ADVERTISEMENT

ಬಂಡವಾಳ ಮಾರುಕಟ್ಟೆ: ಯೌವನದಲ್ಲಿ ಮಾಡುವ ಹಣಕಾಸಿನ ಆರು ತಪ್ಪುಗಳು

ಅವಿನಾಶ್ ಕೆ.ಟಿ
Published 8 ನವೆಂಬರ್ 2021, 2:02 IST
Last Updated 8 ನವೆಂಬರ್ 2021, 2:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೆಲಸಕ್ಕೆ ಸೇರಿದ ನಂತರದಲ್ಲಿ, ಮೊದಲ ಸಂಬಳ ಸಿಕ್ಕಾಗ ಬಹುತೇಕರಿಗೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ಅಂದಾಜು ಇರುವುದಿಲ್ಲ. ನಮ್ಮ ಶಾಲೆ, ಕಾಲೇಜು ಶಿಕ್ಷಣವು ಹಣಕಾಸು ನಿರ್ವಹಣೆಯ ಬಗ್ಗೆ ತಿಳಿಸಿಕೊಡದ ಕಾರಣ ಅನೇಕ ಯುವಕರು ಹಣಕಾಸು ನಿರ್ವಹಣೆಯಲ್ಲಿ ಎಡವುತ್ತಾರೆ, ಅರಿತೋ, ಅರಿಯದೆಯೋ ಅನೇಕ ತಪ್ಪುಗಳನ್ನು ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ತಾರುಣ್ಯದಲ್ಲಿ ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಮಾಡಬಾರದಾದ ಆರು ತಪ್ಪುಗಳ ಮೇಲೊಂದು ನೋಟ ಹರಿಸೋಣ.

1. ತೋರಿಕೆಯ ಶ್ರೀಮಂತಿಕೆಯಿಂದ ದೂರವಿರಿ: ‘ನೀವು ಶ್ರೀಮಂತರು ಎಂದು ತೋರಿಸಿಕೊಳ್ಳುವ ಸಲುವಾಗಿ ಮಾಡುವ ಖರ್ಚು, ನಿಮ್ಮನ್ನು ಅತ್ಯಂತ ವೇಗವಾಗಿ ಬಡವರನ್ನಾಗಿಸುತ್ತದೆ’ ಎಂದು ‘ದಿ ಸೈಕಾಲಜಿ ಆಫ್ ಮನಿ’ ಪುಸ್ತಕದ ಲೇಖಕ ಮೋರ್ಗನ್ ಹೌಸೆಲ್ ಹೇಳುತ್ತಾರೆ. ಪಕ್ಕದ ಮನೆಯವರು ದುಬಾರಿ ಕಾರು ಖರೀದಿಸಿದರು, ಸ್ನೇಹಿತರು ಹೊಸ ಮೊಬೈಲ್ ಕೊಂಡರು ಎನ್ನುವ ಕಾರಣಕ್ಕೆ ಯಾವುದೋ ಹೊಸ ವಸ್ತುವಿನ ಖರೀದಿ ಮಾಡುತ್ತೀರಿ ಎಂದಾದಲ್ಲಿ ನೀವು ತೋರಿಕೆಯ ಶ್ರೀಮಂತಿಕೆಯ ಹಂಗಿನಲ್ಲಿದ್ದೀರಿ ಎನ್ನುವುದು ಖಚಿತ.

ಏನನ್ನಾದರೂ ಕೊಳ್ಳುವ ಮೊದಲು ನಮ್ಮ ಅಗತ್ಯ, ಆದ್ಯತೆ ಮತ್ತು ಆರ್ಥಿಕ ಪರಿಸ್ಥಿತಿಯ ಬಗೆಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರಬೇಕು. ಸಾಧ್ಯವಾದಷ್ಟು ಉಳಿತಾಯದಿಂದ ಮಾತ್ರ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು. ಕೊಳ್ಳುಬಾಕತನಕ್ಕೆ ಬಿದ್ದು, ಎಲ್ಲವನ್ನೂ ಮಾಸಿಕ ಕಂತುಗಳಲ್ಲಿ (ಇಎಂಐ) ಖರೀದಿಸಿ ನೆಮ್ಮದಿ ಕಳೆದುಕೊಳ್ಳಬಾರದು.

