ADVERTISEMENT

ಷೇರುಪೇಟೆ ಚಿತ್ತ ಬಜೆಟ್‌ನತ್ತ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:48 IST
Last Updated 26 ಜನವರಿ 2020, 19:48 IST
   
""

ಷೇರುಪೇಟೆ ಹೂಡಿಕೆದಾರರ ಚಿತ್ತ ಬಜೆಟ್‌ನತ್ತ ನೆಟ್ಟಿದೆ. ತ್ರೈಮಾಸಿಕ ಫಲಿತಾಂಶಗಳಲ್ಲಿ ಕೂಡ ಮಿಶ್ರ ಫಲ ಕಂಡು ಬರುತ್ತಿದೆ. ಈ ಎಲ್ಲ ಕಾರಣಗಳಿಂದ ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕೊಂಚ ಹಿನ್ನಡೆ ಅನುಭವಿಸಿವೆ. 41,613 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಹಾಗೂ 12,248 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.84 ರಷ್ಟು ಕುಸಿತ ಕಂಡಿವೆ. ಆದರೆ ನಿಫ್ಟಿ ಮಿಡ್ ಕ್ಯಾಪ್ (100) ಸೂಚ್ಯಂಕ ವಾರಾಂತ್ಯಕ್ಕೆ ಶೇ 1.6 ರಷ್ಟು ಜಿಗಿದಿದೆ. ನಿಫ್ಟಿ ಬ್ಯಾಂಕ್ ಶೇ 1 ರಷ್ಟು ಕುಸಿದಿದೆ.

ಗಳಿಕೆ–ಇಳಿಕೆ: ಭಾರ್ತಿ ಇನ್ಫ್ರಾಟೆಲ್ ಶೇ 12 ರಷ್ಟು ಗಳಿಸಿಕೊಂಡಿದೆ. ಯೆಸ್ ಬ್ಯಾಂಕ್ ವೈಫಲ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ ಹಿನ್ನೆಲೆಯಲ್ಲಿ ಷೇರುಗಳು ಶೇ 9 ರಷ್ಟು ಜಿಗಿದಿವೆ. ಗ್ರಾಸಿಂ ಶೇ 7, ಏರ್‌ಟೆಲ್ ಶೇ 4.84, ಎಲ್ ಆ್ಯಂಡ್‌ಟಿ ಶೇ 4.22 ರಷ್ಟು ಗಳಿಸಿವೆ.

ತೆರಿಗೆ ವಂಚನೆ ಸಂಬಂಧ ಆದಾಯ ತೆರಿಗೆ ಇಲಾಖೆ ತಪಾಸಣೆ ನಡೆಸಲಿದೆ ಎನ್ನುವ ವರದಿ ಹಿನ್ನೆಲೆಯಲ್ಲಿ ಯುಪಿಎಲ್‌ನ ಷೇರುಗಳು ಶೇ 7.8 ರಷ್ಟು ಕುಸಿದಿವೆ. ಕೋಲ್ ಇಂಡಿಯಾ ಶೇ 6.71, ಒಎನ್‌ಜಿಸಿ ಶೇ 5.62, ಟಾಟಾ ಮೋಟರ್ಸ್ ಶೇ 5.47, ಎನ್‌ಟಿಪಿಸಿ ಶೇ 5.32 ರಷ್ಟು ತಗ್ಗಿವೆ.

ADVERTISEMENT

ಪ್ರಮುಖ ಬೆಳವಣಿಗೆಗಳು: ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಪರಾಮರ್ಶಿಸಿದ್ದು 2019-20ರ ಜಿಡಿಪಿ ಅಂದಾಜನ್ನುಐಎಂಎಫ್‌ಶೇ 4.8ಕ್ಕೆ ಕಡಿತಗೊಳಿಸಿದೆ.

3ನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಶೇ 5.8 ರಷ್ಟು ಮಾತ್ರ ವೃದ್ಧಿಸಿದೆ. ಇದು 6 ವರ್ಷಗಳಲ್ಲೇ ನಿಧಾನಗತಿಯ ಬೆಳವಣಿಗೆಯಾಗಿದೆ.

ಕೋಟಕ್, ಜೀ, ಎಲ್‌ಆ್ಯಂಡ್‌ಟಿ, ಏಷಿಯನ್ ಪೇಂಟ್ಸ್, ಆ್ಯಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯು ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಿದ್ದು ಸಾಮಾನ್ಯ ಸಾಧನೆ ತೋರಿವೆ.

ಮುನ್ನೋಟ: ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಎಚ್‌ಡಿಎಫ್‌ಸಿ, ಡಾ ರೆಡ್ಡಿಸ್, ಬಜಾಜ್ ಫೈನಾನ್ಸ್ , ಬಜಾಜ್ ಫಿನ್ ಸರ್ವ್, ಎಸ್‌ಬಿಐ, ಪವರ್ ಗ್ರಿಡ್, ಹಿಂದುಸ್ಥಾನ್ ಯುನಿ ಲಿವರ್, ಐಟಿಸಿ, ಟೆಕ್ ಮಹೀಂದ್ರಾ, ಬಜಾಜ್ ಆಟೊ, ಭಾರ್ತಿ ಇನ್ಫ್ರಾಟೆಲ್ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಸಾಧನೆ ವರದಿ ಪ್ರಕಟಿಸುತ್ತಿವೆ. ಫೆಬ್ರುವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಹೂಡಿಕೆದಾರರ ಚಿತ್ತ ಈಗ ಬಜೆಟ್ ನತ್ತ ನೆಟ್ಟಿದ್ದು ಹೊಸ ಘೋಷಣೆಗಳಿಗಾಗಿ ಅವರೆಲ್ಲ ಕಾತುರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.