ADVERTISEMENT

ಅನುದಾನದ ನಿರೀಕ್ಷೆಯಲ್ಲಿ ನವಲಿ ಜಲಾಶಯ

ಕುಂಟುತ್ತ ಸಾಗಿರುವ ಜಿಲ್ಲೆಯ ಏತ ನೀರಾವರಿ ಯೋಜನೆ: ವೇಗ ನೀಡುವರೆ ಮುಖ್ಯಮಂತ್ರಿ

ಸಿದ್ದನಗೌಡ ಪಾಟೀಲ
Published 4 ಮಾರ್ಚ್ 2020, 7:17 IST
Last Updated 4 ಮಾರ್ಚ್ 2020, 7:17 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯ
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯ   

ಕೊಪ್ಪಳ: ಪ್ರತಿವರ್ಷ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳ ಪ್ರಸ್ತಾಪವಾಗುತ್ತಿದ್ದು, ಅದಕ್ಕೆಕೋಟ್ಯಂತರ ಹಣ ನೀಡಿದ್ದರೂ ಒಂದೇ ಒಂದು ಯೋಜನೆ ಪೂರ್ಣಗೊಂಡಿಲ್ಲ.

ಜಿಲ್ಲೆಯ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ಜಿಲ್ಲೆಯಲ್ಲಿ ಹತ್ತಾರು ಏತ ನೀರಾವರಿ ಯೋಜನೆಗಳು ಇದ್ದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಅನುದಾನ ಬಂದಿದ್ದರೂ ಜಮೀನಿಗೆ ಮಾತ್ರ ಹನಿ ನೀರು ಬರದೇ ಇರುವುದು ದುರಂತವೇ ಸರಿ.

ಜಿಲ್ಲೆಯಲ್ಲಿ ಪ್ರಮುಖವಾಗಿ ಕೊಪ್ಪಳ ಏತ ನೀರಾವರಿ ಯೋಜನೆಗೆ ₹ 20 ಸಾವಿರ ಕೋಟಿ ಖರ್ಚಾಗಲಿದೆ ಎನ್ನುತ್ತಾರೆ. ಆದರೆ ಅನುದಾನ ಬಂದಿದ್ದು ಮಾತ್ರ ₹ 2 ಸಾವಿರ ಕೋಟಿ ಕೂಡಾ ದಾಟುವುದಿಲ್ಲ. ಶಿಂಗಾಟಾಲೂರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದರೂಅದರ ಲಾಭ ಕೊಪ್ಪಳ ತಾಲ್ಲೂಕಿಗೆ ದೊರೆತಿಲ್ಲ. ಕುಡಿಯುವ ನೀರಿನ ಉದ್ದೇಶ ಈಡೇರಿಸಿಕೊಂಡ ಗದಗ ಜಿಲ್ಲೆ ಬಿಟ್ಟರೆ ಜಿಲ್ಲೆಗೆ ಏನೂ ಅನುಕೂಲವಾಗಿಲ್ಲ.

ADVERTISEMENT

ಕೊಪ್ಪಳ ಏತ ನೀರಾವರಿ ಯೋಜನೆಯಿಂದ ಜಿಲ್ಲೆಯ ಗಂಗಾವತಿ ತಾಲ್ಲೂಕು ಹೊರತು ಪಡಿಸಿದರೆ ಎಲ್ಲ ತಾಲ್ಲೂಕುಗಳಿಗೆ ಇದರ ಲಾಭ ದಕ್ಕಲಿದೆ. ಕೆರೆ ತುಂಬಿಸುವ ಮೂಲಕ ಅಂತರ್ಜಲ ವೃದ್ಧಿ, ಸಣ್ಣ, ಪುಟ್ಟ ಕಾಲುವೆಗಳ ದುರಸ್ಥಿಯಿಂದ 1 ಲಕ್ಷ ಎಕರೆ ಜಮೀನು ನೀರಾವರಿ ಆಗಲಿದೆ ಎಂಬ ಅಂದಾಜಿದೆ. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಪ್ರಸ್ತಾವದಲ್ಲಿಯೇ ಮುಗಿದು ಹೋಗಿದ್ದು, ಯೋಜನೆ ಕುಂಟುತ್ತಾ
ಸಾಗಿದೆ.

ಬೆಟಗೇರಿ, ಬಹಾದ್ಧೂರ ಬಂಡಿ ಪ್ರಮುಖ ಏತ ನೀರಾವರಿ ಯೋಜನೆಗಳು ಅನುಷ್ಠಾನ ಬಾಕಿ ಉಳಿದಿವೆ. ಇವುಗಳನ್ನು ಪೂರ್ಣಗೊಳಿಸಲು ಈ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಾಗಿಡುತ್ತಾರೆಯೇ ಎಂಬ ಆಶಾ ಭಾವನೆ ಜನರಲ್ಲಿ ಇದೆ.