ADVERTISEMENT

2. ಒಂದೇ ಆದಾಯ ನೆಚ್ಚಿಕೊಳ್ಳಬೇಡಿ: ಬಹುತೇಕರು ಜೀವನ ನಿರ್ವಹಣೆಗಾಗಿ ಸಾಮಾನ್ಯವಾಗಿ ಒಂದೇ ಆದಾಯ ಮೂಲ ನೆಚ್ಚಿಕೊಂಡಿರುತ್ತಾರೆ. ಆದರೆ ಕೊರೊನಾ ಕಾಲವು, ಕೇವಲ ಒಂದೆರಡು ಆದಾಯ ಮೂಲಗಳನ್ನು ನಂಬಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಒತ್ತಿ ಹೇಳಿದೆ. ಯಾವುದೇ ಸಂಕಷ್ಟದ ಕಾಲದಲ್ಲೂ ನಮ್ಮ ಆರ್ಥಿಕ ಸ್ಥಿತಿ ಹಳಿತಪ್ಪದಂತೆ ಎಚ್ಚರ ವಹಿಸಲು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ. ಸಂಭಾವನೆ (Remuneration), ಸ್ವಂತ ವ್ಯವಹಾರದ ಆದಾಯ (Rate), ಬಾಡಿಗೆ ಆದಾಯ (Rent), ಹೂಡಿಕೆ ಮೇಲಿನ ಗಳಿಕೆ (Returns), ಹಕ್ಕುಸ್ವಾಮ್ಯ (Rights) ಮತ್ತು ಪುನರಾವರ್ತನೆ (Replication)... ಹೀಗೆ ಯಾವುದೇ ನಿರ್ದಿಷ್ಟ ಕ್ಷೇತ್ರದಲ್ಲಿ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಏಳು ಮಾರ್ಗಗಳಿವೆ.

ಅವುಗಳನ್ನು ಕಂಡುಕೊಂಡರೆ ನೀವು ಭವಿಷ್ಯದ ಆದಾಯದ ಬಗ್ಗೆ ಚಿಂತಿಸಬೇಕಿಲ್ಲ. ಡಿಜಿಟಲ್ ಯುಗದಲ್ಲಿ ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳುವುದಕ್ಕೆ ಹಲವು ಆಯ್ಕೆಗಳಿವೆ. ಉದಾಹರಣೆಗೆ ಬ್ಲಾಗ್ ಬರವಣಿಗೆ, ಕಂಟೆಂಟ್ ರೈಟಿಂಗ್, ವಿಡಿಯೋ ಸಂಕಲನ, ಡಿಜಿಟಲ್ ಮಾರ್ಕೆಟಿಂಗ್, ಯೂಟ್ಯೂಬ್ ಚಾನೆಲ್ ಆರಂಭಿಸುವುದು... ಹೀಗೆ ಅನೇಕ ಅವಕಾಶಗಳಿವೆ.

3. ಉಳಿತಾಯ, ಹೂಡಿಕೆಗಿಂತ ವಿಮೆ ಮುಖ್ಯ: ಬಹಳಷ್ಟು ಮಂದಿ 23ನೇ ವಯಸ್ಸಿಗೆ ಬರುವಷ್ಟರಲ್ಲಿ ಕೆಲಸಕ್ಕೆ ಸೇರಿರುತ್ತಾರೆ. ಆದರೆ ವರ್ಷಗಳೇ ಕಳೆದರೂ ಆರೋಗ್ಯ ವಿಮೆ ಮತ್ತು ಅವಧಿ ವಿಮೆ ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವೈಯಕ್ತಿಕ ಹಣಕಾಸು ಯೋಜನೆಯಲ್ಲಿ ಉಳಿತಾಯ ಮತ್ತು ಹೂಡಿಕೆಗಿಂತ ಮುಖ್ಯವಾದದ್ದು ಸುರಕ್ಷತೆ. ಹಾಗಾಗಿ ವಿಮೆ ಬಹಳ ಮುಖ್ಯ. ಕೆಲಸಕ್ಕೆ ಸೇರಿದ ಕೂಡಲೇ ಒಂದು ಆರೋಗ್ಯ ವಿಮೆ ಮತ್ತು ಅವಧಿ ವಿಮೆ ಪಡೆದುಕೊಳ್ಳುವುದು ಉತ್ತಮ. ಅನಾರೋಗ್ಯ ಉಂಟಾದಾಗ, ಕಷ್ಟಪಟ್ಟು ದುಡಿದ ದುಡ್ಡನ್ನೆಲ್ಲ ಆಸ್ಪತ್ರೆಗೆ ಸುರಿಯುವ ಬದಲು, ಗಳಿಸಿದ ಹಣದಲ್ಲಿ ಸಣ್ಣ ಪ್ರಮಾಣದ ಹಣವನ್ನು ಆರೋಗ್ಯ ವಿಮೆಗೆ ವ್ಯಯಿಸುವುದು ಜಾಣತನ. ‌

