ಹಾಗೂ ತಾಲ್ಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ವಿಧಾನವಾದ ಜಮಾಬಂದಿ ಪ್ರಕ್ರಿಯೆಯನ್ನು ವೇಗವಾಗಿ ನಿರ್ವಹಿಸಲು ಇ-ಜಮಾಬಂದಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.* ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ಭೂ-ಕಂದಾಯ ಕಾಯ್ದೆಯು ತುಂಬ ಹಳೆಯದಾಗಿದ್ದು, ಕ್ಷೇತ್ರ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಚ್ಚಿನ ಸ್ಪಷ್ಟತೆ ನೀಡುವ ಹಿನ್ನೆಲೆಯಲ್ಲಿ ಸಮಗ್ರವಾಗಿ ಅಧ್ಯಯನ ನಡೆಸಿ, ಹೊಸ ಭೂ-ಕಂದಾಯ ಕಾಯ್ದೆ ತರಲಾಗುವುದು ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಇತರೆ ಘೋಷಣೆಗಳು
* ಬೆಳಗಾವಿ ನಗರದಲ್ಲಿ ₹55 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ.
* ರೈತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಮರ್ಪಕ ಸೌಲಭ್ಯಗಳನ್ನೊಳಗೊಂಡ ಹೊಸ 100 ನಾಡ ಕಛೇರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
* ರಾಜ್ಯದಲ್ಲಿ ಹೊಸದಾಗಿ ರಚನೆಯಾದ 63 ತಾಲ್ಲೂಕುಗಳ ಪೈಕಿ ಒಂಭತ್ತು ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣವಾಗಿದ್ದು, ಐದು ತಾಲ್ಲೂಕುಗಳಲ್ಲಿ ಪ್ರಗತಿಯಲ್ಲಿವೆ. 2024-25ನೇ ಸಾಲಿನಲ್ಲಿ 28 ತಾಲ್ಲೂಕುಗಳಲ್ಲಿ ಪ್ರಜಾಸೌಧಕ್ಕೆ ಅನುಮೋದನೆ ನೀಡಲಾಗಿದೆ. 2025-26ನೇ ಸಾಲಿನಲ್ಲಿ 21 ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.
* ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ 2025-26ನೇ ಸಾಲಿನಲ್ಲಿ ₹34 ಕೋಟಿ ಒದಗಿಸಲಾಗುವುದು.
* ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ʻಅನುಭವ ಮಂಟಪʼ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಳಿಸಲಾಗುವುದು.
* ಭೂಮಾಪನ ಇಲಾಖೆಯು ಕೈಗೊಳ್ಳುತ್ತಿರುವ ದೈನಂದಿನ ಸಾಂಪ್ರದಾಯಿಕ ಸರ್ವೆ ಕಾರ್ಯಗಳನ್ನು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನ ಬಳಸಿ ಡಿಜಿಟಲೀಕರಿಸಿ ಸಾರ್ವಜನಿಕರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ಒದಗಿಸಲಾಗುವುದು.
* ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ʻನಕ್ಷಾʼ ಯೋಜನೆಯಡಿಯಲ್ಲಿ ಪ್ರಾರಂಭಿಕವಾಗಿ ರಾಜ್ಯದ 10 ನಗರಸಭೆ / ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಡ್ರೋನ್ (Drone) ಬಳಸಿ ಸರ್ವೆ ಮಾಡುವ ಮೂಲಕ ಡಿಜಿಟಲೀಕರಿಸಲಾಗುವುದು.
* ಸಾಮಾಜಿಕ ಭದ್ರತಾ ಪಿಂಚಣಿ ಮಂಜೂರಾತಿ ಸೇವೆಯನ್ನು ನೀಡಲು ಸಕಾಲ ಕಾಯ್ದೆಯಡಿ ಪ್ರಸ್ತುತ ಇರುವ ಕಾಲಮಿತಿಯನ್ನು 45 ದಿನಗಳಿಂದ 21 ದಿನಗಳಿಗೆ ಇಳಿಸಲಾಗುವುದು.
