ADVERTISEMENT

ಕೇಂದ್ರ ಬಜೆಟ್| ಭಾರತದ ಆಕಾಂಕ್ಷೆ: ಜನರ ಆದಾಯ, ಖರೀದಿ ಶಕ್ತಿ ವೃದ್ಧಿ ಗುರಿ

ಏಜೆನ್ಸೀಸ್
Published 1 ಫೆಬ್ರುವರಿ 2020, 7:16 IST
Last Updated 1 ಫೆಬ್ರುವರಿ 2020, 7:16 IST
   

ನವದೆಹಲಿ: ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಈ ಬಾರಿಯ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮೂರು ಸೂತ್ರಗಳ ಮೂಲಕ ಬಜೆಟ್‌ ಮಂಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಎರಡನೇ ಬಾರಿ ಬಜೆಟ್‌ ಮಂಡಿಸಿದರು.

ಭಾರತದ ಆಕಾಂಕ್ಷೆಗಾಗಿ ಬಜೆಟ್‌ , ಆರ್ಥಿಕ ಪ್ರಗತಿಗಾಗಿ ಬಜೆಟ್‌ ಹಾಗೂ ಸಾಮಾಜಿಕ ಕಾಳಜಿಗಾಗಿ ಬಜೆಟ್‌ ಎಂಬ ಪ್ರಮುಖ ಮೂರು ಸೂತ್ರಗಳಿಂದಲೇ ಬಜೆಟ್‌–2020 ಅನ್ನು ರೂಪಿಸಲಾಗಿದೆ ಎಂದು ಹೇಳಿದರು.

ADVERTISEMENT

ಮೇರಾ ವತನ್‌.. ಎಂಬ ಕಾಶ್ಮೀರಿ ಕಾವ್ಯದಿಂದ ಸಾಲುಗಳನ್ನು ಉಲ್ಲೇಖಿಸಿ ದೇಶದ ಆಕಾಂಕ್ಷೆಯ ಕುರಿತು ಮಾತನಾಡಿದ ವಿತ್ತ ಸಚಿವೆ, ‘ಎಲ್ಲರ ಜೊತೆಗೆ, ಎಲ್ಲರ ವಿಕಾಸ‘ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರವನ್ನೇ ಪುನರ್‌ ಉಚ್ಚರಿಸಿದರು.

ಭಾರತದ ಆಕಾಂಕ್ಷೆ ಎಂಬ ಮೊದಲನೇ ಸೂತ್ರದಲ್ಲಿ ಗ್ರಾಮೀಣ ಅಭಿವೃದ್ಧಿ, ಜಲ ನಿರ್ವಹಣೆ, ನೈರ್ಮಲ್ಯ ಮತ್ತು ಶಿಕ್ಷಣದ ಕುರಿತು ಮಾತನಾಡಿದರು.

‘ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದೊಂದಿಗೆ ಸರ್ಕಾರ ಕೆಲಸ ಮಾಡಿತು. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ಬಿಡುಗಡೆ ಮಾಡಿ, ಮಾರುಕಟ್ಟೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದೆವು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನಾ ಸೇರಿದಂತೆ ಹಲವು ಯೋಜನೆಗಳ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಪ್ರಯತ್ನಿಸಿದೆವು.

ನೇರ ನಗದು ವರ್ಗಾವಣೆಯಿಂದ ಜನರಿಗೆ ಲಾಭವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಆರೋಗ್ಯ ವಿಮೆ, ಅಪಘಾತ ವಿಮೆ, ಯುಪಿಐ, ಪೇಮೆಂಟ್ ಗೇಟ್‌ ವೇ, ವಸತಿ ಯೋಜನೆ ಸೇರಿದಂತೆ ಹಲವು ಸಮಾಜ ಕಲ್ಯಾಣ ಯೋಜನೆಗಳು ಜನರಿಗೆ ತಲುಪಿವೆ. ಜನರ ಆದಾಯ ಮತ್ತು ಖರೀದಿ ಶಕ್ತಿಯನ್ನು ವೃದ್ಧಿಸುವ ಗುರಿಯನ್ನು ಈ ಬಾರಿಯ ಬಜೆಟ್‌ ಹೊಂದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.