ಕುಟುಂಬಕ್ಕೆ ಆಧಾರವಾಗಿ ನೀವು ದುಡಿಯುತ್ತಿರುತ್ತೀರಿ ಎಂದಿಟ್ಟುಕೊಳ್ಳಿ. ಆಕಸ್ಮಿಕವಾಗಿ ನಿಮ್ಮ ಜೀವಕ್ಕೆ ತೊಂದರೆಯಾದರೆ ಪರಿಹಾರವೇನು? ನೀವು ಮಾಡಿರುವ ಸಾಲಗಳನ್ನು ತೀರಿಸುವುದು ಹೇಗೆ? ಇಂತಹ ಪ್ರಶ್ನೆಗೆ ಉತ್ತರ ಅವಧಿ ವಿಮೆ. ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ‘ಅವಧಿ ವಿಮೆ’ ಒಳಗೊಂಡಿರುತ್ತದೆ. ನಿಮ್ಮ ವಾರ್ಷಿಕ ಆದಾಯದ 15ರಿಂದ 20 ಪಟ್ಟು ಮೊತ್ತದಷ್ಟು ಕವರೇಜ್ ನೀಡುವ ಅವಧಿ ವಿಮೆ ಖರೀದಿ ಮಾಡಿದರೆ ಒಳಿತು. ನೆನಪಿಡಿ ಆರೋಗ್ಯ ವಿಮೆ ಮತ್ತು ಅವಧಿ ವಿಮೆ ಪಡೆಯುವ ಮುನ್ನ ಸಾಕಷ್ಟು ವಿಚಾರ ಮಾಡಿ ಮುಂದುವರಿಯಿರಿ.

4. ತುರ್ತು ನಿಧಿ ನಿಮ್ಮ ಆಪ್ತಮಿತ್ರ: ವೈದ್ಯಕೀಯ ತುರ್ತು, ಉದ್ಯೋಗ ನಷ್ಟ, ಉದ್ಯಮ ನಷ್ಟ ಹೀಗೆ ಅನೇಕ ಕಾರಣಗಳಿಂದ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವುದು ಸರ್ವೇ ಸಾಮಾನ್ಯ. ಇಂತಹ ಅನಿರೀಕ್ಷಿತ ಸಂದರ್ಭಗಳಿಗಾಗಿ ತುರ್ತು ನಿಧಿ ಅಂದರೆ ಎಮರ್ಜೆನ್ಸಿ ಫಂಡ್ ಅಗತ್ಯ. ಆದರೆ ಕೆಲಸಕ್ಕೆ ಸೇರಿದ ಹೊಸದರಲ್ಲಿ ಅನೇಕರಿಗೆ ತುರ್ತು ನಿಧಿಯ ಕಲ್ಪನೆಯೇ ಇರುವುದಿಲ್ಲ. ಬಂದ ಆದಾಯಕ್ಕೆಲ್ಲ ಖರ್ಚಿನ ದಾರಿ ತೋರಿಸಲು ಉತ್ಸುಕರಾಗಿರುತ್ತಾರೆ. ತುರ್ತು ನಿಧಿಯು ಕಷ್ಟಕಾಲದಲ್ಲಿ ನಮ್ಮನ್ನು ಕಾಪಾಡುವ ಜತೆಗೆ, ಹೂಡಿಕೆಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಒದಗಿಸಿಕೊಡುತ್ತದೆ. ಕನಿಷ್ಠ ಆರು ತಿಂಗಳ ವೇತನವನ್ನು ತುರ್ತು ನಿಧಿಯಲ್ಲಿ ಇಟ್ಟುಕೊಳ್ಳುವುದು ಒಳಿತು. ಸ್ವಂತ ಉದ್ಯೋಗ ಹೊಂದಿರುವವರು ಕನಿಷ್ಠ 12 ತಿಂಗಳ ಆದಾಯವನ್ನು ತುರ್ತು ನಿಧಿಗೆ ಮೀಸಲಿಡಬಹುದು.

