ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ (ಎಂಎಸ್‌ಎಂಇ) ಬೆಳವಣಿಗೆಗೆ ಅನುಕೂಲ ಆಗುವಂತೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ.
ಲೆಕ್ಕಪತ್ರ ತಪಾಸಣೆಗೆ ಒಳಪಡುವ ಎಂಎಸ್‌ಎಂಇಗಳ ವಾರ್ಷಿಕ ವಹಿವಾಟಿನ ಮಿತಿಯನ್ನು ₹1 ಕೋಟಿಯಿಂದ ₹5 ಕೋಟಿಗೆ ಏರಿಕೆ ಮಾಡಲಾಗಿದೆ.
ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಾವಕಾಶ ಸೃಷ್ಟಿಗೆ ಎಂಎಸ್‌ಎಂಇಗಳ ಪ್ರಗತಿ ಮುಖ್ಯವಾಗಿದೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ ಲೆಕ್ಕಪತ್ರ ತಪಾಸಣೆ ನಡೆಸುವ ಸಮಸ್ಯೆಯಿಂದಲೂ ಉದ್ದಿಮೆಗಳು ಹೊರಬರಲಿವೆ.
ಎಂಎಸ್‌ಎಂಇಗಳಿಗೆ ಸಾಲ ಮರುಹೊಂದಾಣಿಕೆ ಸೌಲಭ್ಯವನ್ನು 2021ರ ಮಾರ್ಚ್ 31ರವರೆಗೂ ವಿಸ್ತರಿಸುವಂತೆ ಆರ್‌ಬಿಐಗೆ ಕೇಳಲಾಗಿದೆ. ಈ ವಲಯಕ್ಕೆ ಆ್ಯಪ್ ಆಧಾರಿತ ಸಾಲ ನೀಡುವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ತ್ವರಿತವಾಗಿ ಸಾಲ ಸಿಗಲಿದೆ. ಈ ವಲಯವು ದುಡಿಯುವ ಬಂಡವಾಳದ ಸಮಸ್ಯೆ ಎದುರಿಸುತ್ತಿದೆ. ಇದನ್ನು ಪರಿಹರಿಸಲು ಉದ್ಯಮಿಗಳಿಗೆ ಖಾತರಿರಹಿತ ಸಾಲ ಒದಗಿಸುವ ಯೋಜನೆಯನ್ನು ಸರ್ಕಾರ ಪರಿಚಯಿಸಲಿದೆ.
ಮುದ್ರಣ ಕಾಗದ: ಸುಂಕ ಇಳಿಕೆ
‘ಮುದ್ರಣಕಾಗದದ ಮೇಲಿನ ಆಮದು ಸುಂಕವನ್ನು ಶೇ 10 ರಿಂದ ಶೇ 5ಕ್ಕೆ ಇಳಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಮುದ್ರಣ ಮಾಧ್ಯಮವು ಸಂಕಷ್ಟದ ಸ್ಥಿತಿಯಲ್ಲಿದ್ದು, ಆಮದು ಸುಂಕವು ಹೆಚ್ಚುವರಿ ಹೊರೆಯಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಹೀಗಾಗಿ ಸುಂಕ ತಗ್ಗಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ. ಆಮದು ಸುಂಕ ಕೈಬಿಡುವ ಮೂಲಕ ಮುದ್ರಣ ಮಾಧ್ಯಮವನ್ನು ರಕ್ಷಿಸುವಂತೆ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.