ADVERTISEMENT

ರೈತರಿಗಾಗಿ 16 ಅಂಶಗಳ ಕ್ರಿಯಾ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 7:16 IST
Last Updated 1 ಫೆಬ್ರುವರಿ 2020, 7:16 IST
   

ನವದೆಹಲಿ: ಹಮಾರಾ ವತನ್ ಖಿಲ್ತೇ ಹುವೇ ಶಾಲಿಮಾರ್ ಬಾಗ್ ಜೈಸಾ (ನಮ್ಮ ದೇಶ ನಳನಳಿಸುವ ಹೂವಿನ ತೋಟದಂತೆ) ಹಮಾರಾ ವತನ್ ದಾಲ್ ಜೀಲ್ ಮೇ ಖಿಲ್ತೆ ಹುಯೇ ಕಮಲ್ ಜೈಸಾ (ನಮ್ಮ ದೇಶ ದಾಲ್ ಕಣಿವೆಯಲ್ಲಿ ಅರಳುವ ಕಮಲದಂತೆ), ನೌಜವಾನೋಂಕೀ ಗರ್ಮ್ ಖೂನ್ ಜೈಸಾ (ಯುವಕರ ಬಿಸಿ ರಕ್ತದಂತೆ), ಮೇರಾ ವತನ್ , ತೇರಾ ವತನ್, ಹಮಾರಾ ವತನ್ (ನನ್ನ ದೇಶ, ನಿನ್ನ ದೇಶ, ನಮ್ಮ ದೇಶ), ದುನಿಯಾ ಕಾ ಸಬ್‌ಸೇ ಪ್ಯಾರಾ ವತನ್ (ಜಗತ್ತಿನ ಪ್ರೀತಿಯ ದೇಶ) ಎಂಬ ಕಾಶ್ಮೀರಿ ಕವಿತೆಯ ಹಿಂದಿ ಅನುವಾದವನ್ನು ವಾಚಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಮತ್ತು ಗ್ರಾಮೀಣ ಜೀವನ ಅಭಿವೃದ್ಧಿಗೆ 16 ಅಂಶಗಳ ಕ್ರಿಯಾ ಯೋಜನೆಯನ್ನು ಘೋಷಿಸಿದ್ದಾರೆ.

16 ಅಂಶಗಳ ಕ್ರಿಯಾ ಯೋಜನೆ

1. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು.

2. ಫಸಲ್ ಭೀಮಾ ಯೋಜನೆಯಡಿಯಲ್ಲಿ 6.11 ಕೋಟಿ ರೈತರಿಗೆ ವಿಮೆ ಯೋಜನೆ.

ADVERTISEMENT

3. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಾದರಿ ಕಾನೂನುಗಳನ್ನು ಜಾರಿ ಮಾಡುವ ರಾಜ್ಯ ಸರ್ಕಾರಗಳಿಗೆ ಬೆಂಬಲ.

4. ನೀರಿನ ಅಭಾವವಿರುವ 100 ಜಿಲ್ಲೆಗಳಿಗೆ ನೆರವು ನೀಡುವ ಕಾರ್ಯಯೋಜನೆ.

5.ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಫಲಾನುಭವಿ ರೈತರು ಸೋಲಾರ್ ಪಂಪ್ ಸೆಟ್‌ಗಳನ್ನು ಬಳಸುತ್ತಿದ್ದು ಪಂಪ್ ಕಾರ್ಯ ನಿರ್ವಹಣೆಗೆ ಡೀಸೆಲ್ ಮತ್ತು ಸೀಮೆಎಣ್ಣೆಯನ್ನು ಅವಲಂಬಿಸುತ್ತಿರುವುದು ಕಡಿಮೆಯಾಗಿದೆ. ₹15 ಲಕ್ಷ ರೈತರಿಗೆ ಸೋಲಾರ್ ಗ್ರಿಡ್ ಆಧಾರಿತ ಪಂಪ್ ಸೆಟ್‌ಗಳನ್ನು ನೀಡಲು ಸರ್ಕಾರ ನೆರವಾಗಲಿದೆ.

6. ರಸಗೊಬ್ಬರದ ಮಿತವಾದ ಬಳಕೆಗೆ ಪ್ರೋತ್ಸಾಹ. ತಮಿಳು ಸಂತಕವಿ ಅವ್ವಯ್ಯಾರ್ ಅವರ ಕಾವ್ಯ ಉಲ್ಲೇಖಿಸಿ ಕೃಷಿಯ ಪ್ರಾಮುಖ್ಯತೆ ವಿವರಿಸಿದ ಸಚಿವೆ ಕೃಷಿ ಭೂಮಿಯಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರ ಮತ್ತು ನೀರು ಹಾಕಬೇಕು. ಅಗತ್ಯಕ್ಕಿಂತ ಹೆಚ್ಚು ಹಾಕಬಾರದು. ‘ಭೂಮಿ ತಿರುತ್ತಿ ಉನ್’ (ಭೂಮಿಯ ಕಾಳಜಿ ಮಾಡಿ) ಎಂಬ ತಮಿಳು ಕಾವ್ಯದ ಉಲ್ಲೇಖ ಮಾಡಿದ್ದಾರೆ.