5. ಉಳಿತಾಯ ಮಾಡಿದ ನಂತರ ಖರ್ಚು ಮಾಡಿ: ಉಳಿತಾಯ ಒಂದು ಮನಃಸ್ಥಿತಿ. ಹೆಚ್ಚು ಆದಾಯ ಇರುವವರು ಮಾತ್ರ ಉಳಿತಾಯ ಮಾಡಬಹುದು ಎನ್ನುವುದು ಒಪ್ಪುವ ಮಾತಲ್ಲ. ಖರ್ಚು ಮಾಡುವುದಕ್ಕೆ ಶಾಪಿಂಗ್, ಸಿನಿಮಾ ಅಂತ ನಾವೆಲ್ಲರೂ ಆಲೋಚನೆ ಮಾಡುತ್ತೇವೆ. ಆದರೆ ಉಳಿತಾಯಕ್ಕೆ ನಾವೆಂದೂ ಪ್ಲಾನ್ ಮಾಡುವುದೇ ಇಲ್ಲ. ಆದಾಯ – ಉಳಿತಾಯ = ಖರ್ಚು ಎನ್ನುವ ಲೆಕ್ಕಾಚಾರ ನಿಮ್ಮದಾಗಲಿ.

6. ಹಣಕಾಸು ಶಿಕ್ಷಣ ಕಡೆಗಣಿಸಬೇಡಿ: ದುಡಿಮೆಯ ನಂತರದಲ್ಲಿ ನಮ್ಮ ಗಳಿಕೆಯನ್ನು ಸುರಕ್ಷಿತವಾಗಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸಲು ಹಣಕಾಸು ಶಿಕ್ಷಣ ಬಹಳ ಮುಖ್ಯ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಣಕಾಸು ನಿರ್ವಹಣೆಯ ಬಗ್ಗೆ ಸರಿಯಾದ ಕಲಿಕೆ ಇಲ್ಲದಿರುವುದು ಕೂಡ ಹಲವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ದುಡಿದ ದುಡ್ಡನ್ನು ಉಳಿಸಿ, ಬೆಳೆಸಬೇಕಾದರೆ 18-20ನೇ ವಯಸ್ಸಿಗೆ ಹಣಕಾಸು ನಿರ್ವಹಣೆ ಬಗ್ಗೆ ಕಲಿತುಕೊಳ್ಳಲು ಶುರು ಮಾಡಬೇಕು. ವಿವಿಧ ಮಾದರಿ ಹೂಡಿಕೆಗಳ ಬಗ್ಗೆ ತಿಳಿದುಕೊಳ್ಳುವ ಜತೆಗೆ, ಸಾಲ ನಿರ್ವಹಣೆ, ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ ಹೂಡಿಕೆಗಳ ಬಗ್ಗೆಯೂ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಸಂಪತ್ತು ಹೆಚ್ಚಿಸಿಕೊಳ್ಳಲು ಸಾಧ್ಯ. ಕಲಿಕೆಯಿಲ್ಲದೆ ಗಳಿಕೆಯಿಲ್ಲ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

ಗೂಳಿ ಓಟದಲ್ಲಿ ನೀವು ಮುಗ್ಗರಿಸಬಹುದು ಜೋಕೆ!

ಷೇರು ಮಾರುಕಟ್ಟೆಯಲ್ಲಿ ಏರಿಳಿತದ ಹಾದಿ ಮುಂದುವರಿದಿದ್ದರೂ ಹೂಡಿಕೆದಾರರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಈಗಾಗಲೇ ಹೂಡಿಕೆ ಮಾಡಿ ಭರ್ಜರಿ ಲಾಭ ಗಳಿಸಿರುವವರು, ಷೇರುಪೇಟೆಯಲ್ಲಿ ಮತ್ತದೇ ಮಾದರಿಯ ಉತ್ತಮ ಗಳಿಕೆ ಪುನರಾವರ್ತನೆಯಾಗಲಿದೆ ಎಂಬ ಅಂದಾಜಿನಲ್ಲಿದ್ದಾರೆ. ಸ್ನೇಹಿತರು, ಸಂಬಂಧಿಕರಿಂದ ಗೂಳಿ ಓಟದ ಆಶಾವಾದದ ಕಥೆ ಕೇಳಿರುವ ಹೊಸ ಹೂಡಿಕೆದಾರರು ಷೇರುಪೇಟೆಗೆ ಜಿಗಿದು ಲಾಭಗಳಿಸಲು ಉತ್ಸುಕರಾಗಿದ್ದಾರೆ. ಆದರೆ, ನಾಗಾಲೋಟದಲ್ಲಿ ಸಾಗಿರುವ ಗೂಳಿ ಮುಗ್ಗರಿಸಲೂಬಹುದು ಎನ್ನುವ ಎಚ್ಚರಿಕೆ ಹೂಡಿಕೆದಾರರಿಗೆ ಬಹಳ ಮುಖ್ಯ.