ಹಿರೇಹಳ್ಳ ಜಲಾಶಯ: ತುಂಗಭದ್ರಾ ನದಿಗೆ ಹೂಳು ಸೇರುವುದನ್ನು ತಡೆಯಲು ಕಿನ್ನಾಳ ಸಮೀಪದ ಹಿರೇಹಳ್ಳಕ್ಕೆ ಜಲಾಶಯ ನಿರ್ಮಿಸಲಾಗಿತ್ತು. ಅಂತರ್ಜಲ ವೃದ್ಧಿ, ನೀರಾವರಿ ಯೋಜನೆಗೆ ಬಳಕೆಗೆ ನಿರ್ಮಾಣಗೊಂಡ ಈ ಜಲಾಶಯದಲ್ಲಿಯೇ ವ್ಯಾಪಕ ಪ್ರಮಾಣದ ಹೂಳು ತುಂಬಿದೆ. ಎಡ ಮತ್ತು ಬಲ ದಂಡೆಯ ಕಾಲುವೆಗಳು ಹಾಳಾಗಿ ಹೋಗಿವೆ. ಸುತ್ತಮುತ್ತಲಿನ ಮೂರು, ನಾಲ್ಕು ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ಹೂಳು ತೆಗೆಯಲು ಮತ್ತು ಕಾಲುವೆ ಆಧುನೀಕರಣಕ್ಕೆ ನೂರಾರು ಕೋಟಿ ಹಣ ಅವಶ್ಯವಿದೆ. ಆದರೆ ಈ ಕಾಮಗಾರಿ ಆರಂಭವಾಗುವ ಯಾವ ಲಕ್ಷಣವೂ ಇಲ್ಲ.

2017ರ ಬಜೆಟ್‌ನಲ್ಲಿ ಶಿಂಗಟಾಲೂರ ಏತ ನೀರಾವರಿ ಯೋಜನೆಯಿಂದ ಮುಂಡರಗಿ ಮತ್ತು ಕೊಪ್ಪಳ ತಾಲ್ಲೂಕಿನ 20 ಸಾವಿರ ಹೆಕ್ಟೇರ್‌ ಜಮೀನಿಗೆ ನೀರು ಒದಗಿಸುವ ಉದ್ದೇಶ ಪ್ರಸ್ತಾಪವಾಗಿತ್ತು. ಆದರೆ ಇಲ್ಲಿವರೆಗೆ ಯಾವುದೇ ಕಾಮಗಾರಿ ಪ್ರಗತಿಯಾಗಿಲ್ಲ.2018ರಲ್ಲಿ ಇಸ್ರೇಲ್‌ ಕೃಷಿ ಮಾದರಿಯನ್ನು ಅನುಷ್ಠಾಗೊಳಿಸುವ ಉದ್ದೇಶದಿಂದ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನು ಗುರುತಿಸಿ ಕಾರ್ಯಾರಂಭಕ್ಕೆ ₹ 150 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಒಂದೇ ಎಕರೆಯಲ್ಲಿ ಪ್ರಯೋಗವನ್ನು ಈ ಯೋಜನೆ ಕಂಡಿಲ್ಲ.

ಅಲ್ಲದೆತುಂಗಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಕೊರತೆ ನೀಗಿಸುವ ಪರ್ಯಾಯ ಮಾರ್ಗೋಪಾಯವಾಗಿ ಪ್ರವಾಹ ಹರಿವು ನಾಲೆ ಮೂಲಕ ನವಲಿ ಹತ್ತಿರಸಮಾನಂತರ ಜಲಾಶಯ ನಿರ್ಮಾಣ ಮತ್ತು ಯೋಜನೆಯ ಕಾರ್ಯ ಸಾಧ್ಯತೆ ಅಧ್ಯಯನ ಮತ್ತು ಯೋಜನಾ ವರದಿ ತಯಾರಿಸಲಾಗುವುದು ಎಂಬ ಪ್ರಸ್ತಾವಮಾಡಲಾಗಿದೆ. ಈ ಕುರಿತು ಸತತ ಚರ್ಚೆ ನಡೆಯುತ್ತಿದೆ.

2019 ರಲ್ಲಿಚೀನಾ ಮಾದರಿಯ ಆಟಿಕೆ ತಯಾರಿಕೆಕ್ಲಸ್ಟರ್ ಆರಂಭ ಘೋಷಣೆ ಮಾಡಲಾಗಿತ್ತು. ₹ 1500 ಕೋಟಿ ಅನುದಾನ ಹರಿದು ಬರುವುದಾಗಿ ಸರ್ಕಾರ ಹೇಳಿತ್ತು. ಆದರೆ ಇನ್ನೂ ಯಾವುದೇ ಕಾರ್ಖಾನೆ ಇಲ್ಲಿ ಸ್ಥಾಪನೆಯಾಗಿಲ್ಲ. ಕಿನ್ನಾಳದ ಗೊಂಬೆಗೆ ಜಾಗತಿಕ ಮನ್ನಣೆ ಇದ್ದು, ಅವುಗಳನ್ನು ತಯಾರಿಸುವ ಕೌಶಲ ಕೇಂದ್ರದ ಪ್ರಸ್ತಾವವೂ ಸರ್ಕಾರದ ಮುಂದೆ ಇದೆ.

ಇದೇ ಅವಧಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ₹ 200 ಕೋಟಿ ನೀಡಿದ್ದನ್ನು ಬಿಟ್ಟರೆ ಮತ್ತೆ ಬೇರೆ ಅನುದಾನಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.