7. ಕೃಷಿ ಉತ್ಪನ್ನಗಳ ಸಂಗ್ರಹ ಸ್ಥಳಗಳ ಮ್ಯಾಪಿಂಗ್ ಮತ್ತು ಜಿಯೊ ಟ್ಯಾಗಿಂಗ್ ಕೆಲಸವನ್ನು ನಬಾರ್ಡ್ ಮಾಡಲಿದೆ.

8. ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಧನಸಹಾಯ. ಮಹಿಳೆಯರನ್ನು ‘ಧಾನ್ಯ ಲಕ್ಷ್ಮಿ’ ಎಂದು ಬಣ್ಣಿಸಿದ ಸಚಿವೆ. ಬೀಜ ಸಂರಕ್ಷಣೆಗೆ ಮುಂದೆ ಬರುವ ಯುವ ಮಹಿಳಾ ಉದ್ಯಮಿಗಳಿಗೆ ಮುದ್ರಾ ಯೋಜನೆಯಡಿ ನೆರವು.

9. ಕೃಷಿ ಉಡಾನ್ ಮೂಲಕ ಈಶಾನ್ಯ ರಾಜ್ಯ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳ ರಫ್ತಿಗೆ ವಿಶೇಷ ಸರಕು ಸಾಗಣೆ ವಿಮಾನಗಳ ಘೋಷಣೆ.

10. ತೋಟಗಾರಿಕೆಯಿಂದಾಗಿ ಹೆಚ್ಚಿನ ಆಹಾರ ಧಾನ್ಯ ಉತ್ಪನ್ನವಾಗುತ್ತಿದೆ. ಇನ್ನು ಮುಂದೆ ಒಂದು ಉತ್ಪನ್ನ ಒಂದು ಜಿಲ್ಲೆ ಎಂಬ ಸೂತ್ರ ಅನ್ವಯಿಸಲಾಗುವುದು.

11.ಕೃಷಿ ಉತ್ಪನ್ನಗಳ ಸಂಗ್ರಹಗಳ ವ್ಯವಹಾರದ ರಶೀದಿಗಳನ್ನು ಇ-ಸೇವೆಗಳಿಗೆ ಜೋಡಣೆ ಮಾಡಲಾಗುವುದು.

12.ಶೂನ್ಯ ಕೃಷಿ ಬಂಡವಾಳಕ್ಕೆ ಒತ್ತು. ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಆನ್‌ಲೈನ್ ಮಾರಾಟಕ್ಕೆ ವ್ಯವಸ್ಥೆ.

13. ಭಾರತೀಯ ರೈಲ್ವೆಯಿಂದ ಕಿಸಾನ್ ರೈಲು. ಆಹಾರ ಪದಾರ್ಥಗಳು ಕೊಳೆತು ಹೋಗದಂತೆ ಅವುಗಳನ್ನು ಸಾಗಿಸಲು ವ್ಯವಸ್ಥೆ.

14. ಕೃಷಿ ಮತ್ತು ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ₹2.83 ಲಕ್ಷ ಕೋಟಿ ಘೋಷಣೆ. ಇದು ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್‌ನ್ನು ಒಳಗೊಂಡಿದೆ. ಕೃಷಿಗೆ ₹ 1.6 ಲಕ್ಷ ಕೋಟಿ ಮೀಸಲು. ಗ್ರಾಮೀಣಾಭಿವೃದ್ಧಿಗೆ ₹1.23 ಲಕ್ಷ ಕೋಟಿ ಘೋಷಣೆ.

15. 2020–21ರ ಸಾಲಿಗೆ ₹ 15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ.

16. ಎನ್‌ಬಿಎಫ್‌ಸಿ ಮತ್ತು ಸಹಕಾರ ಸಂಸ್ಥೆಗಳು ಕೃಷಿ ಸಾಲ ನೀಡುವಲ್ಲಿ ಸಕ್ರಿಯವಾಗಿವೆ. ನಬಾರ್ಡ್ ರಿಫಿನಾನ್ಸ್ ಯೋಜನೆಯನ್ನು ವಿಸ್ತರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.