ಹೆಚ್ಚೆಚ್ಚು ಐಪಿಒಗಳು, ಹೊಸ ಮ್ಯೂಚುವಲ್ ಫಂಡ್ ಆಫರ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದರೆ ಅದು ಮಾರುಕಟ್ಟೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಬೆಳವಣಿಗೆ ಸಾಧಿಸಿದೆ ಎನ್ನುವುದರ ಸೂಚನೆ. ಅತಿಯಾದ ಮೌಲ್ಯ ಹೆಚ್ಚಳ ಕಂಡಿರುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ಇರಬೇಕು. ಮೂಲಭೂತ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬಹುತೇಕ ಷೇರುಗಳನ್ನು ಗಮನಿಸಿದಾಗ ಅವುಗಳ ‘ಆಂತರಿಕ ಮೌಲ್ಯಕ್ಕಿಂತ ಮಾರುಕಟ್ಟೆ ಬೆಲೆಯೇ ಹೆಚ್ಚಳವಾಗಿದೆ, ಹೀಗಿರುವಾಗ ಹೂಡಿಕೆದಾರರು ಹೆಚ್ಚು ಬೆಲೆಗೆ ಷೇರು ಖರೀದಿಸಿ ಮುಂದೆ ಲಾಭ ಗಳಿಸಿವುದು ಸಾಧ್ಯವೇ’ ಎಂಬ ಪ್ರಶ್ನೆ ಮೂಡಬಹುದು.

ಮಾರುಕಟ್ಟೆ ಯಾವಾಗ ಗಣನೀಯ ಪ್ರಮಾಣದಲ್ಲಿ ಬೀಳುತ್ತದೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮಾರುಕಟ್ಟೆಯಲ್ಲಿ ಈಗಾಗಲೇ ಅಲ್ಪ ಪ್ರಮಾಣದ ಕುಸಿತ ಕಾಣಿಸಿಕೊಳ್ಳುತ್ತಿರುವುದಂತೂ ಸತ್ಯ. ಮಾರುಕಟ್ಟೆ ಕುಸಿಯುತ್ತಿದೆ ಎಂದಾಕ್ಷಣ ಇರುವ ಷೇರುಗಳನ್ನೆಲ್ಲಾ ಮಾರಾಟ ಮಾಡಿ ಹೊರಬರಬೇಕಾಗಿಲ್ಲ. ಉತ್ತಮ ಭವಿಷ್ಯವಿರುವ ಕಂಪನಿಯ ಷೇರುಗಳನ್ನು ಸರಿಯಾದ ಬೆಲೆಯಲ್ಲಿ ದೀರ್ಘಾವಧಿಗೆ ಖರೀದಿಸಿದ್ದರೆ ಆತಂಕಪಡುವ ಆಗತ್ಯವಿಲ್ಲ.

ಷೇರುಪೇಟೆಯಲ್ಲಿ ಏರಿಳಿತ ಎನ್ನುವುದು ಸಹಜ ಪ್ರಕ್ರಿಯೆ. ಹೂಸದಾಗಿ ಷೇರು ಮಾರುಕಟ್ಟೆ ಪ್ರವೇಶಿಸುವವರು ಹೆಚ್ಚು ಆಂತರಿಕ ಮೌಲ್ಯವಿರುವ ಕಡಿಮೆ ಬೆಲೆಗೆ ಸಿಗುತ್ತಿರುವ ಉತ್ತಮ ಷೇರುಗಳ ಖರೀದಿ ಬಗ್ಗೆ ಆಲೋಚಿಸಬಹುದು. ಆದರೆ, ಮಾರುಕಟ್ಟೆಯನ್ನು ಗಮನಿಸಿಕೊಂಡು ಹೂಡಿಕೆ ಮೊತ್ತವನ್ನು ನಾಲ್ಕೈದು ಭಾಗಗಳನ್ನಾಗಿ ವಿಂಗಡಿಸಿಕೊಂಡು ಹಂತ ಹಂತವಾಗಿ ಹೂಡಿಕೆ ಮಾಡುವುದು ಒಳಿತು.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.