* ಕಾವೇರಿ-2.೦ ತಂತ್ರಾಂಶದ ಮೂಲಕ ಸರ್ಕಾರದ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದ ನಾಗರಿಕರಿಗೆ ಸುಲಭ ಮತ್ತು ಸರಳವಾದ ರೀತಿಯಲ್ಲಿ ದಸ್ತಾವೇಜುಗಳನ್ನು ತಯಾರಿಸಲು ಹಾಗೂ ಮುದ್ರಾಂಕ ಶುಲ್ಕವು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಸರ್ಕಾರಕ್ಕೆ ಜಮೆ ಮಾಡಲು ನೆರವಾಗಲಿದೆ.
*. ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕಾವೇರಿ-2.೦ ತಂತ್ರಾಂಶವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಡಿಯಲ್ಲಿಯೇ ನಿರ್ವಹಿಸಲು ಕ್ರಮವಹಿಸಲಾಗುವುದು.
*. ರಾಜ್ಯದ ಒಟ್ಟಾರೆ ನೋಂದಣಿಯಲ್ಲಿ ಶೇ.75 ರಷ್ಟು ನೋಂದಣಿಗಳು ನಡೆಯುವ ಬೆಂಗಳೂರಿನ 36 ನೋಂದಣಿ ಕಛೇರಿಗಳನ್ನು ಆಧುನೀಕರಣಗೊಳಿಸಿ, ಮೂಲಭೂತ ಸೌಲಭ್ಯ ಹಾಗೂ ಉತ್ಕೃಷ್ಟ ಸೇವೆಯನ್ನು *76 ಕೋಟಿ ವೆಚ್ಚದಲ್ಲಿ ಕಲ್ಪಿಸಲಾಗುವುದು.
* ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿಯನ್ನು ತೆರವುಗೊಳಿಸಲಾಗುವುದು.
*ʻಭೂ-ವರಾಹʼ ಯೋಜನೆಯಡಿಯಲ್ಲಿ ಈ ದೇವಾಲಯಗಳ ಸ್ಥಿರಾಸ್ತಿಗಳನ್ನು ದಾಖಲೀಕರಣಗೊಳಿಸಲಾಗುವುದು.
*. ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳ/ ದೇವಾಲಯಗಳಲ್ಲಿರುವ ಅರ್ಚಕರಿಗೆ ಪ್ರಸ್ತುತ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು ₹60,000 ದಿಂದ 72,000ಕ್ಕೆ ಹೆಚ್ಚಿಸಲಾಗುವುದು.
* ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನ ಮತ್ತಿತರ ಭತ್ಯೆಗಳನ್ನು ಇದುವರೆವಿಗೂ ದೇವಾಲಯಗಳ ನಿಧಿಯಿಂದ ಭರಿಸಲಾಗುತ್ತಿತ್ತು. 2025-26 ನೇ ಸಾಲಿನಿಂದ ಇವರುಗಳ ವೇತನವನ್ನು ಸರ್ಕಾರದ ವತಿಯಿಂದ ಪಾವತಿಸಲು ಕ್ರಮವಹಿಸಲಾಗುವುದು.
* ರಾಜ್ಯದ ಪ್ರಮುಖ 400 ದೇವಾಲಯ ಹಾಗೂ ಹೊರ ರಾಜ್ಯಗಳಲ್ಲಿರುವ ರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಅಂದಾಜು 3,500 ಕೊಠಡಿಗಳಲ್ಲಿ ಯಾತ್ರಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮತ್ತು ಕೊಠಡಿಗಳ ಕಾಯ್ದಿರಿಸುವಿಕೆ ಹಾಗೂ ನಿರ್ವಹಣೆ ಮಾಡಲು ʻಕರ್ನಾಟಕ ದೇವಾಲಯಗಳ ವಸತಿ ಕೋಶʼವನ್ನು ಸ್ಥಾಪಿಸಲಾಗುವುದು.
* ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮವನ್ನು ಧಾರ್ಮಿಕ ಹಾಗೂ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.